ಸಿಎಂ-ಡಿಸಿಎಂ ಕುರ್ಚಿ ಫೈಟ್: ಎಲ್ಲ ಸಚಿವರಿಗೂ ಸಿಎಂ ಆಗುವ ಮಹಾದಾಸೆ: ಬಿಜೆಪಿ
ಬೆಂಗಳೂರು, ಡಿಸೆಂಬರ್ 06: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಸಾಕಷ್ಟು ಚರ್ಚೆ, ಎರಡು ಬಣಗಳ ಕಸರತ್ತು ದೆಹಲಿ ಭೇಟಿಯ ಬಳಿಕವೂ ಕುರ್ಚಿ ಕಿತ್ತಾಟ ಮುಂದುವರಿದಿದೆ. ಈ ಬಗ್ಗೆ ಬಿಜೆಪಿಯು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಾವಧಿ ಅಂತ್ಯಗೊಂಡಿದೆ. ಸಿಎಂ ಕುರ್ಚಿಗೆ ಕಾಂಗ್ರೆಸ್ ಪಕ್ಷದೊಳಗೆ ಕಿತ್ತಾಟ ಆರಂಭವಾಗಿದೆ ಎಂದು ಸಚಿವರ ಸಿಎಂ ಸ್ಥಾನ ಬಗ್ಗೆ ಹೇಳಿಕೆಯನ್ನು ಮರುವ್ಯಾಕ್ಯಾನಿಸಿ ಕುಟುಕಿದೆ.
ಕರ್ನಾಟಕ ಬಿಜೆಪಿ ಶನಿವಾರ ಎಕ್ಸ್ ಪೋಸ್ಟ್ ಮಾಡಿದ್ದು, ಶುಕ್ರವಾರ ರಾಜ್ಯ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಸಿಎಂ ನನಗೂ ಸಿಎಂ ಆಗುವಾಸೆ ಇದೆ ಎಂದಿದ್ದರು. ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದರು. ಇದೇ ವಿಚಾರ ಇಟ್ಟುಕೊಂಡು ಬಿಜೆಪಿ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರವನ್ನು ಲೇವಡಿ ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿ ಅಂತ್ಯಗೊಂಡಿದೆ. ಎರಡೂವರೆ ವರ್ಷಗಳ ಅವಧಿಯನ್ನು ಮುಗಿಸುತ್ತಲೇ ಸಿಎಂ ಕುರ್ಚಿಗೆ ಕಾಂಗ್ರೆಸ್ ಪಕ್ಷದೊಳಗೆ ಕಿತ್ತಾಟ ಆರಂಭವಾಗಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಧಿಕೃತವಾಗಿ ಸಿಎಂ ಕುರ್ಚಿಯ ಮೇಲೆ ಹಕ್ಕು ಪ್ರತಿಪಾದಿಸುತ್ತಿದ್ದಾರೆ. ಉಳಿದವರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.
ಇದೀಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನನಗೂ ಸಿಎಂ ಆಗುವಾಸೆ ಇದೆ ಎಂದು ಹೇಳುವ ಮೂಲಕ ಕುರ್ಚಿ ಗುದ್ದಾಟದಲ್ಲಿ ತನ್ನ ಇರುವಿಕೆಯನ್ನೂ ಸ್ಪಷ್ಟಪಡಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಎಲ್ಲಾ ಸಚಿವರೂ ಸಿಎಂ ಆಗುವ ಮಹದಾಸೆ ಎದ್ದುಕಾಣುತ್ತಿದೆ.
ಆದರೆ ಯಾವೊಬ್ಬ ಸಚಿವರೂ ಕೂಡಾ ಕರ್ನಾಟಕವನ್ನು ಪ್ರಗತಿ ಮಾಡುತ್ತೇನೆ. ತನ್ನ ಸಚಿವಾಲಯದಲ್ಲಿ ಜನಸೇವೆಯ ಕ್ರಾಂತಿ ಮಾಡುತ್ತೇನೆ ಎಂದು ಹೇಳುತ್ತಿಲ್ಲ, ಎಲ್ಲರಿಗೂ ಅಧಿಕಾರವೇ ಮುಖ್ಯವಾಗಿದೆ ಎಂದು ಬಿಜೆಪಿ ಸರ್ಕಾರದ ಮಟ್ಟದಲ್ಲಿನ ಬೆಳವಣಿಗೆಯನ್ನು ಟೀಕಿಸಿದೆ.
ದಿನೇಶ್ ಗುಂಡೂರಾವ್ ಅವರು ಹೇಳಿದ್ದೇನು?
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ. ನನಗೆ ಸಿಎಂ ಆಗುವ ಆಸೆ ಇದೆ. ಸಮಯ ಬಂದಾಗ ಅದನ್ನು ಪಕ್ಷ ನಿರ್ಧರಿಸುತ್ತದೆ. ಸದ್ಯ ನಾಯಕತ್ವ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಸಿಎಂ, ಡಿಸಿಎಂ ಸೇರಿದಂತೆ ಎಲ್ಲರೂ ಹೈಕಮಾಂಡ ನಿರ್ಧಾರಕ್ಕೆ ಬದ್ಧ. ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು. ನೀವು ಸಿಎಂ ರೇಸಿನಲ್ಲಿದ್ಧೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದರಲ್ಲಿ ನನ್ನನ್ನು ಯಾಕೆ ಎಳೆದು ತರುತ್ತೀರಿ. ಎಲ್ಲರಿಗೂ ಆಸೆ ಇದೆ ಎಂದು ಅವರು ಮೈಸೂರಿನಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.












Click it and Unblock the Notifications