Tumakuru-Bengaluru Metro: ಬೆಂಗಳೂರು-ತುಮಕೂರು ಮೆಟ್ರೋ ಕಾಮಗಾರಿ ಆರಂಭದ ಬಗ್ಗೆ ಬಿಗ್ ಅಪ್ಡೇಟ್
Tumakuru-Bengaluru Metro: ಬೆಂಗಳೂರು ಮೆಟ್ರೋ ಜಾಲ ವಿಸ್ತರಣೆ ಆಗುತ್ತಲಿದೆ. ಹಾಗೆಯೇ ಇದೀಗ ಬಹುದಿನಗಳ ಬೇಡಿಕೆಯಾಗಿದ್ದ ಬೆಂಗಳೂರು-ತುಮಕೂರು ಮೆಟ್ರೋ ಕಾಮಗಾರಿ ಕೊನೆಗೂ ಆರಂಭದ ಬಗ್ಗೆ ಬಿಗ್ ಅಪ್ಡೇಟ್‌ವೊಂದು ಲಭ್ಯವಾಗಿದೆ. ಹಾಗಾದ್ರೆ, ಯಾವೆಲ್ಲಾ ಮಾರ್ಗದಲ್ಲಿ ಸಂಚಾರ ಮಾಡಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರು ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ಸಮಯ ಉಳಿತಾಯ ಹಾಗೂ ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ನಗರದ ಬಹುತೇಕ ಮಂದಿ ಮೆಟ್ರೋವನ್ನೇ ಅವಲಂಬನೆ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು, ಕೂಲಿ ಕಾರ್ಮಿಕರು, ಸಾಮಾನ್ಯ ಜನರಿಗೆ ತುಂಬಾ ಸಹಾಯ ಆದಂತಾಗಿದೆ. ಇದೀಗ ಮೆಟ್ರೋ ಮಾರ್ಗವನ್ನು ತುಮಕೂರಿನವರೆಗೂ ವಿಸ್ತರಣೆ ಮಾಡುವ ಕಾಮಗಾರಿ ಆರಂಭದ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

ಬಹು ಕಾಲದಿಂದಲೂ ಬೆಂಗಳೂರು-ತುಮಕೂರು ಮಾರ್ಗದಲ್ಲಿ ಮೆಟ್ರೋ ಆರಂಭ ಮಾಡಬೇಕೆಂಬ ಕೂಗುಗಳು ಕೇಳಿಬಂದಿದ್ದವು. ಅದರಂತೆಯೇ ಇದೀಗ ಯೋಜನೆಯು ಅಧಿಕೃತವಾಗಿ ಘೋಷಣೆಯಾಗಿದ್ದು, ಅಡಿಪಾಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾರಿಗೆಲ್ಲಾ ಅನುಕೂಲ?: ಬಿಎಂಆರ್‌ಸಿಎಲ್ ಮಹತ್ವಾಕಾಂಕ್ಷೆಯ ಅಂತರ್ ಜಿಲ್ಲಾ ಕಾರಿಡಾರ್ ಬಗ್ಗೆ ಡಿಪಿಆರ್ ಸಿದ್ಧತೆ ಮಾಡಲಾಗಿದೆ. ನಿರ್ಮಾಣ ಕಾರ್ಯಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದರ ವೆಚ್ಚ ಹಾಗೂ ವಿಸ್ತರಣೆ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ಇದರಿಂದ ಬೆಂಗಳೂರು-ತುಮಕೂರು ಜನರಿಗೆ ಹೆಚ್ಚು ಪ್ರಯೋಜನ ಆಗಲಿದೆ ಎಂದು ತಿಳಿಸಿದ್ದಾರೆ.
ವೆಚ್ಚ, ದೂರದ ವಿವರ: ಈ ಯೋಜನೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, ಆರ್‌ವಿ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್‌ಗೆ ಡಿಪಿಆರ್ ಸಲಹಾ ಕಾರ್ಯವನ್ನು ನೀಡಿದೆ. ಸಂಸ್ಥೆಯು 1.2 ಕೋಟಿ ರೂಪಾಯಿ ವೆಚ್ಚದ 59.60 ಕಿಲೋ ಮೀಟರ್ ಉದ್ದದ ಮೆಟ್ರೋ ಮಾರ್ಗಕ್ಕಾಗಿ ಡಿಪಿಆರ್ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಇದರ ಟೆಂಡರ್‌ಗಳನ್ನು ನವೆಂಬರ್ 2025ರಲ್ಲಿ ಕರೆಯಲಾಯಿತು.
ಒಟ್ಟು ವೆಚ್ಚ ಹಾಗೂ ನಿಲ್ದಾಣಗಳು: ಈ ಕಾರಿಡಾರ್ಗಾಗಿ ಅಧಿಕಾರಿಗಳು ಹಾಗೂ ತಜ್ಞರು ಕ್ಷೇತ್ರಮಟ್ಟದ ಅಧ್ಯಯನವನ್ನು ಪ್ರಾರಂಭ ಮಾಡಿದ್ದಾರೆ ಹಾಗೂ ನಮ್ಮ ಮೆಟ್ರೋದ 4ನೇ ಹಂತದ ವಿಸ್ತರಣೆಯ ಭಾಗವಾಗಿರುವ ಈ ಯೋಜನೆಯು 20,649 ಕೋಟಿ ರೂಪಾಯಿ ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚವಾಣ್ ತಿಳಿಸಿದ್ದಾರೆ ಎಂದು ವರದಿ ಆಗಿದೆ. ಇನ್ನೂ ಈ ಮಾರ್ಗವು ಒಟ್ಟು 26 ನಿಲ್ದಾಣಗಳನ್ನು ಹೊಂದಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ಮಾದವರದಿಂದ, ನಾಗಣ್ಣನಪಾಳ್ಯದ ಮೂಲಕ ತುಮಕೂರುವರೆಗೆ ಸಾಗಲಿದೆ.
ಇನ್ನೂ ಇದೀಗ ಕಾಮಗಾರಿಯ ಬಗ್ಗೆ ಸಮೀಕ್ಷೆಗಳು ನಡೆಯುತ್ತಿದೆ. ಸಂಚಾರ ಮತ್ತು ಪ್ರಯಾಣದ ಮಾದರಿಗಳ ಕುರಿತು ದತ್ತಾಂಶ ಸಂಗ್ರಹಣೆ, ಪ್ರಾಥಮಿಕ ಜೋಡಣೆ ಪರಿಶೀಲನೆಗಳು, ವಿವಿಧ ಮೌಲ್ಯಮಾಪನಗಳು ಮತ್ತು ಆರಂಭಿಕ ಭೂತಾಂತ್ರಿಕ ತನಿಖೆಗಳನ್ನು ನಡೆಸಲಾಗುತ್ತಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಇದರ ವಿಸ್ತರಣೆ ಬಗ್ಗೆಯೂ ಚರ್ಚೆಗಳು ಆಗಲಿವೆ ಎಂದು ಹೇಳಿದ್ದಾರೆ. ಇದನ್ನು ನಮ್ಮ ಮೆಟ್ರೋದ 4ನೇ ಹಂತದ ವಿಸ್ತರಣೆಯ ಭಾಗವಾಗಿ ಯೋಜಿಸಲಾಗಿದೆ ಎನ್ನಲಾಗುತ್ತಿದೆ.
ಇದು ಪೂರ್ಣಗೊಂಡರೆ, ಬೆಂಗಳೂರಿನ ವಾಯುವ್ಯ ಹೊರವಲಯ ಮತ್ತು ನಗರ ಕೇಂದ್ರದಿಂದ ಸುಮಾರು 70 ಕಿಲೋ ಮೀಟರ್ ದೂರದಲ್ಲಿರುವ ತುಮಕೂರು ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ನಿರೀಕ್ಷೆ ಇದೆ. ಕಳೆದ ವರ್ಷ ಮೇ ತಿಂಗಳಲ್ಲಿ ಬಿಎಂಆರ್‌ಸಿಎಲ್ ಸಲ್ಲಿಸಿದ ಡಿಪಿಆರ್ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿತ್ತು. ಬಳಿಕ ಡಿಪಿಆರ್‌ನೊಂದಿಗೆ ಮಾತುಕತೆ ನಡೆಸಿ ಮುಂದುವರೆದಿದೆ. ಗೃಹ ಸಚಿವ ಜಿ ಪರಮೇಶ್ವರ ಅವರು ಈ ಹಿಂದೆ ವರದಿಯನ್ನು ಅನುಮೋದಿಸಲಾಗಿದೆ ಎಂದು ಹೇಳಿದ್ದರು.
ನಿಲ್ದಾಣಗಳ ವಿವರ: ಮಕಾಲಿ, ದಾಸನಪುರ, ನೆಲಮಂಗಲ, ನೆಲಮಂಗಲ ಟೋಲ್‌ಗೇಟ್, ಟಿ. ಬೇಗೂರ್, ತಿಪ್ಪಗೊಂಡನಹಳ್ಳಿ, ಸೋಂಪುರ ಕೈಗಾರಿಕಾ ಪ್ರದೇಶ, ಡಾಬಸ್‌ಪೇಟೆ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಕ್ಯಾತಸಂದ್ರ, ತುಮಕೂರು ಬಸ್ ನಿಲ್ದಾಣ, ತುಡಾ ಲೇಔಟ್, ನಾಗಣ್ಣನಪಾಳ್ಯ ನಿಲ್ದಾಣಗಳು ಇರಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಬೆಂಗಳೂರು-ತುಮಕೂರು ನಡುವೆ ಮೆಟ್ರೋ ಮಾರ್ಗ ಆಗಬೇಕು ಎನ್ನುವ ಬೇಡಿಕೆ ಕೊನೆಗೂ ಈಡೇರಿದಂತಾಗಿದೆ.












Click it and Unblock the Notifications