BWSSB: ಬೆಂಗಳೂರು ಜಲಮಂಡಳಿಗೆ ದೊಡ್ಡ ರಿಲೀಫ್
ಬೆಂಗಳೂರು, ಮೇ 05: ಶೋಭಾ ಡೆವಲಪ್ಪರ್ ಸೇರಿದಂತೆ ಹಲವು ಪ್ರತಿಷ್ಠಿತ ಬಿಲ್ಡರ್‌ಗಳಿಂದ ಸಂಗ್ರಹ ಮಾಡಲಾಗಿದ್ದ ಕೋಟ್ಯಾಂತರ ರೂಪಾಯಿ ಬೆನಿಫಿಷಿಯರಿ ಕ್ಯಾಪಿಟಲ್ ಕಾಂಟ್ರಿಬ್ಯುಷನ್ (ಬಿಸಿಸಿ) ಶುಲ್ಕ ಮತ್ತು ಗ್ರೇಟರ್ ಬೆಂಗಳೂರು ಶುಲ್ಕವನ್ನು ಬೆಂಗಳೂರು ಜಲಮಂಡಳಿ ಸದ್ಯಕ್ಕೆ ನೀಡುವಂತಿಲ್ಲ. ಇದರಿಂದಾಗಿ ಜಲಮಂಡಳಿಗೆ ದೊಡ್ಡ ರಿಲೀಫ್ ಸಿಕ್ಕಿದೆ.
ಸಂಗ್ರಹ ಮಾಡಿದ್ದ ಶುಲ್ಕ ವಾಪಸ್ ನೀಡುವಂತೆ ಬೆಂಗಳೂರು ಜಲಮಂಡಳಿಗೆ ನಿರ್ದೇಶನ ನೀಡಿ ಕರ್ನಾಟಕ ಹೈಕೋರ್ಟ್ ಏಕಸದಸ್ಯಪೀಠ ನೀಡಿದ್ದ ಆದೇಶಕ್ಕೆ ವಿಭಾಗೀಯಪೀಠ ತಡೆ ನೀಡಿದೆ. ಏಕಸದಸ್ಯಪೀಠದ ತೀರ್ಪು ಪ್ರಶ್ನಿಸಿ ಬೆಂಗಳೂರು ಜಲಮಂಡಳಿ ಮೇಲ್ಮನವಿಯನ್ನು ಸಲ್ಲಿಸಿತ್ತು.

ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ಎಂ. ಶ್ಯಾಮ್ ಪ್ರಸಾದ್ ಮತ್ತು ನ್ಯಾಯಮೂರ್ತಿ ಟಿ. ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯಪೀಠ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಅಲ್ಲದೆ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.
ಪ್ರಕರಣದ ಹಿನ್ನೆಲೆ ಏನು?: ಕಳೆದ ಏಪ್ರಿಲ್ ತಿಂಗಳಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆ ಶೋಭಾ ಲಿಮಿಟೆಡ್ ಮತ್ತು ಬ್ರಿಗೇಡ್ ಎಂಟರ್‌ಪ್ರೈಸಸ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಬೆಂಗಳೂರು ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿ ಕೆಲವು ವರ್ಷಗಳಿಂದ ವಸತಿ ಕಟ್ಟಡಗಳಿಂದ ಅವುಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಸಂಗ್ರಹ ಮಾಡುತ್ತಿರುವ ಗ್ರೇಟರ್ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಯೋಜನಾ ಶುಲ್ಕ ಮತ್ತು ಬೆನಿಫಿಶಿಯರಿ ಕ್ಯಾಪಿಟಲ್ ಕಾಂಟ್ರಿಬ್ಯೂಷನ್ (ಬಿಸಿಸಿ) ಶುಲ್ಕಗಳು ಕಾನೂನುಬಾಹಿರ ಎಂದು ಮಹತ್ವದ ಆದೇಶ ನೀಡಿತ್ತು.
ಆದರೆ, ಜಲಮಂಡಳಿ ಹಾಲಿ ಬಹುಮಹಡಿಗಳಿಂದ ಸಂಗ್ರಹ ಮಾಡುತ್ತಿರುವ ಮುಂಗಡ ಪ್ರೊರೇಟಾ ಶುಲ್ಕ ಮತ್ತು ಕಟ್ಟಡಗಳ ನಿರ್ಮಾಣಕ್ಕಾಗಿ ಸಂಸ್ಕರಿತ ನೀರು ಶುಲ್ಕ ಸಂಗ್ರಹ ಕ್ರಮವನ್ನು ನ್ಯಾಯಾಲಯ ಎತ್ತಿ ಹಿಡಿದಿತ್ತು. ಆದರೆ, ಅರ್ಜಿದಾರರಿಂದ ಸಂಗ್ರಹಿಸಿರುವ ಬಿಸಿಸಿ ಹಾಗೂ ಗ್ರೇಟರ್ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಯೋಜನಾ ಶುಲ್ಕವನ್ನು ವಾಪಸ್ ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿತ್ತು.
ಕಾನೂನು ತಿದ್ದುಪಡಿಗೆ ಸಲಹೆ: ನ್ಯಾಯಾಲಯ, "ಅರ್ಜಿದಾರರು ಈಗಾಗಲೇ ಜಲಮಂಡಳಿಗೆ ಪಾವತಿ ಮಾಡಿರುವ ಬಿಸಿಸಿ ಶುಲ್ಕ ಮತ್ತು ಜಿಬಿಡಬ್ಲ್ಯುಎಸ್‌ಎಸ್‌ಪಿ ಶುಲ್ಕವನ್ನು ವಾಪಸ್ ಪಡೆಯಲು ಅರ್ಹರಾಗಿದ್ದಾರೆ. ಜಲಮಂಡಳಿ ಅವರಿಗೆ 12 ವಾರದಲ್ಲಿ ಹಣ ಮರು ಪಾವತಿ ಮಾಡಬೇಕು" ಎಂದು ಆದೇಶ ನೀಡಿತ್ತು.
ಜತೆಗೆ ರಾಜ್ಯ ಸರ್ಕಾರ ಅಥವಾ ಬೆಂಗಳೂರು ಜಲಮಂಡಳಿ, ಈ ಎರಡೂ ಶುಲ್ಕಗಳನ್ನು ವಿಧಿಸಲು ಬೆಂಗಳೂರು ನೀರು ಮತ್ತು ಒಳಚರಂಡಿ ಕಾಯಿದೆ-1964 ಮತ್ತು ಬೆಂಗಳೂರು ನೀರು ಪೂರೈಕೆ ರೆಗ್ಯುಲೇಷನ್ಸ್-1965ರಡಿ ಸೂಕ್ತ ತಿದ್ದುಪಡಿ ಮಾಡಿ ಆನಂತರ ಮುಂದಿನ ಕ್ರಮ ಜರುಗಿಸಬಹುದು ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿತ್ತು.












Click it and Unblock the Notifications