ಬೇರೆ ಪಕ್ಷಗಳಂತೆ ಬಿಜೆಪಿ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಸುಳ್ಳು ಭರವಸೆ ಇರಲ್ಲ: ಸಚಿವ ಸುಧಾಕರ್
ಬೆಂಗಳೂರು, ಏಪ್ರಿಲ್ 3: ಕರ್ನಾಟಕದಲ್ಲಿ ಬಿಜೆಪಿಯ ಪ್ರಣಾಳಿಕೆ ಸಮಾಜದ ಪ್ರತಿ ವಲಯದ ಜನರ ಆಶೋತ್ತರಗಳು, ಅಭಿಲಾಷೆಗಳಂತೆ ಸಿದ್ಧಪಡಿಸಲಾಗುವುದು. ಕೇವಲ ಮತ ಗಳಿಕೆಯ ಉದ್ದೇಶಕ್ಕಾಗಿ ಏಜೆನ್ಸಿಗಳು ಬರೆದುಕೊಟ್ಟಂತೆ ಗ್ಯಾರಂಟಿ ಎಂದೆಲ್ಲ ಸುಳ್ಳು, ಪೊಳ್ಳು ಭರವಸೆಗಳನ್ನು ನೀಡುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದರು.
ಬೆಂಗಳೂರಿನಲ್ಲಿ ಬಿಬಿಎಂಪಿ ಹೋಟೆಲ್ ಅಸೋಸಿಯೇಷನ್ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು, ಸಮಾಜದ ಎಲ್ಲಾ ವರ್ಗದವರನ್ನು ಸಂಪರ್ಕಿಸಿ ಅವರಿಂದ ಅಭಿಪ್ರಾಯ ಪಡೆದು ಬಿಜೆಪಿ ಪ್ರಣಾಳಿಕೆ ರೂಪಿಸುತ್ತಿದೆ. ಚುನಾವಣೆ ಬಳಿಕ ಸರ್ಕಾರ ರಚನೆ ಮಾಡಿದಾಗ ಮುಂದಿನ 5 ವರ್ಷಗಳಲ್ಲಿ ಏನೆಲ್ಲಾ ಅನುಷ್ಠಾನಕ್ಕೆ ತರಬಹುದು, ಅದರ ಸಾಧಕ ಬಾದಕಗಳೇನು ಎಂದು ಯೋಗಿಚಿ ಪ್ರಣಾಳಿಕೆ ತಯಾರಿಸಲಾಗುತ್ತಿದೆ ಎಂದರು.

ಬೇರೆಯ ಪಕ್ಷಗಳು 1, 2, 3 ಗ್ಯಾರೆಂಟಿ ಎಂದು ಏಜೆನ್ಸಿಯವರು ಬರೆದುಕೊಟ್ಟಿದ್ದನ್ನು ಘೋಷಿಸುತ್ತಿವೆ. ಯೋಜನೆಗಳಿಗೆ ಬೇಕಾದ ಆರ್ಥಿಕ ಸಾಮರ್ಥ್ಯ, ಅನುಷ್ಠಾನ ಜಾರಿ ಕುರಿತು ಸ್ಪಷ್ಟವಾಗಿ ವಿಮರ್ಶೆ ನಡೆಸದೆ ಘೋಷಣೆಗಳ ಮೇಲೆ ಘೋಷಣೆ ಮಾಡುತ್ತಿವೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಇತರ ಪಕ್ಷಗಳು ವಿರುದ್ಧ ಹರಿಹಾಯ್ದರು.
ಗ್ರಾ.ಪಂ.ಮಟ್ಟಕ್ಕೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಸಾಧ್ಯವಾ?
ಈ ರೀತಿಯ ಗ್ಯಾರಂಟಿ ಪ್ರಣಾಳಿಕೆಗಳು ಕೇವಲ ಮತ ಕೀಳಲು ಆಕರ್ಷಕ ಪ್ರಣಾಳಿಕೆ ಮಾಡುವ ಪ್ರಯತ್ನ. ಇದರಿಂದ ರಾಜ್ಯದ ಅಭಿವೃದ್ಧಿ ಹಾಗೂ ಆ ಭರವಸೆಗಳ ಅನುಷ್ಠಾನ ಅಸಾಧ್ಯ. ಒಂದು ಪಕ್ಷ ರಾಜ್ಯದಲ್ಲಿ ಈಗಾಗಲೇ ಯಾತ್ರೆ ಮಾಡಿ ಒಂದೊಂದು ಗ್ರಾಮ ಪಂಚಾಯಿತಿಗೆ ಹೈಟೆಕ್ ಆಸ್ಪತ್ರೆ ನೀಡುವ ಭರವಸೆ ನೀಡಿದೆ. ಆದರೆ 45-46 ಹೊಸ ತಾಲೂಕುಗಳಾಗಿ ಅನೇಕ ವರ್ಷವಾಗಿದೆ. ಇಲ್ಲಿಯವರೆಗೆ ಆ ತಾಲೂಕಿಗೆ ಆಸ್ಪತ್ರೆ ಮಾಡಲು ಆಗಿಲ್ಲ. ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹೋಗಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಮಾಡಲು ಸಾಧ್ಯವೇ ಎಂಬುದನ್ನು ಯೋಚನೆ ಮಾಡದೆ ಮತ ಗಳಿಕೆಯ ತಂತ್ರ ಮಾಡುತ್ತಿದೆ ಎಂದು ಜೆಡಿಎಸ್ ಪ್ರಣಾಳಿಕೆ ಬಗ್ಗೆ ಸುಧಾಕರ್ ವ್ಯಂಗ್ಯವಾಡಿದರು.
ಬಿಜೆಪಿಯ ಪ್ರಣಾಳಿಕೆಯಲ್ಲಿ ಸುಳ್ಳಿನ ಅಂತೆ ಕಂತೆಗಳು ಇರುವುದಿಲ್ಲ. ಆದ್ದರಿಂದ ಸಮಾಜದ ಎಲ್ಲಾ ವರ್ಗದ ಜನಸಮೂದಾಯವರನ್ನು ಬಿಜೆಪಿಯು ಭೇಟಿ ಮಾಡಲಾಗುತ್ತಿದೆ. ಸೇವಾ ವಲಯದಲ್ಲಿ ಸೃಷ್ಟಿಯಾಗುವಷ್ಟು ಉದ್ಯೋಗ ಬೇರೆಲ್ಲೂ ಆಗುವುದಿಲ್ಲ.ಮುಂದಿನ ದಿನ ಹೊಟೇಲ್ ಕೆಲಸಗಾರರ ಬಳಿಯೂ ಸಲಹೆ ಪಡೆಯಲಾಗುವುದು. ಎಲ್ಲಾ ತರಹದ ಶಿಕ್ಷಣ ಇರುವವರಿಗೆ ಉದ್ಯೋಗ ನೀಡುವ ಉದ್ಯಮ ಇದಾಗಿದೆ ಎಂದು ಅವರು ವಿವರಿಸಿದರು.

ಹೋಟೆಲ್‌ಗಳಿಗೆ ಹೊಸ ವ್ಯವಸ್ಥೆಯಡಿ ಲೈಸನ್ಸ್ ವಿತರಣೆ
ಭಾರತದಲ್ಲೇ ಬೆಳಗಿನ ತಿಂಡಿ (ಬ್ರೇಕ್ ಫಾಸ್ಟ್) ಸಂಸ್ಕೃತಿ ಶುರುವಾಗಿದ್ದು ಕರಾವಳಿ ಭಾಗದ ಜಿಲ್ಲೆಯಾದ ಉಡುಪಿಯಿಂದ. ಎಲ್ಲಾ ನಗರಗಳಲ್ಲೂ ಸಾವಿರಾರು ದರ್ಶಿನಿಗಳು ಇವೆ. ಕೋವಿಡ್ ಸಮಯದಲ್ಲಿ ದೊಡ್ಡ ಹೊಡೆತ ತಿಂದ ಉದ್ಯಮ ಹೊಟೇಲ್ ಉದ್ಯಮ. ಆದರೂ ಉಚಿತವಾಗಿ ಹಲವಾರು ಜನರ ಹೊಟ್ಟೆ ತುಂಬಿಸಿ ದೊಡ್ಡ ಕಾರ್ಯವನ್ನು ಹೊಟೆಲ್‌ಗಳು ಮಾಡಿವೆ ಎಂದರು ಅವರು ಶ್ಲಾಘಿಸಿದರು.
ಹೀಗಾಗಿ ಉದ್ಯಮ ವಲಯ ಕೊಟ್ಟಿರುವ ಸಲಹೆಗಳು ಅತ್ಯಮೂಲ್ಯ. ಹೋಟೆಲ್‌ಗಳಿಗೆ ಪಾರದರ್ಶಕತೆಯಿಂದ ಲೈಸನ್ಸ್ ಕೊಡುವ ಕೆಲಸ ನಡೆಯಲಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ. ಅದಕ್ಕಾಗಿ ಒಂದು ಕೇಂದ್ರೀಕೃತ ವ್ಯವಸ್ಥೆ ಅಥವಾ ಏಕಗವಾಕ್ಷಿ ಪರವಾನಿಗೆ ಕೊಡಲು ಸಾಧ್ಯವಿದೆಯಾ ಅನ್ನುವುದನ್ನು ಪ್ರಣಾಳಿಕೆ ಸಮಿತಿ ಚರ್ಚಿಸಿ ಅದನ್ನು ಜಾರಿ ಮಾಡುವ ಬಗ್ಗೆ ಚಿಂತಿಸಲಿದ್ದೇವೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಇದೇ ಉದ್ಯಮದ (ಹೋಟೆಲ್) ಪರವಾಗಿದೆ. ಸರಕು ಸೇವಾ ತೆರಿಗೆ (GST)ಯನ್ನು ಶೇಕಡಾ 18% ನಿಂದ ಶೇಕಡಾ 5%ಕ್ಕೆ ಇಳಿಕೆ ಮಾಡಿದೆ. ಗ್ಯಾಸ್, ಕಚ್ಚಾ ತೈಲದ ದರ ಕಡಿಮೆ ಮಾಡುವ ಬಗ್ಗೆ ಈ ವಲಯದಿಂದ ಸಲಹೆ ಬಂದಿದೆ. ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಭಾರತಕ್ಕೆ ಹೊಡೆತ ಬಿದ್ದಿದೆ. ಆದರೂ ಅಮೆರಿಕದ ಒತ್ತಡಕ್ಕೆ ಬಗ್ಗದೆ ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಕಾರಣದಿಂದ ಐರೋಪ್ಯ ದೇಶಗಳು, ಪಾಕ್, ಬಾಂಗ್ಲಾದೇಶಗಳಿಗಿಂತ ಭಾರತದಲ್ಲಿ ಇವುಗಳ ದರ ಕಡಿಮೆ ಇದೆ ಎಂದು ಅವರು ಸರ್ಕಾರದ ಬೆಲೆ ಏರಿಕೆಯ ನಿರ್ಧಾರಗಳನ್ನು ಅವರು ಸಮರ್ಥಿಸಿಕೊಂಡರು.
ಕರ್ನಾಟಕದಿಂದಲೂ ಅತ್ಯಧಿಕ ಜಿಎಸ್‌ಟಿ ಸಂಗ್ರಹ
ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಕೊರೊನಾ ಪಿಡುಗು, ಲಾಕ್‌ಡೌನ್, ಹದಗೆಟ್ಟ ಆರ್ಥಿಕ ಪರಿಸ್ಥಿತಿಯಂತಹ ಸವಾಲುಗಳನ್ನು ಎದುರಿಸಿತ್ತು. ಆದಾಯ ಕಡಿಮೆ ಇದ್ದರೂ ಸರ್ಕಾರಿ ನೌಕರರಿಗೆ ಒಂದು ರೂಪಾಯಿ ವೇತನ ಕಡಿಮೆ ಮಾಡದ ದೇಶದ ಏಕಮಾತ್ರ ರಾಜ್ಯ ಕರ್ನಾಟಕವಾಗಿದೆ. ಅತಿವೃಷ್ಠಿ ಸಮಸ್ಯೆ ಎಡಬಿಡದೆ ಕಾಡಿದರೂ ಅನೇಕ ಸವಾಲುಗಳ ಮಧ್ಯೆ ಕರ್ನಾಟಕ ಭಾರತದಲ್ಲೇ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹಿಸಿ ಭಾರತದಲ್ಲಿ ನಂಬರ್ 2 ರಾಜ್ಯವಾಗಿದೆ ಎಂದರು.
ಇಂತಹ ಎಲ್ಲ ಸಂಕಷ್ಟಗಳ ಮಧ್ಯೆ ಸವಾಲುಗಳನ್ನು ಮೆಟ್ಟಿ ನಿಂತು ಯಶಸ್ಸು ಸಾಧಿಸಲಾಗಿದೆ. ಮುಂದಿನ ಬಾರಿಯೂ ಬಿಜೆಪಿಗೆ ಮತ ನೀಡಿ ಅಭಿವೃದ್ಧಿ ಕಾರ್ಯ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಮೋಹನ್, ಹೋಟೆಲ್ ಅಸೋಸಿಯೇಷನ್ ಪದಾಧಿಕಾರಿಗಳು, ಎಫ್ ಕೆಸಿಸಿಐ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications