IPL VIP Ticket: ಐಪಿಎಲ್ ಟಿಕೆಟ್ ನನಗಂತೂ ಬೇಡ: ಆರ್‌ಸಿಬಿ ಪಂದ್ಯದ ಟಿಕೆಟ್ ನಿರಾಕರಿಸಿದ ಬಿಜೆಪಿ ಶಾಸಕ ಸುರೇಶ್ ಕುಮಾರ್
ಬೆಂಗಳೂರು: ಐಪಿಎಲ್ ಕ್ರಿಕೆಟ್ ಪಂದ್ಯಗಳ ಉಚಿತ ಟಿಕೆಟ್ ಅಥವಾ ಪಾಸ್‌ಗಳಿಗಾಗಿ ವಿಧಾನಸಭೆಯಲ್ಲಿ ಶಾಸಕರು ಪಟ್ಟು ಹಿಡಿದ ಘಟನೆ ಹಾಗೂ ಅದಕ್ಕೆ ಸರ್ಕಾರ ಸಮ್ಮತಿಸಿರುವ ನಿರ್ಧಾರದ ವಿರುದ್ಧ ಬಿಜೆಪಿ ಹಿರಿಯ ಶಾಸಕ ಎಸ್.ಸುರೇಶ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ತಮಗೆ ನೀಡಲಾಗುವ ಯಾವುದೇ ಐಪಿಎಲ್ ಪಾಸ್‌ಗಳನ್ನು ಸವಿನಯವಾಗಿ ನಿರಾಕರಿಸಿದ್ದಾರೆ.
ಮಾರ್ಚ್ 26ರಂದು ವಿಧಾನಸಭೆಯಲ್ಲಿ ಬೆಂಗಳೂರಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ದಿಢೀರನೆ ಶಾಸಕರಿಗೆ ಐಪಿಎಲ್ ಟಿಕೆಟ್ ಹಂಚಿಕೆ ಮಾಡುವ ಕುರಿತು ಚರ್ಚೆ ಆರಂಭವಾಗಿತ್ತು. ಈ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿರುವ ಸುರೇಶ್ ಕುಮಾರ್, "ಜನರ ಪರವಾಗಿ ಧ್ವನಿ ಎತ್ತಬೇಕಾದ ಸದನದಲ್ಲಿ, ಜನಸೇವಕರಾದ ನಮಗೆ ವಿಐಪಿ ಮರ್ಯಾದೆ ಸಿಗಬೇಕೆಂಬ ಆಗ್ರಹ ವ್ಯಕ್ತವಾಗಿರುವುದು ನಿಜಕ್ಕೂ ದುರಂತ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

24 ಗಂಟೆಯೊಳಗೆ ಟಿಕೆಟ್ ಬೇಡಿಕೆಗೆ ಸ್ಪಂದನೆ
ಸಾಮಾನ್ಯ ಜನರ ಗಂಭೀರ ಪ್ರಶ್ನೆಗಳಿಗೆ ವರ್ಷಗಟ್ಟಲೆ ಪರಿಹಾರ ಸಿಗುವುದಿಲ್ಲ. ಆದರೆ ಶಾಸಕರಿಗೆ ಟಿಕೆಟ್ ಬೇಕು ಎಂಬ ಬೇಡಿಕೆಗೆ ಸರ್ಕಾರ 24 ಗಂಟೆಯೊಳಗೆ ಸ್ಪಂದಿಸಿರುವುದು ಜನಪ್ರತಿನಿಧಿಗಳ ಬಗ್ಗೆ ಜನಸಾಮಾನ್ಯರಲ್ಲಿ ತಿರಸ್ಕಾರ ಮೂಡುವಂತೆ ಮಾಡಿದೆ. ಮಾಧ್ಯಮಗಳ ವರದಿ ಪ್ರಕಾರ ಶಾಸಕರಿಗೆ ತಲಾ ಎರಡು ದಿನಗಳ ಕಾಲ ಉಚಿತ ಪಾಸ್ ನೀಡಲು ನಿರ್ಧರಿಸಿರುವುದು "ವಿಐಪಿ ಸಂಸ್ಕೃತಿಗೆ" ನೀಡಿದ ಪ್ರೋತ್ಸಾಹವಾಗಿದ್ದು, ಇದು ಆಘಾತಕಾರಿ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಹಳೆಯ ದುರಂತದ ನೆನಪು
ಕಳೆದ ವರ್ಷ ಐಪಿಎಲ್ ಆರ್‌ಸಿಬಿ ಸಂಭ್ರಮಾಚರಣೆಗೆ ವೇಳೆ ನಡೆದ ಅನಾಹುತದಲ್ಲಿ 11 ಜನ ಅಮಾಯಕರು ಪ್ರಾಣ ಕಳೆದುಕೊಂಡ ಘಟನೆಯನ್ನು ನೆನಪಿಸಿರುವ ಅವರು, "ಆ ನೋವಿನ ನಡುವೆ ನಾವು ಐಪಿಎಲ್ ಟಿಕೆಟ್‌ಗಾಗಿ ಸದನದಲ್ಲಿ ಪಟ್ಟು ಹಿಡಿಯುವುದು ನಮ್ಮನ್ನು ಜನರ ದೃಷ್ಟಿಯಲ್ಲಿ ಇನ್ನಷ್ಟು ಕನಿಷ್ಠರನ್ನಾಗಿಸುತ್ತದೆ" ಎಂದಿದ್ದಾರೆ.
ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ, ಸರ್ಕಾರ ಅಥವಾ ಕೆ.ಎಸ್.ಸಿ.ಎ ವತಿಯಿಂದ ಶಾಸಕರಿಗೆ ನೀಡಲಾಗುವ ಯಾವುದೇ ಐಪಿಎಲ್ ಪಂದ್ಯದ ಪಾಸ್ ಅಥವಾ ಟಿಕೆಟ್‌ಗಳನ್ನು ತಾವು ಸ್ವೀಕರಿಸುವುದಿಲ್ಲ ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಮುಂದಿನ ಪಂದ್ಯಗಳಿಗೂ ಸಹ ತಮ್ಮ ಹೆಸರಿನಲ್ಲಿ ಯಾವುದೇ ಟಿಕೆಟ್ ವಿತರಿಸಬಾರದು ಎಂದು ಅವರು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಲ್ಲಿ ವಿನಂತಿಸಿಕೊಂಡಿದ್ದಾರೆ. ಸುರೇಶ್ ಕುಮಾರ್ ಅವರ ಈ ನಿರ್ಧಾರವು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ವಿಧಾನಸಭೆಯಲ್ಲಿ ಐಪಿಎಲ್ ಟಿಕೆಟ್ ವಿಚಾರವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಕೆಎಸ್‌ಸಿಎ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಮಗೆ ಟಿಕೆಟ್ ಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಶಾಸಕರಿಗೆ ನೀಡಬೇಕಾದ ಕನಿಷ್ಠ ಸೌಜನ್ಯ ಮತ್ತು ಗೌರವವನ್ನು ಕೆಎಸ್‌ಸಿಎ ನೀಡುತ್ತಿಲ್ಲ. ನಾವು ರಾಜ್ಯದ ಜನಪ್ರತಿನಿಧಿಗಳು, ನಮಗೇ ಪಂದ್ಯ ನೋಡಲು ಟಿಕೆಟ್ ಸಿಗದಿದ್ದರೆ ಹೇಗೆ? ಎಂದು ಪ್ರಶ್ನಿಸಿದ್ದರು. ಕೆಎಸ್‌ಸಿಎ ಅಧಿಕಾರಿಗಳು ಶಾಸಕರನ್ನು ನಿರ್ಲಕ್ಷಿಸುತ್ತಿದ್ದಾರೆ. ಶಾಸಕರಿಗೆ ಪ್ರತ್ಯೇಕ ಗ್ಯಾಲರಿ ಅಥವಾ ಪಾಸ್‌ಗಳ ವ್ಯವಸ್ಥೆ ಮಾಡಬೇಕು ಎಂದು ಅವರು ಸಭಾಧ್ಯಕ್ಷರಲ್ಲಿ ಪಟ್ಟು ಹಿಡಿದರು. ಇದರ ಬೆನ್ನಲ್ಲೇ ಎಲ್ಲ ಶಾಸಕರು, ಸಚಿವರು ಹಾಗೂ ಸಂಸದರಿಗೆ ತಲಾ ಎರಡು ಟಿಕೆಟ್ ವ್ಯವಸ್ಥೆ ಮಾಡುವುದಾಗಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ. ಮತ್ತೊಂದೆಡೆ ಈ ವಿಐಪಿ ಸಂಸ್ಕೃತಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧವೂ ವ್ಯಕ್ತವಾಗುತ್ತದೆ.












Click it and Unblock the Notifications