ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಹೆಸರು ಶಿಫಾರಸು
Recommended Video

ಬೆಂಗಳೂರು, ಮಾರ್ಚ್ 11 : ಬಿಜೆಪಿ ಭದ್ರಕೋಟೆ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರನ್ನು ಬಿಜೆಪಿ ಶಾಸಕರು ಅಂತಿಗೊಳಿಸಿ ರಾಜ್ಯಾಧ್ಯಕ್ಷರಿಗೆ ಶಿಫಾರಸು ಮಾಡಿದರು.
ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ ಅವರ ನಿವಾಸದಲ್ಲಿ ಸೋಮವಾರ ಸಂಜೆ ಬೆಂಗಳೂರು ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಶಾಸಕರ ಸಭೆ ನಡೆಯಿತು. ತೇಜಸ್ವಿನಿ ಅನಂತ್ ಕುಮಾರ್ ಅವರು ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯ ಬಳಿಕ ಮಾತನಾಡಿದ ಆರ್.ಅಶೋಕ ಅವರು, 'ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರನ್ನು ನಾವು ಒಮ್ಮತದಿಂದ ಆಯ್ಕೆ ಮಾಡಿದ್ದೇವೆ. ನಮ್ಮ ಶಿಫಾರಸನ್ನು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸುತ್ತೇವೆ' ಎಂದರು.

ಮಾಧ್ಯಮಗಳ ಜೊತೆ ಮಾತನಾಡಿದ ತೇಜಸ್ವಿನಿ ಅನಂತ್ ಕುಮಾರ್ ಅವರು, 'ಅನಂತ್ ಕುಮಾರ್ ಅವರು ಬೆಂಗಳೂರಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಬಿಜೆಪಿ ಪಕ್ಷಕ್ಕೆ ಅವರು ನೀಡಿರುವ ಕೊಡುಗೆ ದೊಡ್ಡದು' ಎಂದರು.
'ನನ್ನ ಮೇಲೆ ನಂಬಿಕೆ ಇಟ್ಟು ಬೆಂಗಳೂರು ದಕ್ಷಿಣಕ್ಕೆ ನನ್ನ ಹೆಸರನ್ನು ಶಿಫಾರಸು ಮಾಡಿದ್ದಾರೆ. ಕೇಂದ್ರ ಚುನಾವಣಾ ಸಮಿತಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧಳಾಗಿರುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ಕೃತಜ್ಞತೆಗಳು' ಎಂದು ಹೇಳಿದರು.
ಆರ್.ಅಶೋಕ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿ.ಸೋಮಣ್ಣ, ಉದಯ್ ಗರುಡಾಚಾರ್ ಸೇರಿದಂತೆ ವಿವಿಧ ನಾಯಕರು ಪಾಲ್ಗೊಂಡಿದ್ದರು. ಶಾಸಕರ ನಿಯೋಗ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಭೆಯ ನಿರ್ಣಯವನ್ನು ತಿಳಿಸಲಿದೆ.












Click it and Unblock the Notifications