ಚುನಾವಣಾ ಆಯೋಗದಿಂದ ಮುನಿರಾಜು ಗೌಡಗೆ ರಿಲೀಫ್
ಬೆಂಗಳೂರು, ಅಕ್ಟೋಬರ್ 23 : ಬಿಜೆಪಿ ನಾಯಕ ಪಿ. ಮುನಿರಾಜು ಗೌಡಗೆ ಚುನಾವಣಾ ಆಯೋಗ ನೆಮ್ಮದಿ ನೀಡಿದೆ. ಚುನಾವಣಾ ಕಣಕ್ಕಿಳಿಯದಂತೆ ಹೇರಿದ್ದ ನಿಷೇಧವನ್ನು ಆಯೋಗ ಕಡಿತಗೊಳಿಸಿ ಆದೇಶ ಹೊರಡಿಸಿದೆ.
ಮುನಿರಾಜು ಗೌಡ ಮೂರು ವರ್ಷಗಳ ಕಾಲ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸದಂತೆ ಚುನಾವಣಾ ಆಯೋಗ ನಿಷೇಧ ಹೇರಿತ್ತು. 2019ರ ಜನವರಿ 9ರಂದು ಈ ಕುರಿತು ಆದೇಶ ಹೊರಡಿಸಿತ್ತು.
2014ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದ ಮುನಿರಾಜು ಗೌಡ 4,21,243 ಮತಗಳನ್ನು ಪಡೆದು ಸೋಲು ಕಂಡಿದ್ದರು. ಆದರೆ, ಚುನಾವಣಾ ವೆಚ್ಚದ ವಿವರವನ್ನು ಸೂಕ್ತವಾಗಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಆಯೋಗ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಿತ್ತು.

ಚುನಾವಣಾ ಆಯೋಗದ ಆದೇಶದ ಬಗ್ಗೆ ಮುನಿರಾಜು ಗೌಡ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಾಧಿಕಾರದ ಮುಂದೆ ಖುದ್ದಾಗಿ ಹಾಜರಾಗಿ ವಿವರಣೆ ನೀಡಿದ್ದರು. ಎಲ್ಲಾ ಅಂಕಿಗಳನ್ನು ಪರಿಶೀಲಿಸಿ ಹೊಸ ಆದೇಶವನ್ನು ಆಯೋಗ ಹೊರಡಿಸಿದೆ.
ಅಕ್ಟೋಬರ್ 17ರಂದು ಪ್ರಕಟವಾದ ಆದೇಶ ಅನ್ವಯ ಮುನಿರಾಜು ಗೌಡ ಮೇಲೆ ಹೇರಿದ್ದ ನಿಷೇಧದ ಅವಧಿಯನ್ನು ಕಡಿತಗೊಳಿಸಲಾಗಿದೆ. ಇನ್ನು 9 ತಿಂಗಳು 9 ದಿನಕ್ಕೆ ಅವಧಿ ಮುಕ್ತಾಯಗೊಳ್ಳಲಿದೆ.
ಮುನಿರಾಜು ಗೌಡ 2018ರ ವಿಧಾನಸಭೆ ಚುನಾವಣೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. 49, 216 ಮತಗಳನ್ನು ಪಡೆದು ಕಾಂಗ್ರೆಸ್‌ನ ಮುನಿರತ್ನ ವಿರುದ್ಧ ಸೋಲು ಕಂಡಿದ್ದರು.
ಜನಪ್ರತಿನಿಧಿಗಳ ಕಾಯ್ದೆ 1950ರ ಸೆಕ್ಷನ್ 11ರ ಪ್ರಕಾರ ಚುನಾವಣಾ ವೆಚ್ಚದ ಬಗ್ಗೆ ಸೂಕ್ತ ಮಾಹಿತಿ ನೀಡದಿದ್ದರೆ ಅಂತಹ ಅಭ್ಯರ್ಥಿಯನ್ನು ಮೂರು ವರ್ಷಗಳ ಕಾಲ ಚುನಾವಣಾ ಕಣಕ್ಕಿಳಿಯದಂತೆ ನಿಷೇಧಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ.












Click it and Unblock the Notifications