ಬಿಎಂಟಿಎಫ್ ಮುಚ್ಚವ ನಿರ್ಧಾರಕ್ಕೆ ಬಿಜೆಪಿ ವಿರೋಧ
ಬೆಂಗಳೂರು, ಅಕ್ಟೋಬರ್ 28 : ಬಿಎಂಟಿಎಫ್ ಅನ್ನು ಮುಚ್ಚುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಸರ್ಕಾರ ಬಿಎಂಟಿಎಫ್ ಮುಚ್ಚಿ, ಸಿಎಸ್‌ಎಫ್ ರಚಿಸುವ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ.
ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ರಾಜ್ಯ ಸರ್ಕಾರ ಈಗ ಬಿಎಂಟಿಎಫ್ ರದ್ದುಗೊಳಿಸುವ ಪ್ರಸ್ತಾವನೆ ಸಿದ್ಧಪಡಿಸಿದೆ. ಇದನ್ನು ಬಿಜೆಪಿ ವಿರೋಧಿಸಿದ್ದು, ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ.
ಬೆಂಗಳೂರು ನಗರ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು ಈ ಕುರಿತು ಹೇಳಿಕೆ ನೀಡಿದ್ದು, 'ಬಿಎಂಟಿಎಫ್ ಹಲವು ರಾಜಕಾರಣಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಿತ್ತು. ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದಿದೆ' ಎಂದು ಆರೋಪಿಸಿದ್ದಾರೆ.

'ಸರ್ಕಾರ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಅನ್ನು ಮುಚ್ಚುವ ನಿರ್ಧಾರವನ್ನು ಹೊರಡಿಸಲಿ, ಮರುದಿನವೇ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡುತ್ತೇನೆ' ಎಂದು ಎನ್.ಆರ್.ರಮೇಶ್ ಹೇಳಿದ್ದಾರೆ.
22 ವರ್ಷಗಳಿಂದ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಅಸ್ತಿತ್ವದಲ್ಲಿದೆ. ಸರ್ಕಾರಿ ಭೂಮಿಗಳನ್ನು ಸಂರಕ್ಷಿಸುವ ಹಾಗೂ ಅಧಿಕಾರಿಗಳ ಮೇಲಿನ ಆರೋಪಗಳ ತನಿಖೆಯನ್ನು ಬಿಎಂಟಿಎಫ್ ನಡೆಸುತ್ತಿದೆ.
ಬಿಬಿಎಂಪಿ ಮಾತ್ರವಲ್ಲದೇ ಬಿಡಿಎ, ಜಲಮಂಡಳಿ ಹಾಗೂ ಕರ್ನಾಟಕ ಕೊಳಗೇರಿ ಮಂಡಳಿಯ ಪ್ರಕರಣಗಳ ತನಿಖೆ ನಡೆಸುತ್ತಿದೆ. ಈಗ ಸರ್ಕಾರ ಬಿಎಂಟಿಎಫ್ ಅನ್ನು ಮುಚ್ಚಿ, ಸಿಎಸ್‌ಎಫ್ ರಚನೆ ಮಾಡುವ ಪ್ರಸ್ತಾಪ ಸಿದ್ಧಪಡಿಸಿದೆ.
ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಪಾಲಿಕೆ ಭದ್ರತಾ ಪಡೆ (ಸಿಎಸ್‌ಎಫ್) ರಚನೆ ಮಾಡುವ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಆದರೆ, ತೀವ್ರ ವಿರೋಧದ ಕಾರಣದಿಂದಾಗಿ ಅದನ್ನು ವಾಪಸ್ ಪಡೆಯಲಾಗಿತ್ತು.











Click it and Unblock the Notifications