ಮೋದಿಗೆ ಜೈ ಅಂದವರ ಮೇಲೆ ಹಲ್ಲೆ: ಬಿಜೆಪಿಯಿಂದ ಕಮೀಷನರ್‌ಗೆ ದೂರು
ಬೆಂಗಳೂರು, ಮಾರ್ಚ್ 19: ನಿನ್ನೆ (ಮಾರ್ಚ್ 18) ರಂದು ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ನಡೆದ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮದ ವೇಳೆ ಹೊರಗೆ ಮೋದಿ ಘೋಷಣೆಗಳನ್ನು ಕೂಗಿದವರ ಮೇಲೆ ಹಲ್ಲೆ ನಡೆಸಿರುವುದನ್ನು ವಿರೋಧಿಸಿ ಬಿಜೆಪಿ ಮುಖಂಡರು ಇಂದು ದೂರು ನೀಡಿದ್ದಾರೆ.
ರಾಹುಲ್ ಗಾಂಧಿ ಅವರು ನಿನ್ನೆ ಸಂವಾದ ಸ್ಥಳಕ್ಕೆ ಆಗಮಿಸುವ ಸಂದರ್ಭದಲ್ಲಿ ಮೋದಿ ಬೆಂಬಲಿಗರು, 'ಮೋದಿ, ಮೊದಿ' ಘೋಷಣೆ ಕೂಗಿ ರಾಹುಲ್ ಗಾಂಧಿಗೆ ಮುಜುಗರ ಉಂಟು ಮಾಡಿದರು. ಕಾಂಗ್ರೆಸ್‌ನ ಕಾರ್ಯಕರ್ತರೂ ಸಹ 'ಚೌಕೀದಾರ್ ಚೋರ್ ಹೇ' ಎಂದು ಅವರೊಂದಿಗೆ ವಾಗ್ವಾದಕ್ಕೆ ನಿಂತರು.
ಈ ಸಮಯ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಮೋದಿ ಘೋಷಣೆಗಳನ್ನು ಕೂಗುತ್ತಿದ್ದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.

ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು, ಇಂದು ಅಶೋಕ್ ನೇತೃತ್ವದಲ್ಲಿ ಬೆಂಗಳೂರು ಪೊಲೀಸ್ ಕಮೀಷನರ್ ಸುನಿಲ್ ಕುಮಾರ್ ಅವರನ್ನು ಭೇಟಿಯಾಗಿ ಈ ಬಗ್ಗೆ ದೂರು ಸಲ್ಲಿಸಿದರು.
ದೂರಿನಲ್ಲಿ, ರಾಹುಲ್ ಗಾಂಧಿ ಅವರು ಕರ್ನಾಟಕ ಪೊಲೀಸರನ್ನು ಬಳಸಿಕೊಂಡು ವಿರೋಧಿಗಳ ದನಿಯನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಟೆಕಿಗಳನ್ನು ಬಂಧಿಸಿರುವ ಪೊಲೀಸರ ಕ್ರಮ ಕಾನೂನು ಬಾಹಿರ ಎಂದು ಸಹ ದೂರಿನಲ್ಲಿ ತಿಳಿಸಲಾಗಿದೆ.
ದೂರಿನಲ್ಲಿ ಬೆಂಗಳೂರು ಪೊಲೀಸರ ವರ್ತನೆ ಬಗ್ಗೆ ಅಸಮಾಧಾನವನ್ನು ಬಿಜೆಪಿ ವ್ಯಕ್ತಪಡಿಸಿದ್ದು, ಟೆಕಿಗಳ ಮೇಲೆ ಲಾಠಿ ಬೀಸಿದ ಹಾಗೂ ಅವರನ್ನು ಬಂಧಿಸಿದವರ ವಿರುದ್ಧ ಕ್ರಮಕ್ಕೆ ಬಿಜೆಪಿ ಒತ್ತಾಯಿಸಿದೆ.












Click it and Unblock the Notifications