ದೆಹಲಿಯಲ್ಲೂ ಲಾಡ್ ವಿರುದ್ಧ ಬಿಜೆಪಿ ಲಡಾಯಿ
ಬೆಂಗಳೂರು, ಅ, 30 : ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಸಚಿವ ಸಂತೋಷ್ ಲಾಡ್ ಅವರ ವಿರುದ್ಧದ ಹೋರಾಟವನ್ನು ದೆಹಲಿಗೆ ತೆಗೆದುಕೊಂಡು ಹೋಗಲು ಬಿಜೆಪಿ ನಿರ್ಧರಿಸಿದೆ. ಸಂಸತ್ ನಲ್ಲಿ ಸಂತೋಷ್ ಲಾಡ್ ವಿಷಯ ಪ್ರಸ್ತಾಪಿಸುವುದಾಗಿ ಪಕ್ಷದ ರಾಷ್ಟ್ರೀಯ ವಕ್ತಾರ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಪ್ರಕಾಶ್ ಜಾವಡೇಕರ್ ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತಿರುವ ವಾರ್ತಾ ಮತ್ತು ಮೂಲಸೌಕರ್ಯ ಸಚಿವ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ರಾಜ್ಯ ಬಿಜೆಪಿ ಘಟಕ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದೆ. ಆದರೆ, ಸಿಎಂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಮುಂಬರುವ ಸಂಸತ್ ಅಧಿವೇಶನದಲ್ಲಿ ಸಚಿವ ಸಂತೋಷ್ ಲಾಡ್ ವಿಚಾರವನ್ನು ಪ್ರಸ್ತಾಪಿಸಲಾಗುವುದು. ಆ ಮೂಲಕ ದೆಹಲಿಯಲ್ಲಿಯೂ ಸಂತೋಷ್ ಲಾಡ್ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಜಾವಡೇಕರ್ ಹೇಳಿದ್ದಾರೆ. ಇದರಿಂದಾಗಿ ಸಂತೋಷ್ ಲಾಡ್ ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ : ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಸಚಿವ ಸಂತೋಷ್ ಲಾಡ್ ರಾಜೀನಾಮೆ ನೀಡದಿದ್ದರೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಬಿಡುವುದಿಲ್ಲವೆಂಬ ಬಿಜೆಪಿ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ. ಗಣಿ ಅಕ್ರಮಗಳ ಬಗ್ಗೆ ಬಿಜೆಪಿ ಅಧಿವೇಶನದಲ್ಲಿಯೇ ಚರ್ಚೆ ನಡೆಸಲಿ. ಅಧಿವೇಶನವೇ ನಡೆಸಲು ಬಿಡುವುದಿಲ್ಲವೆಂದು ಬೆದರಿಕೆ ಹಾಕುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ದಾಖಲೆ ಪರಿಶೀಲನೆ ಬಳಿಕ ಕ್ರಮ : ಸಂತೋಷ್ ಲಾಡ್‌ರನ್ನು ಸಂಪುಟದಿಂದ ಕೈಬಿಡದಿದ್ದರೆ ಅಧಿವೇಶನ ಬಹಿಷ್ಕರಿಸುವುದಾಗಿ ಪ್ರತಿಪಕ್ಷ ಬೆದರಿಕೆ ಹಾಕುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಲಾಡ್ ವಿರುದ್ಧ ಇರುವ ಆರೋಪಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ಸೂಕ್ತ ನಿರ್ಧಾರ ತೆಗೆದುಕಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.
ದೆಹಲಿಗೆ ಸಿಎಂ : ಸಿಎಂ ಸಿದ್ದರಾಮಯ್ಯ ಒಂದು ದಿನದ ಭೇಟಿಗಾಗಿ ಗುರುವಾರ ಸಂಜೆ ದೆಹಲಿಗೆ ತೆರಳಲಿದ್ದಾರೆ. ಶುಕ್ರವಾರ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡಲಿದ್ದಾರೆ. ಶುಕ್ರವಾರ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಸೇರಿದಂತೆ ಹೈಕಮಾಂಡ್ ನಾಯಕರನ್ನು ಸಿದ್ದರಾಮಯ್ಯ ಭೇಟಿ ಮಾಡಲಿದ್ದಾರೆ.
ಸಚಿವ ಸಂತೋಷ್ ಲಾಡ್ ವಿರುದ್ಧದ ಆರೋಪ, ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿ ರಚನೆ, ಸಂತೋಷ್ ಲಾಡ್ ಸಂಪುಟದಿಂದ ಕೈ ಬಿಡುವ ವಿಚಾರ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಅವರು ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ.












Click it and Unblock the Notifications