Namma Metro: 3ನೇ ಹಂತದ ಯೋಜನೆ ಅಪ್ಡೇಟ್, ಜಿಯೋಟೆಕ್ನಿಕಲ್ ಸರ್ವೇ ಆರಂಭ
ಬೆಂಗಳೂರು, ಅಕ್ಟೋಬರ್ 01: ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ನಮ್ಮ ಮೆಟ್ರೋ 3ನೇ ಹಂತದ ಯೋಜನೆ ಆರಂಭಕ್ಕೆ ಸಜ್ಜಾಗಿದೆ. ಬಹುಕೋಟಿಯ ಈ ಮೆಟ್ರೋ ಯೋಜನೆಗೆ ಇದೇ ವರ್ಷಾರಂಭದಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ನಗರದ ಮಟ್ಟಿಗೆ ಇದೊಂದು ಮಹತ್ವದ ಸಾರಿಗೆ ಯೋಜನೆಯಾಗಿದೆ. ಇದರ ಆರಂಭಕ್ಕೆ ಜಿಯೋಟೆಕ್ನಿಕಲ್ ಸಮೀಕ್ಷೆ ಇದೀಗ ಆರಂಭಿಸಲಾಗಿದೆ.
ಮೂರು ಕಾರಿಡಾರ್ ಹಂತಗಳಲ್ಲಿ ಈ ಮೆಟ್ರೋ ಮೂರನೇ ಹಂತದ ಯೋಜನೆ ಸಾಕಾರಗೊಳಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಈಗಾಗಲೇ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆಯಿಂದ ಅನುಮೋದನೆ ಸಿಕ್ಕಿದೆ. ಬರೋಬ್ಬರಿ 15,611 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಯೋಜನೆ ಆರಂಭಕ್ಕೆ ದಿನಗಣೆ ಶುರುವಾಗಿದೆ. ಈ ವೆಚ್ಚದಲ್ಲಿ ರಾಜ್ಯ ಸರ್ಕಾರವು ಶೇಕಡಾ 80 ರಿಂದ 85 ರಷ್ಟು ಹಾಗೂ ಉಳಿದ ಹಣವನ್ನು ಕೇಂದ್ರ ಸರ್ಕಾರ ಒದಗಿಸಲಿದೆ.

ಮೆಟ್ರೋ ಜಾಲ 220 ಕಿಮೀ ವಿಸ್ತರಣೆ
ನಮ್ಮ ಮೆಟ್ರೋ ಮೂರನೇ ಹಂತ ವಿಸ್ತರಣಾ ಯೋಜನೆ ಬೆಂಗಳೂರು ಸಂಚಾರ ದಟ್ಟಣೆ ನಿರ್ವಹಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಯೋಜನೆ ಮೂಲಕ ನಮ್ಮ ಮೆಟ್ರೋ ಜಾಲವನ್ನು ಒಟ್ಟು 220 ಕಿಲೋ ಮೀಟರ್‌ವರೆಗೆ ವಿಸ್ತರಣೆ ಮಾಡುವ ಉದ್ದೇಶ ಇದೆ ಎಂದು BMRCL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಯೋಜನೆಯಡಿ ಮಾಗಡಿ ರಸ್ತೆಯಲ್ಲಿ ಆರಂಭವಾಗಲಿರುವ ಮಾರ್ಗಕ್ಕೆ 'ಆರೆಂಜ್ ಲೈನ್' (Namma Metro Yellow Line) ಎಂದು ಹೆಸರಿಡಲಾಗಿದೆ. ಇದೀಗ ಇಲ್ಲಿಂದಲೇ ಜಿಯೋಟೆಕ್ನಿಕಲ್ ಸರ್ವೇಯನ್ನು ಅಧಿಕಾರಿಗಳು ಆರಂಭಿಸಿದ್ದಾರೆ. ಈ ಯೋಜನೆಯಡಿ ಎರಡು ಹೊಸ ಎಲಿವೇಟೆಡ್ ಮೆಟ್ರೋ ಮಾರ್ಗಗಳು ಪರಿಚಯಗೊಳ್ಳಲಿವೆ.

ನಗರದ ಹೃದಯ ಭಾಗದಲ್ಲಿ ಮೆಟ್ರೋ ಮಾರ್ಗ
ಯೋಜನೆ ಒಂದು ಲೈನ ಜೆಪಿ ನಗರ 4 ನೇ ಹಂತದಿಂದ ಕೆಂಪಾಪುರವರೆಗೆ 32.5 ಕಿಲೋಮೀಟರ್ ಸಂಪರ್ಕ ಸಾಧಿಸಲಿದೆ. ಈ ಲೈನ್‌ನಲ್ಲಿ ಒಟ್ಟು 21 ನಿಲ್ದಾಣಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇನ್ನೂ ಎರಡನೇ ಕಾರಿಡಾರ್ ಮಾಗಡಿ ರಸ್ತೆಯ ಹೊಸಹಳ್ಳಿಯಿಂದ ಕಡಬಗೆರೆವರೆಗೆ ಒಟ್ಟು 12.5 ಕಿಲೋಮೀಟರ್ ವರೆಗೆ ನಿರ್ಮಾಣವಾಗಲಿದೆ. ಇವೆರಡು ನಗರದ ಹೃದಯಭಾಗದಲ್ಲಿ ನಿರ್ಮಾಣಗೊಳ್ಳಿವೆ. ಇದರಿಂದ ಸಂಚಾರ ದಟ್ಟಣೆ ಇಳಿಕೆ ಆಗುವ ಸಾಧ್ಯತೆ ಇದೆ.
ಕೋಟಿ ವೆಚ್ಚದಲ್ಲಿ ಭೌಗೋಳಿಕ ಸರ್ವೆ
ಒಟ್ಟು 6 ಕೋಟಿ ರೂಪಾಯಿ ಮೌಲ್ಯದಲ್ಲಿ ಜಿಯೋಟೆಕ್ನಿಕಲ್ ಸಮೀಕ್ಷೆ ಆರಂಭವಾಗಿದೆ. ಇದರಡಿ ಕಾಮಗಾರಿಗೆ ಮಣ್ಣಿನ ಸ್ಥಿರತೆ ಮತ್ತು ಕಲ್ಲಿನ ರಚನೆ, ಸಿವಿಲ್ ಕಾಮಗಾರಿಗೆ ಎದುರಾಗುವ ಸಮಸ್ಯೆಗಳು ಸೇರಿದಂತೆ ಅನೇಕ ವಿಷಯಗಳ ಕುರಿತು ಸಂಶೋಧಣೆ ನಡೆಸಲಾಗುತ್ತದೆ. ಕಾಮಗಾರಿಗಾಗಿ ಒಟ್ಟಾರೆ ಭೌಗೋಳಿಕ ಸಮೀಕ್ಷೆ ಇದಾಗಿದೆ. ಈ ಸಮೀಕ್ಷೆಯಲ್ಲಿ ಸುರಕ್ಷತೆ ಖಚಿತವಾಗುತ್ತಿದ್ದೆ. ಕಾಮಗಾರಿ ಆರಂಭವಾಗಲಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನೂ ಹೊರ ವರ್ತುಲ ರಸ್ತೆವರೆಗೆ ನಿರ್ಮಾಣಗೊಳ್ಳಿರುವ ಮೆಟ್ರೋ ಮಾರ್ಗಕ್ಕಾಗಿ 299 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಒಂದೊಂದಾಗಿ ಯೋಜನೆಯ ಆರಂಭಿಕ ಎಲ್ಲ ಕಾರ್ಯಗಳು ಶುರುವಾಗಿವೆ.












Click it and Unblock the Notifications