ಬಿಜೆಪಿಯವರು ನಪುಂಸಕರು: ಸಿಎಂ ಇಬ್ರಾಹಿಂ ವಿವಾದಾತ್ಮಕ ಹೇಳಿಕೆ
ಬೆಂಗಳೂರು, ಅಕ್ಟೋಬರ್ 3: 'ಬಿಜೆಪಿಯವರು ನಪುಂಸಕರು, ನಾವು ಹುಟ್ಟಿಸಿದ ಮಕ್ಕಳನ್ನು ಕರೆದುಕೊಂಡು ಹೋಗಿ ಬೀದಿಪಾಲು ಮಾಡಿದ್ದಾರೆ' ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಗುರುವಾರ ಮಾತನಾಡಿದ ಅವರು, 'ಬಿಜೆಪಿಯವರು ನಮ್ಮ 17 ಮಕ್ಕಳನ್ನು ಮುಂಬೈಗೆ ಕರೆದುಕೊಂಡು ಹೋಗಿ ಇರಿಸಿದ್ದರು. ನಾವು ಹುಟ್ಟಿಸಿದವರನ್ನು ತಮ್ಮ ಮಕ್ಕಳು ಎಂದು ಹೇಳಿಕೊಂಡು ತಿರುಗಾಡುತ್ತಿದ್ದರು. ಈಗ ಅವರನ್ನೇ ಬೀದಿಪಾಲು ಮಾಡಿದ್ದಾರೆ. ಅವರ ಪರಿಸ್ಥಿತಿ ಈಗ ಅರ್ಹರೂ ಅಲ್ಲ, ಅನರ್ಹರೂ ಅಲ್ಲ ಎಂಬಂತಾಗಿದೆ. ಭಾರತದ ರಾಜಧಾನಿ ದೆಹಲಿಯ ಮುಂದೆ ರಾಜ್ಯದ ಮಾನಹರಾಜು ಹಾಕಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.
ಬಿಎಸ್ ಯಡಿಯೂರಪ್ಪ ಅವರು ಹೆಸರಿಗೆ ಮಾತ್ರ ಮುಖ್ಯಮಂತ್ರಿ. ಅವರಿಗೆ ಒಬ್ಬ ಕನ್ನಡಿಗನನ್ನು ಮೇಯರ್ ಆಗಿ ಆಯ್ಕೆ ಮಾಡಲು ಆಗಲಿಲ್ಲ. ಅಷ್ಟೇಕೆ, ಕೇಂದ್ರ ಸರ್ಕಾರದಿಂದ ಹತ್ತು ರೂಪಾಯಿ ನೆರೆ ಪರಿಹಾರವನ್ನೂ ತರಲು ಅವರಿಂದ ಸಾಧ್ಯವಾಗಲಿಲ್ಲ. ರಾಜ್ಯದಲ್ಲಿ 25 ಮಂದಿ ಬಿಜೆಪಿ ಸಂಸದರಿದ್ದಾರೆ. ಅವರಿಗೆ ಸ್ವಾಭಿಮಾನವಿದ್ದರೆ ಕೇಂದ್ರ ಸರ್ಕಾರದಿಂದ ನೆರೆ ಸಂತ್ರಸ್ತರಿಗೆ ಪರಿಹಾರದ ಹಣ ತರಲಿ. ಇಲ್ಲದಿದ್ದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದರು.

ಕೇಂದ್ರ ಸರ್ಕಾರದ ಖಜಾನೆ ಖಾಲಿಯಾಗಿದೆ. ಹೀಗಾಗಿ ಪರಿಹಾರ ಕೊಡಲು ಅವರ ಬಳಿ ದುಡ್ಡೇ ಇಲ್ಲ. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುತ್ತಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು












Click it and Unblock the Notifications