ಡಿಕೆಶಿ ಭದ್ರಕೋಟೆಯಲ್ಲಿ ಮೈತ್ರಿಕೂಟದ ಸಮಾವೇಶ, ಲೆಕ್ಕಾಚಾರಗಳು!
ಬೆಂಗಳೂರು, ಮಾರ್ಚ್ 06: ಈ ಬಾರಿಯ ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿವೆ. ಮೈತ್ರಿಕೂಟದ ಮೊದಲ ಸಮಾವೇಶ ಕುರಿತು ಈಗ ಚರ್ಚೆಗಳು ಆರಂಭವಾಗಿದೆ. ಡಿಕೆಶಿ ಸಹೋದರರ ಭದ್ರಕೋಟೆಯಲ್ಲಿ ಸಮಾವೇಶ ನಡೆಸಲು ಚಿಂತನೆ ನಡೆಸಲಾಗಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಜೆಡಿಎಸ್, ಬಿಜೆಪಿ ಪಕ್ಷಗಳ ಹಿರಿಯ ನಾಯಕರ ಜತೆ ಮಹತ್ವದ ಸಮಾಲೋಚನೆಯನ್ನು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನಡೆಸಿದರು. ಈ ಸಭೆಯಲ್ಲಿ ಸಮಾವೇಶ ನಡೆಸುವ ಕುರಿತು ಚರ್ಚೆಯಾಗಿದೆ.

ಈ ಸಭೆಯಲ್ಲಿ ಸಿ. ಪಿ. ಯೋಗೇಶ್ವರ, ಮುನಿರತ್ನ, ಡಿ. ನಾಗರಾಜಯ್ಯ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಬೆಂಗಳೂರು ದಕ್ಷಿಣ ಶಾಸಕರಾದ ಎಂ. ಕೃಷ್ಣಪ್ಪ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವಾರು ನಾಯಕರು ಪಾಲ್ಗೊಂಡಿದ್ದರು.
ಅಭ್ಯರ್ಥಿ ಘೋಷಣೆ: ಬೆಂಗಳೂರು ಗ್ರಾಮಾಂತರ ಡಿಕೆಶಿ ಸಹೋದರರ ಭದ್ರಕೋಟೆ. 2014 ಮತ್ತು 2019ರ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿಯೂ ಅವರು ಕಣಕ್ಕಿಳಿಯುವುದು ಖಚಿತವಾಗಿದೆ. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಯಾರಿಗೆ? ಎಂಬುದು ಇನ್ನೂ ಅಂತಿಮವಾಗಿಲ್ಲ.
ಒಂದು ವೇಳೆ ಕ್ಷೇತ್ರ ಬಿಜೆಪಿಗೆ ಮಾಜಿ ಸಚಿವ, ಎಂಎಲ್‌ಸಿ ಸಿ. ಪಿ. ಯೋಗೇಶ್ವರ ಟಿಕೆಟ್ ಆಕಾಂಕ್ಷಿ. ಈ ಕುರಿತು ಅವರು ಈಗಾಗಲೇ ಎಚ್. ಡಿ. ದೇವೇಗೌಡರ ಬಳಿ ಚರ್ಚೆ ನಡೆಸಿದ್ದಾರೆ. ಆದರೆ ಮೈತ್ರಿಕೂಟದಿಂದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಕುಣಿಗಲ್, ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಆನೇಕಲ್, ಮಾಗಡಿ, ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ ಕ್ಷೇತ್ರ ಸೇರುತ್ತದೆ. ಈ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಒಂದು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಆದ್ದರಿಂದ ಕ್ಷೇತ್ರ ಜೆಡಿಎಸ್‌ಗೆ ಸಿಕ್ಕಿದರೂ ಸಿಗಬಹುದು ಎಂಬುದು ಲೆಕ್ಕಾಚಾರವಾಗಿದೆ.
2023ರ ವಿಧಾನಸಭೆ ಚುನಾವಣೆ ಬಳಿಕ ಜೆಡಿಎಸ್ ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿತು. ಆದರೆ ಇನ್ನೂ ಸಹ ಬಿಜೆಪಿ-ಜೆಡಿಎಸ್ ಪಕ್ಷಗಳ ಸೀಟು ಹಂಚಿಕೆ ಅಂತಿಮವಾಗಿಲ್ಲ. ಈಗ ಮೈತ್ರಿಕೂಟದ ಮೊದಲ ಸಮಾವೇಶವನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಸಲು ಚರ್ಚೆ ನಡೆದಿದೆ.
2014ರ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌ನ ಡಿ. ಕೆ. ಸುರೇಶ್ 652,723 ಮತಗಳನ್ನು ಪಡೆದು ಜಯಗಳಿಸಿದರು. ಬಿಜೆಪಿಯ ಮುನಿರಾಜು ಗೌಡ 421,243 ಮತಗಳನ್ನು ಪಡೆದು ಸೋಲು ಕಂಡರು. ಜೆಡಿಎಸ್‌ನ ಪ್ರಭಾಕರ ರೆಡ್ಡಿ 317,870 ಮತಗಳನ್ನು ಪಡೆದು 3ನೇ ಸ್ಥಾನ ಪಡೆದರು.
2019ರ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಡಿ. ಕೆ. ಸುರೇಶ್ 878,258 ಮತಗಳನ್ನು ಪಡೆದು ಜಯಗಳಿಸಿದರು. ಬಿಜೆಪಿಯ ಅಶ್ವಥ್ ನಾರಾಯಣ ಗೌಡ 671,388 ಮತಗಳನ್ನು ಪಡೆದು ಸೋಲು ಕಂಡರು. ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಿವೆ.
ಲೋಕಸಭೆ ಚುನಾವಣೆಯಲ್ಲಿ ಡಿ. ಕೆ. ಶಿವಕುಮಾರ್ ಸಹೋದರ ಡಿ. ಕೆ. ಸುರೇಶ್ ಸೋಲಿಸುವ ಮೂಲಕ ಡಿಕೆಶಿಗೆ ಹಿನ್ನಡೆ ಉಂಟು ಮಾಡುವುದು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಲೆಕ್ಕಾಚಾರವಾಗಿದೆ. ಈ ಹಿಂದೆ ಎಚ್. ಡಿ. ಕುಮಾರಸ್ವಾಮಿಯೇ ಬೆಂಗಳೂರು ಗ್ರಾಮಾಂತರದಿಂದ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಹಬ್ಬಿತ್ತು.












Click it and Unblock the Notifications