ಬೆಂಗಳೂರಿನಲ್ಲಿ ಮೊದಲ ಬಾರಿಗೆ 'ಭುವನೇಶ್ವರಿ' ಕಂಚಿನ ಪ್ರತಿಮೆ: ಎಲ್ಲಿ ಸ್ಥಾಪನೆ?
ಬೆಂಗಳೂರು ಜುಲೈ 27: ಮುಂದಿನ ದಿನಗಳಲ್ಲಿ ನಾಡದೇವಿಯಾದ 'ಭುವನೇಶ್ವರಿ'ಗೆ ನಿತ್ಯ ಅರ್ಚನೆ ನೆರವೇರಲಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಾಂಬೆ 'ಭುವನೇಶ್ವರಿ'ಯ ಬೃಹತ್ ಕಂಚಿನ ಪ್ರತಿಮೆ ಸ್ಥಾಪಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿದೆ.
ನಾಡದೇವಿ ಭುವನೇಶ್ವರಿಯ ನಿತ್ಯ ಅರ್ಚನೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿನೂತನ ಯೋಜನೆಯನ್ನು ರೂಪಿಸಿದೆ. ಆಯೋಜನೆಯಡಿ ಬೆಂಗಳೂರಿನ ಜ್ಞಾನಭಾರತಿ ವ್ಯಾಪ್ತಿಯ ಕಲಾಗ್ರಾಮದಲ್ಲಿ ಒಟ್ಟು ಸುಮಾರು ಅರ್ಧ ಎಕರೆಯಷ್ಟು ಜಾಗದಲ್ಲಿ ತಾಯಿ 'ಭುವನೇಶ್ವರಿ'ಯ ಪ್ರತಿಮೆ ನಿರ್ಮಿಸಲು ಕನ್ನಡ ಹಾಗೂ ಸಂಸ್ಕ್ರತಿ ಇಲಾಖೆ ಸಚಿವರಾದ ವಿ. ಸುನೀಲ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈಗಾಗಲೇ ಪ್ರತಿಮೆ ನಿರ್ಮಾಣದ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ಶಿಲ್ಪಕಲಾ ಅಕಾಡೆಮಿಗೆ ವಹಿಸಲಾಗಿದೆ. ವಿಗ್ರಹ ಸಿದ್ಧವಾಗುತ್ತಿದ್ದಂತೆ ತಜ್ಞರ ಅಂಗೀಕಾರ ನಂತರ ಕನ್ನಡಾಂಬೆ ತಾಯಿ ಭುವನೇಶ್ವರಿಯ ಬೃಹತ್ ವಿಗ್ರಹ ನಗರದಲ್ಲಿ ತಲೆ ಎತ್ತಲಿದೆ ಎಂದು ಸುನಿಲ್ ಕುಮಾರ್ ಹೇಳಿದರು.

'ಭುವನೇಶ್ವರಿ' ವಿಗ್ರಹ ಸ್ಥಾಪನೆ ಇದೇ ಮೊದಲು
ವಿಶೇಷವೆಂದರೆ ಸರ್ಕಾರದ ವತಿಯಿಂದ ಈವರೆಗೂ ರಾಜ್ಯದಲ್ಲಿ ಎಲ್ಲಿಯೂ ಕನ್ನಡಾಂಬೆ 'ಭುವನೇಶ್ವರಿ'ಯ ವಿಗ್ರಹ ವನ್ನು ಸ್ಥಾಪಿಸಲಾಗಿಲ್ಲ. ಈ ಕಾರಣಕ್ಕಾಗಿಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಂಥದ್ದೊಂದು ವಿನೂತನ ಯೋಜನೆ ಕೈಗೊಳ್ಳಲಾಗಿದೆ. ಈ ಕುರಿತು ಕಾರ್ಯಯೋಜನೆ ರೂಪಿಸಲಾಗಿದೆ. ಅದರ ಪ್ರಕಾರ ಮೂರು ತಿಂಗಳಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಸಂಬಂಧಿಸಿದವರಿಗೆ ಸೂಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ವಿಗ್ರಹದ ವಿಶೇಷತೆ ಏನು
ಕರ್ನಾಟಕದ ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಭುವನೇಶ್ವರಿಯ ಪ್ರತಿಮೆ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಕನ್ನಡಾಂಬೆಯ ಬೃಹತ್ ವಿಗ್ರಹ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡುತ್ತಿದೆ. ಕಂಚಿನ ಬೃಹತ್ ವಿಗ್ರಹದ ಎತ್ತರ ಸುಮಾರು 30 ಅಡಿ ಇರಲಿದೆ. ಕಲಾಗ್ರಾಮದಲ್ಲಿನ 10 ಅಡಿ ಎತ್ತರದ ವೈಭವಪೀಠದಲ್ಲಿ ಈ ಬೃಹತ್ ವಿಗ್ರಹ ಸ್ಥಾಪಿತಗೊಳ್ಳಲಿದೆ. ಅಲ್ಲದೇ ವಿಗ್ರಹದೊಂದಿಗೆ ಕನ್ನಡ ನಾಡಿನ ಸಾಂಸ್ಕೃತಿಕ ವೈಭವ, ಗತಕಾಲದ ಹೆಮ್ಮೆಯ ವಿಷಯಗಳನ್ನು ಪ್ರತಿಬಿಂಬಿಸುವ ಚಿತ್ರಣ ಇಲ್ಲಿರಲಿದ್ದು, ಅವು ಜನರಿಗೆ ಮಾಹಿತಿ ನೀಡಲಿವೆ. ವಿಗ್ರಹದ ಸಿದ್ಧತೆಗೆ ಮತ್ತು ಅದರ ಪ್ರತಿಷ್ಠಾಪನಾ ಸ್ಥಳ ನಿರ್ಮಿಸಲು ಮೂರು ತಿಂಗಳು ಕಾಲಮಿತಿ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಪ್ರತಿಮೆ ನಿರ್ಮಾಣ ಯೋಜನೆಗೆ ಸಿಎಂ ಚಾಲನೆ
ಕಂಚಿನ ಬೃಹತ್ ವಿಗ್ರಹ ನಿರ್ಮಾಣ ಯೋಜನೆ ಕುರಿತು ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ವೇಳೆ ಮಾತನಾಡಿದ ಸಚಿವ ಸುನಿಲ್ ಕುಮಾರ್ ನವೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯೋಜನೆ ಆರಂಭಕ್ಕೆ ಚಾಲನೆ ನೀಡಲಿದ್ದಾರೆ. ಅಲ್ಲಿಂದ ಮೂರು ತಿಂಗಳು ಎಂದರೆ ಜನವರಿ 14ರ ಸಂಕ್ರಾಂತಿ ವೇಳೆಗೆ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದರು.

'ಭುವನೇಶ್ವರಿ' ಪ್ರತಿಮೆ ನಿರ್ಮಾಣ ಏಕೆ
ಕರ್ನಾಟಕದಲ್ಲಿ ಸಾಕಷ್ಟು ಗಣ್ಯರು, ಹೋರಾಟಗಾರರು ಮತ್ತು ಧೀಮಂತರ ಪುತ್ಥಳಿ, ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಆದರೆ, ಕನ್ನಡಿಗರನ್ನು ಅಪಾರವಾಗಿ ಸೆಳೆಯುವ ಈ ನಾಡು, ನುಡಿ, ನೆಲದ ಸಂಸ್ಕೃತಿ, ಪರಂಪರೆ ಬಿಂಬಿಸುವ ಕನ್ನಡಾಂಬೆಯ ವಿಗ್ರಹವನ್ನು ಸರ್ಕಾರ ಎಲ್ಲಿಯೂ ಸ್ಥಾಪಿಸಿರಲಿಲ್ಲ. ಈ ಕಾರಣದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ವಿನೂತನ ಚಿಂತನೆಯಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಕಲಾಗ್ರಾಮ ಬೆಂಗಳೂರಿನ ಪ್ರವಾಸಿ ತಾಣಗಳಲ್ಲಿ ಒಂದಾಗಿ ಗುರಿತಿಸಿಕೊಳ್ಳಲಿದೆ. ಪ್ರದೇಶವು ಅಭಿವೃದ್ಧಿ ಆಗಲಿದೆ. ಕಲಾಗ್ರಾಮದಲ್ಲಿ ನಿರ್ಮಾಣಗೊಂಡಿರುವ ಸಭಾಂಗಣದಲ್ಲಿ ನಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜನೆ ರೂಪಿಸುವಂತೆ ತಿಳಿಸಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications