ವಿಧಾನಸಭಾ ಚುನಾವಣೆ: ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸಲು ಪ್ರಗತಿ ರಥಯಾತ್ರೆ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ವೇಳೆ ಈ 130 ರಥಗಳು 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಂಚರಿಸಿ ನಂತರ ಬೆಂಗಳೂರಿಗೆ ವಾಪಸ್ ಬರಲಿವೆ.
ಬೆಂಗಳೂರು, ಫೆಬ್ರವರಿ. 24: ವಿಧಾನಸಭಾ ಚುನಾವಣಾ ಹಿನ್ನೆಲೆ ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ಭರ್ಜರಿ ಪ್ರಚಾರ ಆರಂಭಿಸಿದೆ. ಈಗಾಗಲೇ ಸಂಕಲ್ಪ ಯಾತ್ರೆ, ವಿಜಯ ಸಂಕಲ್ಪ ಯಾತ್ರೆ, ಜನಸ್ಪಂದನ ಸಮಾವೇಶಗಳ ಮೂಲಕ ಜನರ ಬಳಿ ತಲುಪುತ್ತಿರುವ ಬಿಜೆಪಿ ಮತ್ತೆ ಪ್ರಗತಿ ರಥಯಾತ್ರೆ ಆರಂಭಿಸಿದೆ. ಈ ಮೂಲಕ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಮಾಡಿರುವ ಸಾಧನೆಗಳನ್ನು ಜನರಿಗೆ ತಿಳಿಸುತ್ತೇವೆ ಎಂದಿದೆ.
ಶುಕ್ರವಾರ ಬಿಟಿಎಂ ಲೇಔಟ್‌ನ 2ನೇ ಹಂತದ ಸ್ವಾಮಿ ವಿವೇಕಾನಂದ ಆಟದ ಮೈದಾನದಲ್ಲಿ ಬಿಜೆಪಿ ಪ್ರಗತಿ ರಥಗಳಿಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಬಿಜೆಪಿ ಸರ್ಕಾರವು ಸಂಕಲ್ಪದಿಂದ ಸಿದ್ಧಿಗೆ ಮುಂದಾಗಿದೆ. ಹೀಗಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಂದರೆ ಡಬಲ್ ಎಂಜಿನ್ ಸರ್ಕಾರಗಳ ಸಾಧನೆಯನ್ನು ಜನರಿಗೆ ತಿಳಿಸಲು ಪ್ರಗತಿ ರಥಗಳನ್ನು ಜನರ ಬಳಿಗೆ ಒಯ್ಯಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ವೇಳೆ ಈ 130 ರಥಗಳು 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಂಚರಿಸಿ ನಂತರ ಬೆಂಗಳೂರಿಗೆ ವಾಪಸ್ ಬರಲಿವೆ. ರಾಜ್ಯ ಸುತ್ತಿ ಬರುವಷ್ಟರಲ್ಲಿ ರಾಜ್ಯದಲ್ಲಿ ಬಿಜೆಪಿ ಸುನಾಮಿ ಏಳಲಿದೆ. ಪ್ರಗತಿ ರಥಗಳು ಸಂಕಲ್ಪ ಸಿದ್ಧಿ ಆಗಿರಲಿದೆ. ಬಿಜೆಪಿಗೆ ಸಮರ್ಥ ನಾಯಕತ್ವವಿದ್ದು, ಜನರು ಬಿಜೆಪಿಯೇ ಭರವಸೆ ಅಂತ ನಂಬಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರವು ಆರ್ಥಿಕ ಚೇತರಿಕೆ ಜೊತೆಗೆ ಕೋವಿಡ್ ಸಂಕಷ್ಟದ ನಂತರ ಜನಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿದೆ. ಎಲ್ಲ ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆ, 75 ಶಾಲೆಗಳ ಸುಧಾರಣೆ, ನಗರೋತ್ಥಾನಕ್ಕೆ 6,000 ಕೋಟಿ ರೂಪಾಯಿ ನೀಡಿದ್ದೇವೆ. ಕೆರೆಗಳ ಅಭಿವೃದ್ಧಿ, ಸಬ್ ಅರ್ಬನ್ ರೈಲಿಗೆ ಕೇಂದ್ರದಿಂದ ಹಣ ತಂದಿದ್ದೇವೆ, ಸ್ಮಾರ್ಟ್ ಸಿಟಿ ಅಭಿವೃದ್ಧಿಗೆ ಕೇಂದ್ರದಿಂದ ಹಣ ತಂದಿದ್ದೇವೆ. ಕೇಂದ್ರದಿಂದ ಹಣ ತರಲು ರಾಜ್ಯದ ಸಂಸದರ ಪಾತ್ರ ಮುಖ್ಯವಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಮುಂದುವರಿದು, ರಾಜ್ಯ ಸರ್ಕಾರದಿಂದ ರೈತ ವಿದ್ಯಾನಿಧಿ, ರೈತ ಕೂಲಿ ಕಾರ್ಮಿಕರು, ಮೀನುಗಾರರು, ಟೇಲರ್, ಆಟೋ ಡ್ರೈವರ್, ನೇಕಾರರ ಮಕ್ಕಳಿಗೂ ಇದನ್ನು ವಿಸ್ತರಿಸಲಾಗಿದೆ. ಸ್ವನಿಧಿ ಯೋಜನೆ ಅಡಿ ಮಹಿಳೆಯರಿಗೆ ಸಾಲ, ಯುವಕರಿಗೆ ಸ್ವಯಂ ಉದ್ಯೊಗ ನೀಡಲು ಯೋಜನೆ ಬ್ಯಾಂಕ್ ನೆರವು, ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಉಚಿತ ಬಸ್ ಪಾಸ್, ಐಟಿಐ ಟ್ರೈನಿಂಗ್ ಪಡೆಯುವವರಿಗೆ ಸ್ಟೈಫಂಡ್ ಕೊಡಲಾಗುವುದು ಹೀಗಾಗಿ ಜನರು ಬಿಜೆಪಿ ಮೇಲೆ ನಂಬಿಕೆಯಿಟ್ಟಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಈ ಸಂದರ್ಭದಲ್ಲಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಸಂದೀಪ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.












Click it and Unblock the Notifications