ಶಾಸಕ ಮುನಿರತ್ನಗೆ ಇಂದಿನಿಂದ ಮತ್ತೊಂದು ದೊಡ್ಡ ಸಂಕಷ್ಟ
ಜಾತಿ ನಿಂದನೆ, ಬೆದರಿಕೆ ಕೇಸ್‌ನಲ್ಲಿ ಜಾಮೀನು ಪಡೆದು, ಅತ್ಯಾಚಾರ ಕೇಸ್‌ನಲ್ಲಿ ಮತ್ತೆ ಜೈಲು ಸೇರಿರುವ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಇಂದಿನಿಂದ ಮತ್ತೊಂದು ಕಂಟಕ ಎದುರಾಗಲಿದೆ. ಈ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರವು ಈಗಾಗಲೇ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿದ್ದು, ಇಂದು ಅವರನ್ನು ವಿಚಾರಣೆಗೆ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.
ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ತಂಡ ರಚಿಸಲಾಗಿದೆ. ಇದರಲ್ಲಿ ಮೂವರು ಐಪಿಎಸ್ ಅಧಿಕಾರಿಗಳು ಕೂಡ ಇದ್ದಾರೆ. ಮುನಿರತ್ನ ವಿರುದ್ಧ ಈ ಮೊದಲು ದಾಖಲಾಗಿದ್ದ ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಕೇಸ್‌ಗಳು, ಈಗ ಚಾಲ್ತಿಯಲ್ಲಿರುವ ಅತ್ಯಾಚಾರ ಕೇಸ್ ಸೇರಿದಂತೆ ಮೂರು ಪ್ರಕರಣಗಳಲ್ಲಿ ಮುನಿರತ್ನ ಅವರ ವಿಚಾರಣೆ ನಡೆಸಲು ಎಸ್‌ಐಟಿ ಮುಂದಾಗಿದೆ.

ಈ ಸಂಬಂಧ ಇಂದು ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಮನವಿ ಮಾಡಲಿದ್ದಾರೆ. ಬಾಡಿ ವಾರಂಟ್ ಮೇರೆಗೆ ಆರೋಪಿಯನ್ನು ಕಸ್ಟಡಿಗೆ ಪಡೆಯಲಿದ್ದು, ಒಟ್ಟಾರೆ ಮುನಿರತ್ನ ಅವರನ್ನು ವಿಚಾರಣೆಗೆ ತಮ್ಮ ಕಸ್ಟಡಿಗೆ ಪಡೆಯಲು ಎಸ್‌ಐಟಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಒಂದು ವೇಳೆ ಇಂದು ನ್ಯಾಯಾಲಯವು ಆರೋಪಿ ಮುನಿರತ್ನ ಅವರನ್ನು ತಮ್ಮ ಕಸ್ಟಡಿಗೆ ನೀಡಿದರೆ ಸ್ಥಳ ಮಹಜರು ನಡೆಸಿ, ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲು ಎಸ್‌ಐಟಿ ಮುಂದಾಗಲಿದೆ.
ಏನಿದು ಪ್ರಕರಣ?: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಜಾತಿ ನಿಂದನೆ, ಕೊಲೆ ಬೆದರಿಕೆ ಆರೋಪ ಕೇಳಿಬಂದಿತ್ತು. ಈ ಕೇಸ್ ಸಂಬಂಧ ಅವರ ಬಂಧನವೂ ಆಗಿತ್ತು. ಬಳಿಕ ಈ ಕೇಸ್‌ನಲ್ಲಿ ಜಾಮೀನು ಪಡೆದು ಹೊರಬರುತ್ತಿರುವಾಗಲೇ ಮುನಿರತ್ನ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿತ್ತು. ಮಹಿಳೆಯೊಬ್ಬರು ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಿದ್ದರು. ಈ ಸಂಬಂಧ ರಾಮನಗರ ಪೊಲೀಸರು ಕೂಡ ಮುನಿರತ್ನ ಅವರನ್ನು ಮತ್ತೆ ವಶಕ್ಕೆ ಪಡೆದಿದ್ದರು.
ಪರಪ್ಪನ ಅಗ್ರಹಾರ ಜೈಲಿನಿಂದ ಮುನಿರತ್ನ ಅವರನ್ನು ಕಗ್ಗಲೀಪುರ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ಕೂಡ ನಡೆಸಲಾಗಿತ್ತು. ಇನ್ನು ಮುನಿರತ್ನ ಅವರು ಎಚ್‌ಐವಿ ಪಾಸಿಟಿವ್ ಸಂತ್ರಸ್ತೆಯನ್ನು ಹನಿಟ್ರ್ಯಾಪ್‌ಗೆ ಬಳಸಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಲಾಗಿದ್ದು, ಸಂತ್ರಸ್ತ ಮಹಿಳೆಯೊಬ್ಬರು ಮುನಿರತ್ನ ವಿರುದ್ಧ ಅತ್ಯಾಚಾರದ ಕೇಸ್ ದಾಖಲಿಸಿದ್ದರು.

ಮಹಿಳೆ ದೂರಿನಲ್ಲಿ ತಿಳಿಸಿರುವಂತೆ ಖಾಸಗಿ ರೆಸಾರ್ಟ್‌ನಲ್ಲಿ ಆಕೆಯ ವಿರುದ್ಧ ಮುನಿರತ್ನ ಅತ್ಯಾಚಾರ ನಡೆದಿರುವುದಾಗಿ ಡಿವೈಎಸ್‌ಪಿ ದಿನಕರ್ ಶೆಟ್ಟಿ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದರು. ʼಕೋವಿಡ್ ಸಂದರ್ಭದಲ್ಲಿ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿತ್ತು. ವಿಡಿಯೋ ಕಾಲ್ ಮಾಡಿ ನನ್ನೊಂದಿಗೆ ಮಾತನಾಡುತ್ತಿದ್ದರು. ಬಳಿಕ ಕರೆ ಮಾಡಿ ನನ್ನನ್ನು ನಗ್ನವಾಗಿ ಇರುವಂತೆ ಒತ್ತಾಯಿಸುತ್ತಿದ್ದರು. ನಾನು ಅದಕ್ಕೆ ಒಪ್ಪಿರಲಿಲ್ಲ ಎಂದಿದ್ದಾರೆ.
ʼನನ್ನನ್ನು ಒಂದು ಸ್ಥಳಕ್ಕೆ ಬರಲು ಹೇಳಿದ್ದರು. ಅಲ್ಲಿ ನನ್ನನ್ನು ತಬ್ಬಿಕೊಳ್ಳಲು ಮುಂದಾದಾಗ ವಿರೋಧ ಮಾಡಿದ್ದೆ. ಅದಕ್ಕೆ, ಅವರು ಇದೆಲ್ಲ ರಾಜಕೀಯದಲ್ಲಿ ಕಾಮನ್ ಎಂದು ಹೇಳಿದ್ದರು. ಬಳಿಕ ನನ್ನ ಮೇಲೆ ಅತ್ಯಾಚಾರ ಮಾಡಿ, ಯಾರಿಗೂ ಹೇಳದಂತೆ ಬೆದರಿಸಿದ್ದರು. ಅತ್ಯಾಚಾರದ ವಿಡಿಯೋ ಇಟ್ಟುಕೊಂಡು ನನ್ನ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ್ದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇದೇ ಕೇಸ್‌ನಲ್ಲಿ ಶಾಸಕ ಮುನಿರತ್ನ ಅವರು ಸದ್ಯ ಮತ್ತೆ ಜೈಲುಪಾಲಾಗಿದ್ದಾರೆ.
ಮಹಿಳೆ ಮೇಲಿನ ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಕೋರ್ಟ್‌ನಲ್ಲಿ ಹಿನ್ನಡೆಯಾಗಿತ್ತು. ಕೇಸ್ ವಿಚಾರಣೆ ನಡೆಸಿದ್ದ ಕೋರ್ಟ್ ಮುನಿರತ್ನ ಅವರನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಅದ್ಯ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಎಸ್‌ಐಟಿ ಕಸ್ಟಡಿಗೆ ಮುನಿರತ್ನ ಅವರನ್ನು ನೀಡಿದರೆ, ಪ್ರಕರಣ ತನಿಖೆ ಮತ್ತಷ್ಟು ಚುರುಕುಗೊಳ್ಳಲಿದೆ.












Click it and Unblock the Notifications