ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ: ಇಕೋ ಸ್ಪೇಸ್, ನಲಪಾಡ್ ಅಕಾಡಮಿಗೆ ಆಪತ್ತು!?
ಬೆಂಗಳೂರು, ಸೆಪ್ಟೆಂಬರ್ 14: ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಜನರ ಬದುಕು ಬೀದಿಗೆ ಬಂದು ನಿಂತಿದೆ. ಐಟಿ ಸಿಟಿ, ಸಿಲಿಕಾನ್ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರಿನ ಈ ದುಸ್ಥಿತಿಗೆ ರಾಜಕಾಲುವೆ ಒತ್ತುವರಿಯೇ ಮುಖ್ಯ ಕಾರಣ ಎಂಬುದನ್ನು ಬಿಬಿಎಂಪಿ ಪತ್ತೆ ಮಾಡಿದೆ.
ಅತಿಹೆಚ್ಚು ಐಟಿ ಕಂಪನಿಗಳನ್ನು ಹೊಂದಿರುವ ಮಹದೇವಪುರ ವಲಯದಲ್ಲಿಯೇ ಅತಿಹೆಚ್ಚು ರಾಜಕಾಲುವೆ ಒತ್ತುವರಿ ಆಗಿರುವುದರ ಬಗ್ಗೆ ಗುರುತಿಸಲಾಗಿದೆ. ಈ ಸಂಬಂಧ ಯಾವ ಯಾವ ಕಂಪನಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿವೆ ಎಂಬುದರ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯು ಅಧಿಕೃತ ಪಟ್ಟಿಯೊಂದನ್ನು ಬಿಡುಗಡೆಗೊಳಿಸಿದೆ.
ನಗರದ 15 ಪ್ರದೇಶಗಳಲ್ಲಿ ಅತಿಕ್ರಮಣ ಮಾಡಿಕೊಂಡಿರುವ ರಾಜಕಾಲುವೆಗಳ ಪ್ರದೇಶದಲ್ಲಿ ನಿರ್ಮಿಸಿದ ಕಟ್ಟಡಗಳನ್ನು ತೆರವುಗೊಳಿಸುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಬಿಬಿಎಂಪಿ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿರುವ ಕಂಪನಿಗಳು ಯಾವುವು?, ಬೆಂಗಳೂರಿನಲ್ಲಿ ಅತಿಕ್ರಮಣ ತೆರವಿಗೆ ಬಿಬಿಎಂಪಿ ಮತ್ತು ಸರ್ಕಾರವು ತೆಗೆದುಕೊಂಡ ಕ್ರಮಗಳೇನು? ಅತಿಕ್ರಮಣದ ಬಗ್ಗೆ ಸರ್ಕಾರದ ಸಚಿವರು ಮತ್ತು ಶಾಸಕರು ಹೇಳಿದ್ದೇನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಅತಿಕ್ರಮಣ ಮಾಡಿಕೊಂಡಿರುವ ಕಂಪನಿಗಳು ಯಾವುವು?
ಬಿಬಿಎಂಪಿಯು ಮಹದೇವಪುರ ವಲಯದಲ್ಲಿ ನಿರ್ಮಿಸಲಾದ ಆಸ್ತಿಗಳನ್ನು ಗುರುತಿಸಿದ್ದು, ಇಲ್ಲಿ ಮಳೆನೀರು ಚರಂಡಿಗಳಲ್ಲಿ (ಎಸ್‌ಡಬ್ಲ್ಯೂಡಿ) ನೀರಿನ ಹರಿವನ್ನು ನಿರ್ಬಂಧಿಸಿರುವುದನ್ನು ಪತ್ತೆ ಮಾಡಿದೆ.
ಆಗಸ್ಟ್ 17ರ ಅಧಿಸೂಚನೆಯಲ್ಲಿ ಪಟ್ಟಿ ಮಾಡಲಾದ ಆಸ್ತಿಗಳ ಪ್ರಕಾರ, ಬಾಗ್ಮನೆ ಟೆಕ್ ಪಾರ್ಕ್, ರೈನ್ ಬೋ ಡ್ರೈವ್ ಲೇಔಟ್, ವಿಪ್ರೋ, ಇಕೋ ಸ್ಪೇಸ್, ಬೆಳ್ಳಂದೂರಿನ ಗೋಪಾಲನ್, ಹೂಡಿ ಮತ್ತು ಸೊನ್ನೆಹಳ್ಳಿ, ದಿಯಾ ಶಾಲೆ, ಆದರ್ಶ, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ನ್ಯೂ ಹೊರೈಜನ್ ಕಾಲೇಜು, ಆದರ್ಶ ರಿಟ್ರೀಟ್, ಎಪ್ಸಿಲಾನ್ ಮತ್ತು ದಿಯಾಶ್ರೀ, ಪ್ರೆಸ್ಟೀಜ್, ಸಲಾರ್ಪುರಿಯಾ ಮತ್ತು ಆದರ್ಶ ಮತ್ತು ನಲಪಾಡ್ ಕಂಪನಿಗಳು ರಾಜಕಾಲುವೆಯನ್ನು ಅತಿಕ್ರಮಣ ಮಾಡಿಕೊಂಡಿರುವುದಾಗಿ ಗುರುತಿಸಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಪ್ರವಾಹ ಪರಿಸ್ಥಿತಿಗೆ ಅತಿಕ್ರಮಣವೇ ಮುಖ್ಯ ಕಾರಣ
ಐಟಿ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿ ಆಗುವುದಕ್ಕೆ ಮಳೆ ಎಷ್ಟರ ಮಟ್ಟಿಗೆ ಕಾರಣವೋ ಅದೇ ರೀತಿ ರಾಜಕಾಲುವೆ ಅಥವಾ ಮಳೆ ನೀರು ಹರಿದು ಹೋಗುವ ಪ್ರದೇಶದ ಅತಿಕ್ರಮಣವೂ ಅಷ್ಟೇ ಕಾರಣವಾಗಿದೆ ಎಂದು ಬಿಬಿಎಂಪಿ ಹೇಳಿದೆ. ನಗರದಾದ್ಯಂತ 700ಕ್ಕೂ ಹೆಚ್ಚು ಕಡೆಗಳಲ್ಲಿ ಮಳೆ ನೀರು ಹರಿದು ಹೋಗಲು ಇರುವ ಪ್ರವೇಶವನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದೆ ಎಂಬುದನ್ನು ಬಿಬಿಎಂಪಿ ಗುರುತಿಸಿದೆ. ಇದರಿಂದಲೇ ಮಳೆಯ ನೀರು ಹರಿದು ಹೋಗಲು ಸ್ಥಳವಿಲ್ಲದೇ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಹೇಳಿದೆ.

ಬಿಬಿಎಂಪಿ ಆಯುಕ್ತರು ಅತಿಕ್ರಮಣದ ಬಗ್ಗೆ ಏನ್ ಹೇಳುವರು?
ಬೆಂಗಳೂರಿನಲ್ಲಿ ಕೆರೆ ಒತ್ತುವರಿ ಹಾಗೂ ರಾಜಕಾಲುವೆಗಳ ಅತಿಕ್ರಮಣಗಳನ್ನು ತೆರವುಗೊಳಿಸುವುದಕ್ಕೆ ಎಲ್ಲ ರೀತಿಯ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ನಗರದ ಎಲ್ಲಾ ಎಂಟು ವಲಯಗಳಿಗೆ ಈ ಕುರಿತು ವಿಸ್ತೃತ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅದರಂತೆ ಮಂಗಳವಾರ ಮಹದೇವಪುರದ ಹಲವು ಕಡೆಗಳಲ್ಲಿ ಅತಿಕ್ರಮಣ ತೆರುವು ಕಾರ್ಯಾಚರಣೆಯನ್ನು ನಡೆಸಲಾಯಿತು.
ಬೆಂಗಳೂರಿನ ಮಹದೇವಪುರ ವಲಯದಲ್ಲಿರುವ ಇಕೋ ಸ್ಪೇಸ್, ಶಾಂತಿ ನಿಕೇತನ್ ಬಡಾವಣೆ, ಯಮಲೂರಿನ ಬಳೆ ರಾಜಕಾಲುವೆ ಒತ್ತುವರಿ ತೆರವು ಹಾಗೂ ನಲಪಾಡ್ ಅಕಾಡೆಮಿಯ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು.

ಸಿಲಿಕಾನ್ ಸಿಟಿಯಲ್ಲಿ ಅಕ್ರಮ ಕಟ್ಟಡಗಳ ಕಥೆ ಢಮಾರ್
ಸೆಪ್ಟೆಂಬರ್ 13ರಂದು ಬೆಂಗಳೂರಿನ ಎಂಟು ವಲಯಗಳಲ್ಲಿ ಶುರುವಾಗಿರುವ ಕಾನೂನುಬಾಹಿರ ನಿರ್ಮಾಣದ ಯೋಜನೆಗಳ ತೆರುವು ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ಮುಂದಿನ ಮಳೆಗಾಲದ ಹೊತ್ತಿಗೆ ಎಲ್ಲಾ ಅತಿಕ್ರಮಣಗಳನ್ನು ನೋಯ್ಡಾದ ಟ್ವೀನ್ ಗೋಪುರದ ರೀತಿಯಲ್ಲಿ ಡೆಮಾಲಿಶ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಅಕ್ರಮವಾಗಿ ನಿರ್ಮಿಸಿರುವ ಒತ್ತುವರಿ ತೆರವಿನಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಪ್ರವಾಹಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರದ ದುರಾಡಳಿತವೇ ಕಾರಣವೆಂದು ಆರೋಪಿಸಿದರು.












Click it and Unblock the Notifications