Namma Metro: ಅಕ್ಟೋಬರ್‌ನಲ್ಲಿ ನಮ್ಮ ಮೆಟ್ರೋ ವಿಸ್ತರಿತ ಮಾರ್ಗದಲ್ಲಿ ಸಂಚಾರ ಆರಂಭ

ಬೆಂಗಳೂರು, ಸೆಪ್ಟೆಂಬರ್ 14: ಉದ್ಯಾನ ನಗರಿ ಬೆಂಗಳೂರಿನ ಜನರಿಗೆ ಸಿಹಿಸುದ್ದಿಯೊಂದಿದೆ. ಅದರಲ್ಲೂ ತುಮಕೂರು ರಸ್ತೆ ಮೂಲಕ ನಗರಕ್ಕೆ ಆಗಮಿಸುವ ಜನರು ಈ ಸುದ್ದಿಯಿಂದ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಹಸಿರು ಮಾರ್ಗದ ವಿಸ್ತರಿತ ಯೋಜನೆಯ ವಾಣಿಜ್ಯ ಸಂಚಾರಕ್ಕೆ ಸುರಕ್ಷತಾ ಪ್ರಮಾಣ ಪತ್ರ ನೀಡಿ ಎಂದು ಮನವಿಯನ್ನು ಸಲ್ಲಿಕೆ ಮಾಡಿದೆ.

ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ರೇಷ್ಮೆ ಸಂಸ್ಥೆ ಮತ್ತು ನಾಗಸಂದ್ರ ನಡುವೆ ಮೆಟ್ರೋ ರೈಲು ಸಂಚಾರವನ್ನು ನಡೆಸುತ್ತಿದೆ. ಬಿಎಂಆರ್‌ಸಿಎಲ್ ಈ ಮಾರ್ಗದ ವಿಸ್ತರಿತ ಯೋಜನೆಯಾದ ನಾಗಸಂದ್ರ-ಮಾದಾವರ ನಡುವಿನ ಕಾಮಗಾರಿ ಪೂರ್ಣಗೊಳಿಸಿದೆ. ಪ್ರಾಯೋಗಿಕ ಸಂಚಾರವೂ ಮುಕ್ತಾಯವಾಗಿದೆ.

BMRCL Applies For Safety clearance For Green Line Extension

ಈ ವಿಸ್ತರಿತ ಮಾರ್ಗದ 3.7 ಕಿಲೋಮೀಟರ್‌ ಒಳಗೊಂಡಿದ್ದು, ಮೂರು ನಿಲ್ದಾಣಗಳಿವೆ. ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರ ಆರಂಭವಾದರೆ ತುಮಕೂರು ರಸ್ತೆಯಿಂದ ನಗರಕ್ಕೆ ಆಗಮಿಸುವ ವಾಹನ ಸವಾರರಿಗೆ ಅನುಕೂಲವಾಗಲಿದೆ. ಮಾರ್ಗದಲ್ಲಿ ಎಲ್ಲಾ ಪರೀಕ್ಷೆಗಳು ಪೂರ್ಣಗೊಂಡಿದ್ದು, ವಾಣಿಜ್ಯ ಸಂಚಾರಕ್ಕೆ ಸುರಕ್ಷತಾ ಪ್ರಮಾಣ ಪತ್ರವನ್ನು ನೀಡುವಂತೆ ಮೆಟ್ರೋ ರೈಲು ಸುರಕ್ಷತೆ ಆಯುಕ್ತರಿಗೆ ಬಿಎಂಆರ್‌ಸಿಎಲ್ ಮನವಿ ಸಲ್ಲಿಕೆ ಮಾಡಿದೆ.

ಒಟ್ಟು ಮೂರು ನಿಲ್ದಾಣಗಳು: ನಮ್ಮ ಮೆಟ್ರೋ ಯೋಜನೆಯ ಹಸಿರು ವಿಸ್ತರಿತ ಮಾರ್ಗ ನಾಗಸಂದ್ರ-ಮಾದಾವರ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ. ಈ ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ), ಮಾದವರ (ಬಿಐಇಸಿ) ಸೇರಿ ಮೂರು ನಿಲ್ದಾಣಗಳಿವೆ. ಬಾಕಿ ಇದ್ದ ಮಾದವರ ನಿಲ್ದಾಣದ ಕಾಮಗಾರಿಯೂ ಈಗ ಪೂರ್ಣಗೊಂಡಿದ್ದು, ಪ್ರಾಯೋಗಿಕ ಸಂಚಾರವೂ ಮುಗಿದಿದೆ. ರೈಲುಗಳ ವಾಣಿಜ್ಯ ಸಂಚಾರಕ್ಕೆ ಮುಖ್ಯವಾಗಿ ಸುರಕ್ಷತಾ ಪ್ರಮಾಣ ಪತ್ರ ಬೇಕಿದೆ.

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಈ ಕುರಿತು ಮಾತನಾಡಿದ್ದು, "ಎಲ್ಲಾ ಕಾಮಗಾರಿಗಳು ಮುಕ್ತಾಯಗೊಂಡಿದ್ದು, ಸುರಕ್ಷತಾ ಪ್ರಮಾಣ ಪತ್ರ ನೀಡುವ ಪರಿಶೀಲನೆ ಬಾಕಿ ಉಳಿದಿದೆ. ನಾವು ಪ್ರಮಾಣ ಪತ್ರಕ್ಕಾಗಿ ಮನವಿ ಮಾಡಿದ್ದೇವೆ. ನಾವು ಸಿವಿಲ್ ಕಾಮಗಾರಿ ಪೂರ್ಣಗೊಳಿಸಿದ್ದೇವೆ. ರೈಲು ಬೋಗಿಗಳ ಸಂಗ್ರಹವೂ ಇದೆ" ಎಂದು ಹೇಳಿದ್ದಾರೆ.

ಮಾಹಿತಿಗಳ ಪ್ರಕಾರ ಸೆಪ್ಟೆಂಬರ್ ಅಂತ್ಯದಲ್ಲಿ ನಾಗಸಂದ್ರ-ಮಾದವರ ಮಾರ್ಗದಲ್ಲಿ ಮೆಟ್ರೋ ರೈಲು ಸುರಕ್ಷತೆ ಆಯುಕ್ತರ ತಂಡ ಸುರಕ್ಷತಾ ಪರಿಶೀಲನೆಯನ್ನು ನಡೆಸಲಿದೆ. ಈ ಮಾರ್ಗದಲ್ಲಿ ಮೆಟ್ರೋ ರೈಲುಗಳ ವಾಣಿಜ್ಯ ಸಂಚಾರ ಅಕ್ಟೋಬರ್ ತಿಂಗಳ ಮಧ್ಯಭಾಗದಲ್ಲಿ ಆರಂಭವಾಗುವ ನಿರೀಕ್ಷೆ ಇದೆ.

ಆಗಸ್ಟ್ 12 ರಿಂದ 17ರ ತನಕ ಸಿಗ್ನಲಿಂಗ್ ಸೇರಿದಂತೆ ವಿವಿಧ ಪರೀಕ್ಷೆ, ರೈಲುಗಳ ಪ್ರಾಯೋಗಿಕ ಸಂಚಾರವನ್ನು ಬಿಎಂಆರ್‌ಸಿಎಲ್ ಪೂರ್ಣಗೊಳಿಸಿದೆ. ಈ 3.7 ಕಿಲೋಮೀಟರ್‌ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾದರೆ ನಗರದಲ್ಲಿ ನಮ್ಮ ಮೆಟ್ರೋ ಜಾಲ 76.95 ಕಿ. ಮೀ.ಗೆ ವಿಸ್ತರಣೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕರ್ನಾಟಕ ಸರ್ಕಾರ ತುಮಕೂರು ನಗರಕ್ಕೆ ಮೆಟ್ರೋ ಸಂಪರ್ಕವನ್ನು ಕಲ್ಪಿಸುವ ಚಿಂತನೆಯಲ್ಲಿದೆ. ಆದ್ದರಿಂದ ನಾಗಸಂದ್ರ-ಮಾದವರ ನಡುವಿನ ಮಾರ್ಗದ ರೈಲು ಸಂಚಾರ ಮಹತ್ವವನ್ನು ಪಡೆದುಕೊಂಡಿದೆ. ಈ ಮಾರ್ಗ ಸಂಚಾರಕ್ಕೆ ಮುಕ್ತವಾದರೆ ತುಮಕೂರಿಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಇನ್ನೂ 52.41 ಕಿ. ಮೀ. ಮಾರ್ಗವನ್ನು ನಿರ್ಮಾಣ ಮಾಡಬೇಕಿದೆ.

ಬಿಎಂಆರ್‌ಸಿಎಲ್ ಈ 3.7 ಕಿಲೋಮೀಟರ್‌ ಮಾರ್ಗದ ವಿಸ್ತರಣೆಯನ್ನು 2017ರಲ್ಲಿ ಆರಂಭಿಸಿತು. 2019ರಲ್ಲಿ ರೈಲು ಸಂಚಾರವನ್ನು ಆರಂಭಿಸುವ ಗುರಿ ಇತ್ತು. ಆದರೆ ಭೂ ಸ್ವಾಧೀನ, ನೈಸ್ ರಸ್ತೆ ಮೇಲೆ ಮೆಟ್ರೋ ಫ್ಲೈ ಓವರ್ ನಿರ್ಮಾಣ ವಿಚಾರ, ಕೋವಿಡ್ ಪರಿಸ್ಥಿತಿ ಸೇರಿ ವಿವಿಧ ಕಾರಣಕ್ಕೆ ಇಷ್ಟು ತಡವಾಗಿ ಮಾರ್ಗ ಸಂಚಾರಕ್ಕೆ ಮುಕ್ತವಾಗುತ್ತಿದೆ.

ಈ ಮಾರ್ಗ ಪ್ರತಿದಿನ ತುಮಕೂರು ರಸ್ತೆಯ ವಾಹನ ಸಂಚಾರ ದಟ್ಟಣೆಯಲ್ಲಿ ಸಿಲುಕುವ ಜನರಿಗೆ ವರದಾನವಾಗಲಿದೆ. ಅಲ್ಲದೇ ವಿವಿಧ ಜಿಲ್ಲೆಗಳಿಂದ ಬೆಂಗಳೂರು ನಗರಕ್ಕೆ ಆಗಮಿಸುವ ಜನರು ಮಾದವರ ಬಳಿ ಬಸ್ ಇಳಿದು, ಮೆಟ್ರೋ ಹತ್ತಿ ಸುಲಭವಾಗಿ ನಗರಕ್ಕೆ ಆಗಮಿಸಬಹುದು. ಬಿಐಇಸಿಗೆ ವಿವಿಧ ಪ್ರದರ್ಶನಕ್ಕೆ ನಗರದಿಂದ ಹೋಗುವ ಜನರಿಗೂ ಸಹ ಇದು ಅನುಕೂಲವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+