ಬಿಜೆಪಿ ಶಾಸಕ ಎಂ.ಕೃಷ್ಣಪ್ಪ ವಿರುದ್ಧದ ಆರೋಪವೇನು?
ಬೆಂಗಳೂರು, ಡಿ. 10 : ನಾಲ್ವರು ಭ್ರಷ್ಟ ಸಚಿವರ ರಾಜೀನಾಮೆಗೆ ಹೋರಾಟ ಆರಂಭಿಸಿದ್ದ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ವಿರುದ್ಧದ ಭೂ ಒತ್ತುವರಿ ಆರೋಪ ಸಾಬೀತಾಗಿದ್ದು, ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್ ಅವರು ಈ ಕುರಿತು ರಾಜ್ಯಪಾಲ ವಜೂಭಾಯಿವಾಲಾ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಅವರು ಶಾಸಕರಾಗಿ ಮುಂದುವರಿಯಲು ಅನರ್ಹ ಎಂದು ಉಲ್ಲೇಖಿಸಿದ್ದಾರೆ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ. ನಾನು ನಿರ್ದೋಷಿ ನನ್ನ ವಿರುದ್ಧದ ಆರೋಪ ಸುಳ್ಳು ಎಂದು ಸಾಬೀತು ಮಾಡಲು ದಾಖಲೆಗಳಿವೆ ಎಂದು ಕೃಷ್ಣಪ್ಪ ಆರೋಪವನ್ನು ತಳ್ಳಿಹಾಕಿದ್ದಾರೆ.

ಕೃಷ್ಣಪ್ಪ ವಿರುದ್ಧದ ಆರೋಪವೇನು? : ಬೆಂಗಳೂರಿನ ಉತ್ತರಹಳ್ಳಿಯ ಸರ್ವೆ ನಂಬರ್ 103/2 ರಲ್ಲಿ 39 ಗುಂಟೆ, 103/1 ರಲ್ಲಿ 36 ಗುಂಟೆ ಜಮೀನನ್ನು ಭೂ ಸ್ವಾಧೀನದಿಂದ ಅಕ್ರಮವಾಗಿ ಕೈಬಿಟ್ಟ ಆರೋಪ ಎಂ.ಕೃಷ್ಣಪ್ಪ ಅವರ ಮೇಲಿದೆ. [ಅಕ್ರಮ ಆಸ್ತಿ ಗಳಿಕೆ: ಶಾಸಕ ಎಂ ಕೃಷ್ಣಪ್ಪಗೆ ಫುಲ್ ರಿಲೀಫ್]
ಡಿನೋಟಿಫಿಕೇಷನ್ ಬಳಿಕ ರೈನ್‍ಬೋ ಪ್ರಾಪರ್ಟೀಸ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಆ ಜಮೀನಿನಲ್ಲಿ ಅಕ್ರಮವಾಗಿ ಬಹುಮಹಡಿ ವಸತಿ ಸಂಕೀರ್ಣ ನಿರ್ಮಾಣ ಮಾಡಿದ್ದಾರೆ ಎನ್ನುವುದು ಆರೋಪವಾಗಿದೆ. ಈ ಕಂಪನಿ ಕೃಷ್ಣಪ್ಪ ಅವರ ಪುತ್ರಿ ರೇಷ್ಮಾ ಸುಪ್ರಿತ್ ಹಾಗೂ ಅಳಿಯ ಸುಪ್ರಿತ್ ಅವರಿಗೆ ಸೇರಿದೆ.

ನಾನು ನಿರ್ದೋಷಿ : ರಾಜ್ಯಪಾಲರಿಗೆ ಬರೆದಿರುವ ಪತ್ರದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂ.ಕೃಷ್ಣಪ್ಪ ಅವರು, ನಾನು ನಿರ್ದೋಷಿ. ಈ ಬಗ್ಗೆ ಈ ಬಗ್ಗೆ ಎಲ್ಲಾ ದಾಖಲೆ ನೀಡಿದ್ದೇನೆ. ಆ ಸಂದರ್ಭದಲ್ಲಿ ನಾನು ಶಾಸಕನಾಗಿರಲಿಲ್ಲ. ಈ ಪತ್ರ ಮೂರು ತಿಂಗಳ ಹಿಂದೆ ಬರೆದಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications