ಕನ್ನಡ ರಾಜ್ಯೋತ್ಸವದ ವೇಳೆಯೇ ದೊಡ್ಡ ಎಡವಟ್ಟು: ಕೆರಳಿದ ಕನ್ನಡಿಗರು
ಕನ್ನಡ ರಾಜ್ಯೋತ್ಸವಕ್ಕೆ ಇನ್ನು ಎರಡು ವಾರಗಳು ಮಾತ್ರ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಮಹಾ ಎಡವಟ್ಟು ಮಾಡಿಕೊಂಡಿದ್ದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಬೆಂಗಳೂರಿನಲ್ಲಿ ಮಳೆಯಿಂದ ಆಗಿರುವ ಅನಾಹುತದಿಂದಲೇ ಜನ ಈಗಾಗಲೇ ಬಿಬಿಎಂಪಿಗೆ ಛೀಮಾರಿ ಹಾಕುತ್ತಿದ್ದಾರೆ. ಬಿಬಿಎಂಪಿ ಸಮರ್ಪಕವಾಗಿ ಕೆಲಸ ಮಾಡದೆ ಇರುವುದರಿಂದಲೇ ನಾವು ಪರದಾಡುವಂತಾಗಿದೆ ಎನ್ನುವ ಆಕ್ರೋಶ ಇದೆ. ಈ ನಡುವೆ ಕನ್ನಡ ಭಾಷೆ ಬಳಕೆಯಲ್ಲಿ ಪಾಲಿಕೆ ಎಡವಟ್ಟು ಮಾಡಿಕೊಂಡಿದೆ.
ರಸ್ತೆಗುಂಡಿ,ಕಸ, ಮಳೆ ನೀರು ನಿಲ್ಲದಂತೆ ನಿರ್ವಹಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳಿಗೆ ಬಿಬಿಎಂಪಿಯ ಅಧಿಕಾರಿಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವುದು ಇದೆ. ಅಲ್ಲದೇ ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿ ಸೇರಿದಂತೆ ಹಲವು ವಿಷಯಗಳಿಗೆ ಬಿಬಿಎಂಪಿಗೆ ಸಾರ್ವಜನಿಕರು ಛೀಮಾರಿ ಹಾಕುವುದು ತಪ್ಪುತ್ತಿಲ್ಲ.

ಸೋಮವಾರದಿಂದ ಮೂರು ದಿನ ಸುರಿದ ಮಳೆಯಿಂದ ಬೆಂಗಳೂರಿನ ಹಲವು ಪ್ರದೇಶಗಳು ದ್ವೀಪದಂತೆ ಬದಲಾಗಿವೆ. ಹಲವು ರಸ್ತೆಗಳಲ್ಲಿ ನೀರು ನಿಂತು ಕೆರೆಯಂತೆ ಬದಲಾಗಿದ್ದವು. ಬೆಂಗಳೂರಿನ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಜನ ಪರದಾಡಿದ್ದಾರೆ. ಈ ಸಂಕಷ್ಟ ಹಾಗೂ ಬಿಬಿಎಂಪಿಯ ಎಡವಟ್ಟಿನ ಬಗ್ಗೆಯೇ ಜನರಲ್ಲಿ ಕೋಪ ಕಡಿಮೆಯಾಗಿಲ್ಲ. ಇದರ ನಡುವೆ ಬಿಬಿಎಂಪಿ ಕನ್ನಡ ಭಾಷೆಯನ್ನು ಕಡೆಗಣಿಸುವ ಮೂಲಕ ಕನ್ನಡಿಗರನ್ನು ಕೆಣಕಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನಾಯಿಗಳ ಉತ್ಸವವನ್ನು ಅಕ್ಟೋಬರ್ 17ರಂದು ಆಯೋಜಿಸಿತ್ತು. ಅದಕ್ಕೆ ಕುಕುರ್ ತಿಹಾರ್ ಎನ್ನುವ ಅನ್ಯಭಾಷೆಯ ಪದವನ್ನು ಬಳಸಿರುವುದಕ್ಕೆ ಕನ್ನಡಿಗರ ವಿರೋಧ ವ್ಯಕ್ತವಾಗಿದೆ. ನಗರದಲ್ಲಿ ನಾಯಿಗಳ ಸಂಕರಕ್ಷಣೆ ಹಾಗೂ ನಾಯಿಗಳ ಬಗ್ಗೆ ನಕಾರಾತ್ಮಕ ಚಿಂತನೆಯನ್ನು ಹೋಗಲಾಡಿಸುವ ಉದ್ದೇಶದಿಂದ ಬಿಬಿಎಂಪಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆದರೆ, ಕನ್ನಡದ ನೆಲ ಹಾಗೂ ಬೆಂಗಳೂರಲ್ಲಿ ಬಿಬಿಎಂಪಿಯಿಂದ ಹಾಗೂ ಜನರ ದುಡ್ಡಿನಲ್ಲಿ ನಡೆದಿರುವ ಕಾರ್ಯಕ್ರಮಕ್ಕೆ ಈ ರೀತಿಯ ಪದ ಬಳಕೆ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
ಬಿಬಿಎಂಪಿಯು ಒಳ್ಳೆಯ ಉದ್ದೇಶದಿಂದಲೇ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರೂ, ಈ ಪದ ಬಳಕೆಗೆ ಆಕ್ಷೇಪ ವ್ಯಕ್ತವಾಗಿದೆ. ಅದರಲ್ಲೂ ಕನ್ನಡ ರಾಜ್ಯೋತ್ಸವಕ್ಕೆ ಇನ್ನು ಕೇವಲ 2 ವಾರಗಳು ಬಾಕಿ ಉಳಿದಿದೆ. ರಾಜ್ಯೋತ್ಸವದ ಹೊಸ್ತಿಲಿನಲ್ಲಿ ಈ ರೀತಿ ಎಡವಟ್ಟು ಮಾಡಿಕೊಂಡಿರುವ ಪಾಲಿಕೆ ಸಾರ್ವಜನಿಕರು ಹಾಗೂ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಶ್ವಾನಗಳ ಉತ್ಸವ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ.
ಏನಿದು ಕುಕುರ್ ತಿಹಾರ್: ಬಿಬಿಎಂಪಿಯ ಪಶುಸಂಗೋಪನಾ ಇಲಾಖೆ ವತಿಯಿಂದ ಎಲ್ಲಾ ವಲಯಗಳ ಆಯ್ದ ಸ್ಥಳಗಳಲ್ಲಿ ಗುರುವಾರ ಶ್ವಾನ ಮಹೋತ್ಸವವನ್ನು ಆಚರಿಸಲಾಗಿದೆ. ಆದರೆ, ಈ ಕಾರ್ಯಕ್ರಮಕ್ಕೆ ಕುಕುರ್ ತಿಹಾರ್ ಎನ್ನುವ ಪದವನ್ನು ಬಳಸಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.
ಇನ್ನು ಬಿಬಿಎಂಪಿ 8 ವಲಯಗಳ ಒಂದೊಂದು ಸ್ಥಳದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ಥಳಕ್ಕೆ ಸಹ ಗುರುವಾರ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಎಲ್ಲಾ ಕಡೆ ಈ ಯೋಜನೆಯನ್ನು ಅನುಷ್ಠಾನ ಮಾಡುವುದಾಗಿ ಪಶು ಸಂಗೋಪನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ.
ಈ ಯೋಜನೆಯ ಬಗ್ಗೆ ಮಾತನಾಡಿರುವ ಪಶು ಸಂಗೋಪನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರು, ಬಿಬಿಎಂಪಿಯ ಪಶುಸಂಗೋಪನಾ ಇಲಾಖೆ ವತಿಯಿಂದ ಎಲ್ಲಾ ವಲಯಗಳ ಆಯ್ದ ಸ್ಥಳಗಳಲ್ಲಿ ಶ್ವಾನ ಮಹೋತ್ಸವ(ಕುಕುರ್ ತಿಹಾರ್) ಆಚರಿಸಲಾಗಿದೆ ಎಂದಿದ್ದರು. ಪಾಲಿಕೆ ಕೇಂದ್ರ ಕಚೇರಿಯ ಡಾ. ರಾಜ್ ಕುಮಾರ್ ಗಾಜಿನ ಮನೆಯ ಬಳಿ ಇದಕ್ಕೆ ಚಾಲನೆ ನೀಡಲಾಗಿತ್ತು.
ಬಿಬಿಎಂಪಿ ಪರಿಚಯಿಸಿರುವ ಯೋಜನೆಯ ಮೂಲಕ ಪೌರಕಾರ್ಮಿಕರು, ಬಿಬಿಎಂಪಿಯ ಆರೋಗ್ಯ ಅಧಿಕಾರಿಗಳು, ಪಶುಸಂಗೋಪನೆ ಅಧಿಕಾರಿಗಳು, ಪ್ರಾಣಿ ಪ್ರಿಯರು, ಪ್ರಾಣಿ ಪಾಲಕರು ಹಾಗೂ ಆಸಕ್ತ ಸಾರ್ವಜನಿಕರು ಸೇರಿ ಬೆಂಗಳೂರಿನ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಿಂದ ಬೀದಿ ನಾಯಿಗಳಿಗೆ ಆಹಾರ ಕೊಡುತ್ತಾರೆ. ಬೆಂಗಳೂರಲ್ಲಿ ಬೀದಿ ನಾಯಿಗಳಿಗೆ ಆಹಾರ ಸಿಗದೆ ಇರುವಂತ ಪ್ರದೇಶದಲ್ಲಿ ದಿನಕ್ಕೆ ಒಂದು ಟೈಮ್ ಆಹಾರ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications