ಹೆಬ್ಬಗೋಡಿ ಮೆಟ್ರೋ ನಿಲ್ದಾಣ: ಬಿಎಂಆರ್‌ಸಿಎಲ್ ಜತೆ ಬಯೋಕಾನ್ ಒಪ್ಪಂದ
ಬೆಂಗಳೂರು, ಅಕ್ಟೋಬರ್ 08: ನಮ್ಮ ಮೆಟ್ರೋ ಎರಡನೇ ಹಂತದ ಆರ್‌ವಿ ರಸ್ತೆ ಬೊಮ್ಮಸಂದ್ರ ಮಾರ್ಗದಲ್ಲಿನ ಹೆಬ್ಬಗೋಡಿ ನಿಲ್ದಾಣ ನಿರ್ಮಾಣಕ್ಕೆ ಬಯೋಕಾನ್ ಸಂಸ್ಥೆ ಒಪ್ಪಂದಕ್ಕೆ ಸಹಿ ಹಾಕಿದೆ.
ಸಂಸ್ಥೆಯ ಪ್ರಧಾನ ಕಚೇರಿಯ ಸಮೀಪದಲ್ಲಿ ಈ ನಿಲ್ದಾಣ ನಿರ್ಮಾಣವಾಗಲಿದ್ದು, ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ನೆರವು ನೀಡಲು ಯೋಜಿಸಿದೆ. ಈ ನಿಲ್ದಾಣವನ್ನು ದತ್ತು ಪಡೆಯಲಾಗುತ್ತದೆ ಎಂದು ಬಯೋಕಾನ್ ಮುಖ್ಯಸ್ಥೆ ಮಜುಂದಾರ್ ಷಾ ತಿಳಿಸಿದ್ದಾರೆ.
ನಗರದಲ್ಲಿ ಹಲವು ಮೂಲಸೌಕರ್ಯ ಕಾಮಗಾರಿಗಳು ಆರಂಭವಾಗಿದ್ದು, ಮೂರು ತಿಂಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಾಣುವ ವಿಶ್ವಾಸವಿದೆ ಎಂದರು.

ಬಯಕಾನ್ ಸಂಸ್ಥೆಯು ಬಿಎಂಆರ್‌ಸಿಎಲ್‌ಗೆ 65ಕೋಟಿ ರೂ ನೀಡಲಿದೆ. ಈ ಕ್ರಮವು ಪರಿಸರದ ಬಗೆಗಿನ ಕಂಪನಿ ಜವಾಬ್ದಾರಿಯನ್ನು ಪೂರೈಸಲು ಮತ್ತು ಚಲನಶೀಲತೆಗೆ ಪರ್ಯಾಯ ಮಾರ್ಗಗಳನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಮೆಟ್ರೋ ನಿರ್ಮಾಣವಾಗುವುದರಿಂದ ಸಂಚಾರ ದಟ್ಟಣೆ ಕೂಡ ಕಡಿಮೆಯಾಗಿದೆ. ಆರ್‌ವಿ ರಸ್ತೆ ಬೊಮ್ಮಸಂದ್ರದ ನಡುವೆ 18.82 ಕಿಮೀ ಯೋಜನೆಯಿದೆ. ಒಟ್ಟು 5744 ಕೋಟಿ ರೂ ವೆಚ್ಚದಲ್ಲಿ ಯೋಜನೆ ನಿರ್ಮಾಣವಾಗುತ್ತಿದೆ.
ಚಾಲಕ ರಹಿತ ಮೆಟ್ರೋ ಓಡಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ಎರಡನೇ ಹಂತದ ಮೆಟ್ರೋ ಯೋಜನೆಯಲ್ಲಿ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಮೊದಲ ಬಾರಿಗೆ ಚಾಲಕ ರಹಿತ ಮೆಟ್ರೋ ಓಡಾಟ ನಡೆಸಲಿದೆ.
ಕಮ್ಯುನಿಕೇಷನ್ ಬೇಸ್ಡ್ ಟ್ರೈನ್ ಕಂಟ್ರೋಲ್ ಸಿಗ್ನಲಿಂಗ್ ಸಿಸ್ಟಮ್ ತಂತ್ರಜ್ಞಾನವನ್ನು ಎರಡನೇ ಹಂತದ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತದೆ. ರೈಲನ್ನು ನಿಯಂತ್ರಣ ಕೊಠಡಿಯಿಂದಲೇ ನಿರ್ವಹಣೆ ಮಾಡಲಾಗುತ್ತದೆ. ಒಂದನೇ ಹಂತದಲ್ಲಿ ಈಗ ರೈಲು ಕಾರ್ಯಾಚರಣೆಗೊಳಿಸುತ್ತಿರುವ ವ್ಯವಸ್ಥೆಯಲ್ಲಿ ಡಿಟಿಜಿ ವ್ಯವಸ್ಥೆ ಇದೆ.












Click it and Unblock the Notifications