BJP Lok List: ಅತೃಪ್ತರ ಸಾಲಿನಲ್ಲಿ ಡಿವಿ ಸದಾನಂದಗೌಡ: ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ ಬಳಿಕ ಹೇಳಿದ್ದೇನು?
ಬೆಂಗಳೂರು ಮಾರ್ಚ್ 14: ಕರ್ನಾಟಕ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಘೋಷಣೆಯಾಗುತ್ತಿದ್ದಂತೆ ಅತೃಪ್ತರ ಸಂಖ್ಯೆ ಹೆಚ್ಚಾಗಿದೆ. ಈ ಸಾಲಿನಲ್ಲಿ ಸಿ.ಟಿ.ರವಿ, ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ, ಪುತ್ರನಿಗೆ ಟಿಕೆಟ್ ಕೊಡಿಸುವ ಇರಾದೆಯಲ್ಲಿದ್ದ ಕೆಎಸ್ ಈಶ್ವರಪ್ಪ ಸೇರಿದಂತೆ ಸದಾನಂದ ಗೌಡರೂ ಮುಂಚುಣಿಯಲ್ಲಿದ್ದಾರೆ.
ಹೌದು.... ಟಿಕೆಟ್ ಕೊಡಿಸ್ತೇನೆ ಅಂತ ಹೇಳಿದವರು ತಮಗೆ ಟಿಕೆಟ್ ಕೊಡಿಸಲಿಲ್ಲ ಎಂದು ಡಿವಿ ಸದಾನಂದಗೌಡರು ಬೇಸರ ವ್ಯಕ್ತಪಡಿಸಿದ್ದಾರೆ. ಬುಧವಾರ ಬಿಜೆಪಿ ಟಿಕೆಟ್ ಘೋಷಣೆಗೂ ಮುನ್ನ ಅವರು ಸಾಮಾಜಿಕ ಜಾಲತಾಣದಲ್ಲಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಪೋಸ್ಟ್ ಮಾಡಿದ್ದರು.

ಈ ಮೂಲಕ ತಮಗೆ ಈ ಬಾರಿ ಪಕ್ಷದ ಟಿಕೆಟ್ ಸಿಗುವುದಿಲ್ಲ ಎಂಬುದರ ಬಗ್ಗೆ ಕ್ಷೇತ್ರದ ಮತದಾರರಿಗೆ ಪರೋಕ್ಷವಾಗಿ ಮಾಹಿತಿ ನೀಡಿದ್ದರು. ಬುಧವಾರ ಮಧ್ಯಾಹ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ನಡ್ಡಾ ಅವರು ಡಿವಿ ಸದಾನಂದಗೌಡಗೆ ಕರೆ ಮಾಡಿ, ಈ ಬಾರಿ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಈ ಬೆಳವಣಿಗೆ ಬಳಿಕವೇ ಸದಾನಂದ ಗೌಡರು ಸಾಮಾಜಿಕ ಜಾಲತಾಣದಲ್ಲಿ ತಮಗೆ ಟಿಕೆಟ್ ಸಿಗುವುದಿಲ್ಲವೆಂದು ಕ್ಷೇತ್ರ ಜನರಿಗೆ ಪರೋಕ್ಷವಾಗಿ ಸೂಚನೆ ನೀಡಿದ್ದರು.
ಟಿಕೆಟ್ ಘೋಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರು ಮಧ್ಯಾಹ್ನ ಫೋನ್ ಮಾಡಿದ್ದರು. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹೊಸ ಮುಖ ಪರಿಚಯ ಮಾಡುತ್ತಿದ್ದೇವೆ ಎಂದರು. ಅಭ್ಯರ್ಥಿ ಆಯ್ಕೆ ಸಂಬಂಧ ಸರ್ವೆ ಮಾಡುವ ಕೆಲಸ ಮಾಡಿ ಇದನ್ನು ತಿಳಿಸುತ್ತಿದ್ದೀರಾ ಎಂದು ನಾನು ಅವರನ್ನು ಕೇಳಿದೆ. ಅದಕ್ಕೆ ಅವರು 'ಇದರ ಹಿಂದೆ ತಂತ್ರಗಾರಿಕೆ ಇದೆ. ಇದಕ್ಕೆ ನೀವು ಸಹಕಾರ ನಿಡಲೇಬೇಕು' ಎಂದು ವಿವರಿಸಿದರು.

ಹೀಗಾಗಿ ನನ್ನ ಜೊತೆ ಕ್ಷೇತ್ರದಲ್ಲಿ ಹತ್ತು ವರ್ಷ ಜೊತೆಗಿದ್ದ ಎಲ್ಲರಿಗೂ ಧನ್ಯವಾದ ತಿಳಿಸಬೇಕು ಎಂದು ಮನಸಿಗೆ ಅನಿಸಿತು. ಹಾಗಾಗಿ ನನ್ನ ಜೊತೆ ನಿಂತ ಪಕ್ಷದ ಕಾರ್ಯಕರ್ತರು ಮುಖಂಡರಿಗೆ ಫೇಸ್‌ಬುಕ್‌ನಲ್ಲಿ ಧನ್ಯವಾದ ತಿಳಿಸಿದೆ. ಅಂದರೆ, ಸದಾನಂದಗೌಡರಿಗೆ ಟಿಕೆಟ್ ಕೈ ತಪ್ಪಿದ್ದು ಅವರಿಗೆ ಗೊತ್ತಿರಲಿ ಎಂದು ನಾನು ಮೊದಲೇ ತಿಳಿಸಿದ್ದೇನೆ. ನನ್ನ ಹಿತೈಷಿಗಳ ಮನಸಿನಲ್ಲಿ ಯಾವುದೇ ಭಾವನೆ ಬಾರದಿರಲಿ ಎಂದು ಮೊದಲೇ ಹಾಕಿದ್ದೇನೆ. ಅಂದರೆ, ನೇರವಾಗಿ ಹೇಳಿದ್ದೇನೆ. ರಾಜಕೀಯ ನಿವೃತ್ತಿ ಘೋಷಣೆ ಮಾಡಿಲ್ಲ ಎಂದರು.
ಕಾಂಗ್ರೆಸ್ ಸೇರುತ್ತಾರಾ ಡಿವಿ ಸದಾನಂದ ಗೌಡ?
ಕಾಂಗ್ರೆಸ್ ಸೇರುತ್ತಾರಾ ಡಿವಿ ಸದಾನಂದ ಗೌಡ ಅವರು ಎನ್ನುವ ಸುದ್ದಿಗಾರರ ಪ್ರಶ್ನೆ ಉತ್ತರಿಸಿದ ಅವರು, 'ಕಾಂಗ್ರೆಸ್ ಸೇರುವ ಹಾರಿಕೆ ಸುದ್ದಿ ಹರಿಡಿರುವವರನ್ನು ದೇಶದ್ರೋಹಿಗಳು ಎಂದು ಕರೆಯುತ್ತೇನೆ. ನನಗೆ ಒಂದು ನೋವಿದೆ. ನನ್ನನ್ನು ಮತ್ತೆ ಕರೆದುಕೊಂಡು ಬಂದು ಅವಮಾನ ಮಾಡಿದ್ದಾರೆ ಎನ್ನುವ ಭಾವನೆ ನನ್ನದು. ನಾನು ಮುಖ್ಯಮಂತ್ರಿ ಸ್ಥಾನದಿಂದ ಇಳಿದಾಗಲೂ ಹಸನ್ಮುಖಿಯಾಗಿದ್ದೆ. ಕೇಂದ್ರ ಮಂತ್ರಿ ಸ್ಥಾನದಿಂದ ಇಳಿದಾಗಲೂ ಹೀಗೇ ಇದ್ದೆ. ನಾನು ಸತ್ಯ ಹರಿಶ್ಚಂದ್ರನ ಮೊಮ್ಮಗ ಅಲ್ಲ. ನನಗೆ ನೋವಾಗಿದೆ. ದೊಡ್ ದೊಡ್ಡವರು ಬಂದು ನನ್ನನ್ನು ಕರೆದುಕೊಂಡು ಬಂದರು. ಟಿಕೆಟ್ ಕೊಡಿಸುತ್ತೇನೆಂದು ಕರೆದಂತವರು ಕೊಟಿಸಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಇನ್ಮುಂದೆ ಪಕ್ಷದ ಪರ ಕೆಲಸ ಮಾಡುತ್ತೇನೆ. ಈ ಕ್ಷೇತ್ರ ತಿಳಿದವರಿಗೆ ಅವಕಾಶ ಕೊಟ್ಟಾಗ ಗೆಲುವು ಸುಲಭವಾಗಲಿದೆ. ಒಂದು ವೇಲೆ ಈ ಕ್ಷೇತ್ರದ ಬಗ್ಗೆ ಗೊತ್ತಿಲ್ಲದವರಿಗೆ ಟಿಕೆಟ್ ಕೊಟ್ಟರೆ ನಾವು ಹಗಲು-ರಾತ್ರಿ ಕೆಲಸ ಮಾಡಬೇಕಾಗುತ್ತದೆ ಎಂದರು.
ಶೋಭಾ ಕರಂದ್ಲಾಜೆ ಟಿಕೆಟ್:
ಬಿಜೆಪಿ ಹೈಕಮಾಂಡ್ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಟಿಕೆಟ್ ನೀಡಿದೆ. ಈ ಮೂಲಕ ಬಿಜೆಪಿ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹೊಸ ಮುಖ ಪರಿಚಯ ಮಾಡಿದೆ. ಹಾಗೆ ನೋಡಿದರೆ ಉಡುಪಿ & ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಟಿಕೆಟ್ ನೀಡಬೇಕಿತ್ತು. ಆದರೆ ಅಲ್ಲಿನ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡುವುದು ಬಯಸಲಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಶೋಭಾ ಕರಂದ್ಲಾಜೆ ಗೋಬ್ಯಾಕ್ ಅಭಿಯಾನವನ್ನು ಆರಂಭಿಸಿದ್ದರು. ಆದರೆ ಅನಿರೀಕ್ಷಿತ ಎಂಬಂತೆ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದೆ. ಸದ್ಯ ಇಲ್ಲಿನ ಜನ ಅವರಿಗೆ ಮತ ನೀಡ್ತಾರಾ? ಗೆಲ್ಲಿಸುತ್ತಾರಾ ಎಂದು ಕಾದು ನೋಡಬೇಕಿದೆ.












Click it and Unblock the Notifications