Namma Metro: ತಾಯಂದಿರಿಗೆ ಗುಡ್‌ನ್ಯೂಸ್, 5 ನಿಲ್ದಾಣಗಳಲ್ಲಿ ಶಿಶು ಆಹಾರ ಕೇಂದ್ರ, ಎಲ್ಲೆಲ್ಲಿ?
ಬೆಂಗಳೂರು, ಜನವರಿ 19: ಬೆಂಗಳೂರು ನಮ್ಮ ಮೆಟ್ರೋ ಟ್ರಿನಿಟಿ ನಿಲ್ದಾಣದಲ್ಲಿ ತಾಯಿಯೊಬ್ಬರು ತಮ್ಮ ಮಗುವಿಗೆ ಹಾಲುಣಿಸಲು ಶಿಶು ಆಹಾರ ಕೇಂದ್ರ ಇಲ್ಲದೇ ಪರದಾಡಿದ ಘಟನೆಯ ವಿಡಿಯೋ ವೈರಲ್ ಆಗಿತ್ತು. ಇದಾದ ಬಳಿಕ ಬಿಎಂಟಿಸಿ, ಇತರ ಬಸ್ ನಿಲ್ದಾಣಗಳಂತೆ ಕೇಂದ್ರಗಳನ್ನು ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಸ್ಥಾಪಿಸುವಂತೆ ಆಗ್ರಹಿಸಲಾಗಿದೆ. ಈ ಬೇಡಿಕೆಗೆ ಸ್ಪಂದಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಐದು ನಿಲ್ದಾಣಗಳಲ್ಲಿ ಈ ಕೇಂದ್ರಗಳನ್ನು ಸ್ಥಾಪನೆ ಮಾಡಿದೆ. ಎಲ್ಲೆಲ್ಲಿ, ವಿವರ ಹೀಗಿದೆ.
ಬೆಂಗಳೂರು ಮೆಟ್ರೋದಲ್ಲಿ ಓಡಾಡುವ ತಾಯಂದಿರಿಗೆ ಸುರಕ್ಷಿತ ಹಾಗೂ ವ್ಯವಸ್ಥಿತ ಖಾಸಗಿ ಸ್ಥಳಗಳನ್ನು ಒದಗಿಸುವ ಸಂಬಂಧ ಐದು ಕಡೆ ಶಿಶು ಆಹಾರ ಕೇಂದ್ರ ಸ್ಥಾಪಿಸಿದೆ. ಹಾಲುಣಿಸುವ ತಾಯಂದಿರಿಗೆ ಆಸರೆಯಾಗಿದೆ. ಸರ್ಕಾರೇತರ ಸಂಸ್ಥೆ ಸಿಬ್ಡಿ ಸ್ವಾವಲಂಬನ್ ಫೌಂಡೇಶನ್ ಮತ್ತು ಚೈಲ್ಡ್ ಹೆಲ್ಪ್ ಫೌಂಡೇಶನ್ ಸಹಕಾರದಲ್ಲಿ ಇತ್ತೀಚೆಗೆ 05ನೇ ಶಿಶು ಆಹಾರ ಕೇಂದ್ರವನ್ನು ನಗರದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಸ್ಥಾಪಿಸಲಾಗಿದೆ ಎಂದು 'ಡಿಎಚ್' ವರದಿ ಮಾಡಿದೆ.

ಮೆಟ್ರೋ ನಿಲ್ದಾಣದಂತಹ ಸಾರ್ವಜನಿಕ ಸ್ಥಳದಲ್ಲಿ ಇಂತಹ ಖಾಸಗಿ ಸ್ಥಳಗಳು ತಾಯಂದಿರಿಗೆ ತಮ್ಮ ಮಕ್ಕಳಿಗೆ ಹಾಲುಣಿಸಲು ಸಹಾಯಕ್ಕೆ ಬರುತ್ತವೆ. ಹಾಲುಣಿಸುವಾಗಿ ಎದುರಾಗುತ್ತಿದ್ದ ಸಮಸ್ಯೆಗಳನ್ನು ಈ ಕೇಂದ್ರಗಳು ತೊಡೆದುಹಾಕುತ್ತವೆ. ಮೆಟ್ರೋ ಸಿಬ್ಬಂದಿಯೇ ಸ್ವಚ್ಛ, ಉತ್ತಮವಾಗಿ ಇವುಗಳನ್ನು ರ್ನಿಹಿಸುತ್ತಿದ್ದಾರೆ.
ಯಾವೆಲ್ಲ ನಿಲ್ದಾಣಗಳಲ್ಲಿ ನಿರ್ಮಾಣ
ನಗರದ ಮೆಜೆಸ್ಟಿಕ್, ಯಶವಂತಪುರ, ಕೆಂಗೇರಿ, ಯಲಚೇನಹಳ್ಳಿ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳಲ್ಲಿ ಶಿಶು ಆಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಗರದ ಇತರ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಈ ಕೇಂದ್ರ ಸ್ಥಾಪನೆಗಾಗಿ ಚಿಂತನೆ ನಡೆಸಲಾಗಿದೆ. ಈ ಕೇಂದ್ರಗಳ ನಿರ್ವಹಣೆಯನ್ನು ನಾವೇ ನೋಡಿಕೊಳ್ಳುತ್ತಿದ್ದೇವೆ. ಎಲ್ಲ ನಿಲ್ದಾಣಗಳಿಗೆ ಕೇಂದ್ರ ವಿಸ್ತರಣೆಗೆ ಕ್ರಮ ವಹಿಸಲಾಗುವುದು. ಅದರ ವೆಚ್ಚಗಳ ಲೆಕ್ಕಾಚಾರ ಹಾಕಲಾಗುತ್ತಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಿಶಿ ಆಹಾರ ಕೇಂದ್ರಗಳು ಹೇಗಿವೆ?
ಮೆಟ್ರೋ ನಿಲ್ದಾಣಗಳಲ್ಲಿ ಸ್ಥಾಪನೆಯಾದ ಈ ಆಹಾರ ಕೇಂದ್ರಗಳು 8 ಅಡಿ ಉದ್ದ ಅಷ್ಟೇ ಅಡಿ ಅಗಲದ ಕೋಣೆಯಾಗಿವೆ. ವಿಶಾಲವಾದ ಬೆಂಚು ಹಾಕಲಾಗಿದೆ. ಒಂದೇ ಬಾರಿಗೆ ನಾಲ್ಕು ಮಂದಿ ತಾಯಂದಿರು ಒಳಗೆ ಇರುವಷ್ಟು ವಿಶಾಲವಾಗಿದೆ. ವಿದ್ಯುತ್ ವ್ಯವಸ್ಥೆ ಇದೆ. ಬೆಂಚುಗಳ ಮೇಲೆ ಮಲಗಬಹುದು. ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ತಾಯಂದರಿ ಖಾಸಗಿ ಸ್ಥಳಕ್ಕೆ ಸೂಕ್ತವಾಗಿ ನಿರ್ಮಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ವಿವರಿಸಿದೆ.
ತುರ್ತು ವೇಳೆ ನಾನು ಇಲ್ಲಿನ ಆಹಾರ ಕೇಂದ್ರ ಬಳಸಿದ್ದು, ವ್ಯವಸ್ಥಿತವಾಗಿದೆ. ಪ್ರಯಾಣದ ವೇಳೆ ತಾಯಂದಿರಿಗೆ ಈ ಕೆಂದ್ರ ಹೆಚ್ಚು ಸಹಕಾರಿಯಾಗಿದೆ ಎಂದು ಬೈಯಪ್ಪನಹಳ್ಳಿ ಶಿಶು ಆಹಾರ ಕೇಂದ್ರ ಬಳಿಸದ ತಾಯಿಯೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ಆದ ತಾಯಿಯ ಪರದಾಟದ ವಿಡಿಯೋ ವೈರಲ್ ಆಗುತ್ತಿದ್ದಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು BMRCLಗೆ ಪತ್ರ ಬರೆದಿದ್ದರು. ಆದಷ್ಟು ಶೀಘ್ರವೇ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ತಾಯಂದಿರ ಆರೈಕೆ ಕೇಂದ್ರ ಸ್ಥಾಪಿಸಲು ಒತ್ತಾಯಿಸಿದ್ದರು.












Click it and Unblock the Notifications