ಮೀಸಲಾತಿ ಬಗ್ಗೆ ಬಿಜೆಪಿ ಮುಖಂಡನ ಹೇಳಿಕೆ: ಉಚ್ಚಾಟನೆಗೆ ಎಎಪಿ ಆಗ್ರಹ
ಬೆಂಗಳೂರು, ಅಕ್ಟೋಬರ್ 25: ಮೀಸಲಾತಿಯನ್ನು ತೆಗೆದು ಒಗೆಯಿರಿ ಎಂದಿರುವ ಜಮಖಂಡಿ ಬಿಜೆಪಿ ಶಾಸಕ ಜಗದೀಶ್ ಗುಡಗುಂಟಿ ಅವರ ಹೇಳಿಕೆಗೆ ಆಮ್ ಆದ್ಮಿ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಪಕ್ಷದ ಮುಖಂಡರು ಒತ್ತಾಯಿಸಿದ್ದಾರೆ.
ಸೋಮವಾರ ಮಾಧ್ಯಮಗಳಿಗೆ ಈ ಕುರಿತು ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷದ ನಾಯಕ ಜಗದೀಶ್ ಸದಂ ಅವರು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಗುಡಗಂಟಿ ಅವರು ಮೀಸಲಾತಿ ತೆಗೆಯಿರಿ. ಎಲ್ಲರೂ ಟಾಪ್ ಕ್ಲಾಸ್ನಲ್ಲಿ ಬಂದು ಬಿಡುತ್ತಾರೆ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.

ಬಿಜೆಪಿ ಮುಖಂಡನ ಈ ಹೇಳಿಕೆ ಸಂಬಂಧ ಕಿಡಿಕಾರಿದ ಎಎಪಿ ಮುಖಂಡ ಜಗದೀಶ್ ವಿ ಸದಂ ಅವರು ಬಿಜೆಪಿಗರು ಸಂವಿಧಾನ ವಿರೋಧಿಗಳು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರು ಪ್ರಜಾಪ್ರಭುತ್ವ ವಿರೋಧಿಗಳು
ಬಡವರು ಮತ್ತು ಹಿಂದುಳಿದವರು ಎಲ್ಲರಂತೆ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದನ್ನು ಬಿಜೆಪಿಗರು ಸಹಿಸುವುದಿಲ್ಲ. ಎಸ್‌ಸಿ/ಎಸ್‌ಟಿ ಸೇರಿದಂತೆ ಇತರೆ ಹಿಂದುಳಿದ ವರ್ಗದವರು ಹಿಂದಿನಂತೆ ಕೂಲಿಗಳಾಗಿ, ಜೀತದಾಳುಗಳಾಗಿ ಬದುಕಬೇಕೆಂದು ಬಯಸುತ್ತಾರೆ. ಇವರು ಪ್ರಜಾಪ್ರಭುತ್ವ ವಿರೋಧಿಗಳು. ಬಿಜೆಪಿ ವಾಸ್ತವದಲ್ಲಿ ಸಂವಿಧಾನಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಗೌರವ ಕೊಡುವುದಿದ್ದರೆ ತಕ್ಷಣ ಜಗದೀಶ್ ಗುಡಗಂಟಿ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಿದರು.
ಮೀಸಲಾತಿ ಹಕ್ಕು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಅತ್ಯಮೂಲ್ಯ ಕೊಡುಗೆಯಾಗಿದೆ. ಮೀಸಲಾತಿಯು ನಮ್ಮ ದೇಶದ ದೃಢೀಕರಣದ ಒಂದು ವ್ಯವಸ್ಥೆಯಾಗಿದ್ದು ಅದು ಶಿಕ್ಷಣ, ಉದ್ಯೋಗ ಮತ್ತು ರಾಜಕೀಯದಲ್ಲಿ ಐತಿಹಾಸಿಕವಾಗಿ ಅನನುಕೂಲಕರ ಗುಂಪುಗಳಿಗೆ ಪ್ರಾತಿನಿಧ್ಯವನ್ನು ಒದಗಿಸುತ್ತದೆ.

ಮೀಸಲಾತಿಯಿಂದ ಸಹಾಯ
ಭಾರತೀಯ ಸಂವಿಧಾನದಲ್ಲಿನ ನಿಬಂಧನೆಗಳ ಆಧಾರದ ಮೇಲೆ, ಇದು ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಮತ್ತು ಪ್ರಾಂತ್ಯಗಳಿಗೆ ಮೀಸಲು ಕೋಟಾಗಳು ಅಥವಾ ಸೀಟುಗಳನ್ನು ಹೊಂದಿಸಲು ಅನುಮತಿಸುತ್ತದೆ. ಮೀಸಲಾತಿಯು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ನಾಗರಿಕರಿಗೆ ಪರೀಕ್ಷೆಗಳು, ಉದ್ಯೋಗಾವಕಾಶಗಳನ್ನು ಪಡೆಯುಲ್ಲಿ ಸಾಕಷ್ಟು ಸಹಾಯವಾಗಲಿದೆ ಎಂದು ಅವರು ಹೇಳಿದರು.












Click it and Unblock the Notifications