Bittu Tabahi: ಬೆಂಗಳೂರಿನ ತುರಹಳ್ಳಿ ಅರಣ್ಯ ಸ್ವಚ್ಛಗೊಳಿಸಿದ ಬಿಟ್ಟು ತಬಾಹಿ; 100 ಜನರ ತಂಡದೊಂದಿಗೆ ಬೃಹತ್ ಸ್ವಚ್ಛತಾ ಕಾರ್ಯಕ್ರಮ
ಪರಿಸರ ಕಾಳಜಿ ಕೇವಲ ಭಾಷಣಗಳಿಗೆ ಸೀಮಿತವಾಗುತ್ತಿರುವ ಇಂದಿನ ದಿನಗಳಲ್ಲಿ, ಅದನ್ನು ಕಾರ್ಯರೂಪಕ್ಕೆ ತರುವ ಮೂಲಕ ಮಧ್ಯಪ್ರದೇಶದ 20 ವರ್ಷದ ಯುವಕ ಬಿಟ್ಟು ತಬಾಹಿ ಎಲ್ಲರ ಗಮನ ಸೆಳೆದಿದ್ದಾರೆ. ಮಧ್ಯಪ್ರದೇಶದ ಅಜ್ನಾರ್ ನದಿಯನ್ನ ಒಬ್ಬರೇ, ಕೇವಲ ತನ್ನ ಸ್ವಂತ ಪರಿಶ್ರಮದಿಂದ ಸ್ವಚ್ಛಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಇವರು, ಇದೀಗ ತಮ್ಮ ಸ್ವಚ್ಛತಾ ಜಾಗೃತಿ ಅಭಿಯಾನವನ್ನು ನಮ್ಮ ಬೆಂಗಳೂರಿಗೂ ವಿಸ್ತರಿಸಿದ್ದಾರೆ.
ಹೌದು, ಸಿಲಿಕಾನ್ ಸಿಟಿಯ ಪ್ರಮುಖ ಹಸಿರು ತಾಣವಾದ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ತಮ್ಮ 100 ಜನರ ತಂಡದೊಂದಿಗೆ ಬೃಹತ್ ಸ್ವಚ್ಛತಾ ಕಾರ್ಯವನ್ನ ಕೈಗೊಳ್ಳುವ ಮೂಲಕ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ, ನಗರದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ತುರಹಳ್ಳಿ ಅರಣ್ಯ ಪ್ರದೇಶವು ಪ್ರಕೃತಿ ಪ್ರಿಯರ, ಟ್ರೆಕ್ಕಿಂಗ್ ಹಾಗೂ ಸೈಕ್ಲಿಂಗ್ ಮಾಡುವವರ ನೆಚ್ಚಿನ ತಾಣ. ಆದರೆ, ಇತ್ತೀಚೆಗೆ ಇಲ್ಲಿ ಬರುವವರು ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಇತರ ತ್ಯಾಜ್ಯಗಳು ಹೆಚ್ಚಾಗಿ ಬಳಸಿ ಅರಣ್ಯ ಪ್ರದೇಶಕ್ಕೆ ಎಸೆದಿದ್ದರಿಂದ ಪರಿಸರ ಹಾಳಾಗುತ್ತಿತ್ತು. ಇದನ್ನು ಅರಿತ ಬಿಟ್ಟು ತಬಾಹಿ, ಕೈಗೆ ಗ್ಲೌಸ್ ಮತ್ತು ಮುಖಕ್ಕೆ ಮಾಸ್ಕ್ ಧರಿಸಿ ಕಾಡಿನ ಸ್ವಚ್ಛತೆಗೆ ಮುಂದಾಗಿದ್ದಾರೆ.
ಈ ಬೃಹತ್ ಕಾರ್ಯದಲ್ಲಿ ಕೇವಲ ಅವರ ತಂಡ ಮಾತ್ರವಲ್ಲದೆ, ಬೆಂಗಳೂರಿನ ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ಕೂಡ ಸ್ವಯಂಪ್ರೇರಿತರಾಗಿ ಕೈಜೋಡಿಸಿದ್ದು ವಿಶೇಷವಾಗಿತ್ತು. ಸಾರ್ವಜನಿಕ ಸ್ಥಳಗಳನ್ನ ಸ್ವಚ್ಛವಾಗಿಡುವ ಬಗ್ಗೆ ಜಾಗೃತಿ ಮೂಡಿಸಲು ತಾವು ದೇಶದ ವಿವಿಧ ರಾಜ್ಯಗಳಿಗೆ ಪ್ರವಾಸ ಮಾಡುತ್ತಿರುವುದಾಗಿ ಬಿಟ್ಟು ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ತ್ಯಾಜ್ಯ ವಿಲೇವಾರಿಗೆ ಯಂತ್ರಗಳ ಬಳಕೆ
ಈ ಸ್ವಚ್ಛತಾ ಅಭಿಯಾನ ಕೇವಲ ಮೇಲೆ ಕಾಣುತ್ತೀರುವ ಕಸ ಎತ್ತುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಕಾಡಿನ ಮಣ್ಣಿನೊಳಗೆ ವರ್ಷಗಳ ಕಾಲದಿಂದ ಹೂತುಹೋಗಿದ್ದ ಪ್ಲಾಸ್ಟಿಕ್ ಹಾಗೂ ಅಪಾಯಕಾರಿ ತ್ಯಾಜ್ಯಗಳನ್ನ ಗುದ್ದಲಿ ಬಳಸಿ ಅಗೆದು ಹೊರತೆಗೆಯಲಾಯಿತು. ಮಣ್ಣಿನ ಬಹಳ ಆಳಕ್ಕೆ ಇಳಿದಿದ್ದ ತ್ಯಾಜ್ಯವನ್ನು ಮನುಷ್ಯರ ಕೈಯಿಂದ ತೆರವುಗೊಳಿಸಲು ಸಾಧ್ಯವಾಗದಿದ್ದಾಗ, ಜೆಸಿಬಿಯ ಮೊರೆ ಹೋಗಲಾಯಿತು.
ಹೀಗೆ ಕಾಡಿನ ಮೂಲೆ ಮೂಲೆಗಳಿಂದ ಕಷ್ಟಪಟ್ಟು ಸಂಗ್ರಹಿಸಲಾದ ಟನ್‌ಗಟ್ಟಲೆ ಕಸವನ್ನು ದೊಡ್ಡ ಚೀಲಗಳಲ್ಲಿ ತುಂಬಿ, ಮರುಬಳಕೆ ವಾಹನಗಳ ಮೂಲಕ ಅತ್ಯಂತ ಸುರಕ್ಷಿತವಾಗಿ ವಿಲೇವಾರಿ ಮಾಡಲಾಯಿತು. ಕಸವನ್ನು ವಾಹನಗಳಿಗೆ ತುಂಬುವಾಗಲೂ ತಂಡದ ಪ್ರತಿಯೊಬ್ಬ ಸದಸ್ಯರು ಶ್ರಮವಹಿಸಿ ಕೆಲಸ ಮಾಡಿದ್ದಾರೆ.
ಅಜ್ನಾರ್ ನದಿ ಸ್ವಚ್ಛತೆ ಮತ್ತು ಬಿಟ್ಟು ತಬಾಹಿ ಹಿನ್ನೆಲೆ
ಬಿಟ್ಟು ತಬಾಹಿ ಅವರ ನಿಜವಾದ ಹೆಸರು ಸುರೇಂದ್ರ ಸಿಂಗ್ ಚೌಧರಿ. ಕೇವಲ 20 ವರ್ಷ ವಯಸ್ಸಿನ ಈ ಯುವಕ, ಯಾವುದೇ ಸರ್ಕಾರದ ಆರ್ಥಿಕ ನೆರವಿಲ್ಲದೆ ಅಥವಾ ದೊಡ್ಡ ಎನ್‌ಜಿಒ ಬೆಂಬಲವಿಲ್ಲದೆ,ತನ್ನ ಸ್ವಂತ ಖರ್ಚಿನಲ್ಲಿ ತ್ಯಾಜ್ಯದಿಂದ ಕಲುಷಿತಗೊಂಡಿದ್ದ ಅಜ್ನಾರ್ ನದಿಯನ್ನ ಸ್ವಚ್ಛಗೊಳಿಸಿದ್ದರು.
ನದಿಯಲ್ಲಿದ್ದ ಪ್ಲಾಸ್ಟಿಕ್, ತ್ಯಾಜ್ಯಗಳನ್ನು ತೆರವುಗೊಳಿಸಿ ನದಿಗೆ ಮರುಜೀವ ನೀಡಿದ್ದರು. ಈ ಕೆಲಸದ ಮೊದಲು ಮತ್ತು ನಂತರದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದವು. ಯುವಕನ ಈ ಏಕಾಂಗಿ ಹೋರಾಟ ಅಸಂಖ್ಯಾತ ಜನರಿಗೆ ಸ್ಫೂರ್ತಿಯಾಗಿತ್ತು.
ದಿ ಓಷನ್ ಕ್ಲೀನಪ್ ಸಂಸ್ಥೆಯಿಂದ ಆಫರ್
ಬಿಟ್ಟು ಅವರ ಈ ಪರಿಸರ ಸೇವೆಯನ್ನ ಜಾಗತಿಕ ಮಟ್ಟದಲ್ಲಿ ಗುರುತಿಸಲಾಗಿದೆ. ಡಚ್ ಪರಿಸರವಾದಿ ಬೋಯನ್ ಸ್ಲಾಟ್ ಸ್ಥಾಪಿಸಿರುವ ಪ್ರಸಿದ್ಧ 'ದಿ ಓಷನ್ ಕ್ಲೀನಪ್'ಸಂಸ್ಥೆಯು ಬಿಟ್ಟು ತಬಾಹಿ ಅವರಿಗೆ ಉದ್ಯೋಗದ ಆಫರ್ ನೀಡಿದೆ. ಈ ಅವಕಾಶದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅವರು, ತಮ್ಮ ಈ ಪ್ರಯಾಣದಲ್ಲಿ ಬೆಂಬಲಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವ ವಿಡಿಯೋವನ್ನ ಹಂಚಿಕೊಂಡಿದ್ದಾರೆ.
ಪರಿಸರವನ್ನ ಕಾಪಾಡುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂಬುದನ್ನು ಬಿಟ್ಟು ತಬಾಹಿ ಸಾಬೀತುಪಡಿಸಿದ್ದಾರೆ. ಅಲ್ಲದೆ, ತಮ್ಮ ಮುಂದಿನ ಸ್ವಚ್ಛತಾ ಕಾರ್ಯಕ್ಕಾಗಿ ಯಾವ ರಾಜ್ಯಕ್ಕೆ ಭೇಟಿ ನೀಡಬೇಕು ಎಂದು ಸಾರ್ವಜನಿಕರಿಂದಲೇ ಸಲಹೆಯನ್ನ ಸಹ ಕೇಳಿದ್ದಾರೆ.


Click it and Unblock the Notifications
