ಭಾರತ್ ಬಂದ್: ರಾಜ್ಯ ರಾಜಧಾನಿಯಲ್ಲಿ ಬಂದ್ ಶಾಂತಿಯುತ ಯಶಸ್ವಿ !
ಬೆಂಗಳೂರು,
ನೂತನ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ಕರೆ ನೀಡಿದ್ದ "ಭಾರತ್ ಬಂದ್" ಗೆ ರಾಜಧಾನಿಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ರೈತ ಸಂಘ, ರಾಜಕೀಯ ಪಕ್ಷಗಳು, ಕನ್ನಡ ಪರ ಸಂಘಟನೆಗಳು, ಮಹಿಳಾ ಸಂಘಟನೆಗಳು ಬಂದ್‌ಗೆ ಬೆಂಬಲಿಸಿದವು. ನಗರದಲ್ಲಿ ವಾಹನ ಸಂಚಾರ, ಅಂಗಡಿ ಮುಂಗಟ್ಟುಗಳಿಗೆ ಯಾವುದೇ ಅಡೆ ತಡೆ ಇಲ್ಲದಿದ್ದರೂ, ಜನರಿಲ್ಲದೇ ಬಹುತೇಕ ವಹಿವಾಟು ಸ್ಥಗಿತಗೊಂಡಿತ್ತು. ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ರೈತರು ಘೋಷಣೆ ಕೂಗಿದರು. ಕೇಂದ್ರ ಪ್ರಧಾನಿಯವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. id="toptextpromo"> id='are-slot-1' class='oiad oi-axt oiadv'>ಲಾರಿ
ಸಂಚಾರ ಸ್ಥಗಿತ: ರಾಜ್ಯದಲ್ಲಿ ಸರಕು ಸಾಗಣೆಗೆ ದೊಡ್ಡ ಪೆಟ್ಟು ಬಿದ್ದಿತ್ತು. ಭಾರತ್ ಬಂದ್ ಬೆಂಬಲಿಸಿ ರಾಜ್ಯದ ಲಾರಿ ಮಾಲೀಕರು ನಾಲ್ಕು ಲಕ್ಷ ಲಾರಿಗಳ ಸಂಚಾರ ಸ್ಥಗಿತಗೊಂಡಿತ್ತು. ರಾಜ್ಯದಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡೆ ತಡೆ ಇಲ್ಲದಿದ್ದರೂ, ಸರಕು ಸಾಗಣೆ ಸಂಪೂರ್ಣ ಸ್ಥಗಿತಗೊಂಡಿತ್ತು. ಕೆ.ಆರ್. ಮಾರ್ಕೆಟ್, ಚಾಮರಾಜಪೇಟೆ ಸುತ್ತಮುತ್ತ ಲಾರಿಗಳು ನಿಂತಲ್ಲೇ ನಿಂತಿದ್ದವು. ಎಪಿಎಂಸಿಗಳಲ್ಲಿ ಸಹ ಸರಕು ಸಾಗಣೆ ವಹಿವಾಟು ಬಹುತೇಕ ಸ್ಥಗಿತಗೊಂಡಿತ್ತು. ಒಲಾ, ಉಬರ್ ಕ್ಯಾಬ್ ಗಳು ಸಹ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು. ಬಹುತೇಕ ಕ್ಯಾಬ್ ಸಂಚಾರ ಕೂಡ ರಾಜಧಾನಿಯಲ್ಲಿ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಸಮಸ್ಯೆಗೆ ಒಳಗಾಗಿದ್ದರು. id='are-slot-2' class='oiad oi-axt oiadv'>
ವಿಮಾನ ನಿಲ್ದಾಣಕ್ಕೆ ಭದ್ರತೆ
ಭಾರತ್ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ರೈತ ಸಂಘಟನೆ ಏರ್‌ಪೋರ್ಟ್‌ಗೆ ಮುತ್ತಿಗೆ ಹಾಕುವ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಿಲ್ದಾಣದ ಪ್ರಮುಖ ದ್ವಾರಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಿ ಬಿಟ್ಟರು. ಏರ್ ಪೋರ್ಟ್ ಸೇವೆ ಒದಗಿಸುತ್ತಿದ್ದ ಬಿಎಂಟಿಸಿ ಬಸ್ ಗಳು ಎಂದಿನಂತೆ ಸಂಚರಿಸಿದವು. ಒಂದು ಪಾಸ್‌ಗೆ ಒಬ್ಬರನ್ನು ಮಾತ್ರ ಬಿಡಲು ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೇ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಗೂ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ಹೋರಾಟ ನಿರತ ರೈತರು ಸಿಎಂ ಅವರ ಮನೆಗೆ ಮುತ್ತಿಗೆ ಹಾಕುವ ಸಾಧ್ಯತೆ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯಜಿಸಲಾಗಿತ್ತು.

ಬಿಗಿ ಪೊಲೀಸ್ ಬಂದೋಬಸ್ತ್
ಭಾರತ್ ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ನಗರಕ್ಕೆ ಹದಿನೈದು ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಐದು ಮಂದಿ ಹೆಚ್ಚುವರಿ ಪೊಲೀಸ್ ಆಯುಕ್ತರು, ನಗರದ ಎಲ್ಲಾ ಡಿಸಿಪಿ, ಎಸಿಪಿಗಳನ್ನು ಬೆಳಗಿನಿಂದಲೇ ಭದ್ರತೆಗೆ ನಿಯೋಜಿಸಲಾಗಿತ್ತು. ಮೂವತ್ತೈದು ಕೆಎಸ್ಆರ್ಪಿ, ಮೂವತ್ತೆರಡು ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು. ಬೆಂಗಳೂರಿನ ಟೌನ್ ಹಾಲ್ ರಸ್ತೆ, ಮೈಸೂರು ಬ್ಯಾಂಕ್ ರಸ್ತೆ ಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಭಲವಂತವಾಗಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಅವಕಾಶ ನೀಡಿರಲಿಲ್ಲ. ಸಾರ್ವಜನಿಕ ಆಸ್ತಿ ಗೆ ನಷ್ಟವಾಗದಂತೆ ಎಚ್ಚರಿಕೆ ನೀಡಿದ್ದರು.

ವಿನೂತನ ಪ್ರತಿಭಟನೆ
ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತರ ದಂಡು ಮೈಸೂರು ಬ್ಯಾಂಕ್ ವೃತ್ತದ ರಸ್ತೆ ಮೇಲೆ ಕೂತು ತಿಂಡಿ ತಿನ್ನುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅನ್ನ ಕಿತ್ತುಕೊಳ್ಳುತ್ತಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದ ರೈತರು ಅನ್ನದ ತಟ್ಟೆ ಹಿಡಿದು ತಿನ್ನಲು ಕೂತವರ ಬಾಯಿ ಹಾಗೂ ಕಣ್ಣು ಮಚ್ಚಿ ವಿನೂತನವಾಗಿ ಪ್ರತಿಭಟಿಸಿದರು. ಇದೇ ರೀತಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಡಾ.ಜಿ. ಪರಮೇಶ್ವರ, ಎಸ್.ಆರ್. ಪಾಟೀಲ್, ಬಿ.ಕೆ. ಹರಿ ಪ್ರಸಾದ್, ಕೆ.ಜೆ. ಜಾರ್ಜ್, ರಾಮಲಿಂಗರೆಡ್ಡಿ ಮತ್ತಿತರರು ಭಾಗವಹಿಸಿದ್ದರು. ಅದೇ ರೀತಿ ಜೆಡಿಎಸ್ ನ ಶಾಸಕರು ಸಹ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಭಾರತ್ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕೇಂದ್ರ ಸರ್ಕಾರ ಕಾರ್ಪೋರೇಟ್ ವಲಯದ ಕೈ ವಶವಾಗಿದೆ. ರೈತರ ವಿರೋಧಿ, ಕೃಷಿ ವಿರೋಧಿ ಕಾಯ್ದೆಗಳನ್ನು ಕೇಂದ್ರ ವಾಪಸು ಪಡೆಯಬೇಕು ಎಂದು ಆಗ್ರಹಿಸಿದರು. ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಟೌನ್ ಹಾಲ್ ಬಳಿ ಹೋರಾಟದ ಕಿಚ್ಚು
ಬೆಳಗ್ಗೆ ಹತ್ತು ಗಂಟೆಯಾಗುತ್ತಿದ್ದಂತೆ ವಿವಿಧ ರೈತ ಪರ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳು ಟೌನ್ ಹಾಲ್ ಬಳಿ ಜಮಾಯಿಸಿದವು. ಕಾರ್ಮಿಕ ಸಂಘಟನೆಗಳು ಕೂಡ ಈ ಹೋರಾಟದಲ್ಲಿ ಭಾಗಿಯಾಗಿದ್ದವು. ರೈತ ಮುಖಂಡ ಕೋಡಿಹಳ್ಳಿ ಚಂಧ್ರಶೇಖರ್, ಮುಖ್ಯಮಂತ್ರಿ ಚಂದ್ರು, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ (ಸಿಐಟಿಯು) ಎಸ್. ವರಲಕ್ಷ್ಮೀ ಮತ್ತಿತರರು ಪ್ರತಿಭಟನೆ ನಡೆಸಿದರು. ರೈತರು ಎತ್ತಿನ ಗಾಡಿಗಳಲ್ಲಿ ಆಗಮಿಸಿ, ಸೊಪ್ಪು, ತರಕಾರಿ ಬೆಳೆ ಹಿಡಿದು ಪ್ರತಿಭಟನೆ ಮಾಡಿದರು. ರೈತರ ಹೋರಾಟ ಬೆಂಬಲಿಸಿ ಕಾಂಗ್ರೆಸ್ ಪಕ್ಷದ ಮುಖಂಡರು ಪಾಳ್ಗೊಂಡಿದ್ದರು. ವಿ.ಎಸ್. ಉಗ್ರಪ್ಪ, ಎಚ್.ಎಂ. ರೇವಣ್ಣ ಅವರು ಹೋರಟದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಸಿಪಿಐಎಂ.ಎಸ್‌ಯುಸಿಐ, ಎಐಡಿಐಓ ಮತ್ತಿತರ ಸಂಘಟನೆಗಳು ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದವು. ಟೊಮ್ಯಾಟೋ, ಕೊತ್ತಂಬರಿ ಸೊಪ್ಪು, ಕೃಷಿ ಉತ್ಪನ್ನಗಳನ್ನು ಹಿಡಿದು ಹಸಿರುಸೇನೆ ಮುಖಂಡರು ಪ್ರತಿಭಟನೆ ನಡೆಸಿದರು.
ಜಾಥಾ ಮಾತಿನ ಚಕಮಕಿ: ಕನ್ನಡಪರ ಸಂಘಟನೆಗಳು, ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ವರೆಗೂ ಜಾಥಾ ನಡೆಸಿದರು. ಮೈಸೂರು ಬ್ಯಾಂಕ್ ವೃತ್ತದಲ್ಲಿ ರಸ್ತೆ ತಡಗೆ ಯತ್ನಿಸಿದ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ರಸ್ತೆ ಮೇಲೆ ಕೂತು ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸಹ ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡಿದರು.
Recommended Video

ಸಿಐಟಿಯು ಆಕ್ರೋಶ
ಕೃಷಿಯ ಮೂರು ಕಾಯ್ದೆಗಳು ಕಾರ್ಪೋರೇಟ್ ಕಂಪನಿಗಳಿಗೆ ಕೃಷಿಯನ್ನು ಅಡವಿಟ್ಟಿದಂತಾಗುತ್ತದೆ. ದಲ್ಲಾಳಿಗಳು ಬಂದ್ ಆಗ್ತಾರೆ ಅಂತ ಹೇಳ್ತಿದ್ದಾರೆ. ತಿಮಿಂಗಲ ರೂಪದಲ್ಲಿರುವ ಕಾರ್ಪೋರೇಟ್ ಕಂಪನಿಗಳೇ ಕೃಷಿಕರನ್ನು ಮುಗಿಸಲಿವೆ. ಕೇಂದ್ರ ಸರ್ಕಾರ ಈ ಕೂಡಲೇ ರೈತ ವಿರೋಧ ಕಾಯ್ದೆಗಳನ್ನು ವಾಪಸು ತೆಗೆದುಕೊಳ್ಳಬೇಕು. ಹಿಂಸೆಯ ಹಾದಿ ನಾವು ತುಳಿಯುತ್ತಿಲ್ಲ. ಇದೊಂದು ವಿಚಾರದ ಪ್ರತಿಭಟನೆ. ಹಾಗಾಗಿ ಶಾಂತಿಯುತ ಹೋರಾಟ ನಡೆಸುತ್ತಿರುವುದಾಗಿ ಅಂಗನವಾಡಿ ನೌಕರರ ಸಂಘ (ಸಿಐಟಿಯು) ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮ ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸೌಧ ರಸ್ತೆಯಲ್ಲಿ ಟೈರ್ ಗೆ ಬೆಂಕಿ: ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಕೃಷಿ ಕಾಯ್ದೆ ವಿರೋಧಿಸಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ದಲ್ಲಿ ವಿಧಾನೌಧ ಎದುರಲ್ಲೇ ಟಯರ್ ಗೆ ಬೆಂಕಿ ಹಚ್ಚಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಹಸಿರು ಬಾವುಟ ತೋರಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬೆಂಗಳೂರು ಮಾತ್ರವಲ್ಲದೇ, ಮೈಸೂರು, ಮಂಡ್ಯ, ಹುಬ್ಬಳ್ಳಿ ರಾಜ್ಯದಲ್ಲೆಡೆ ಭಾರತ್ ಬಂದ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಬಿಗಿ ಪೊಲೀಸ್ ಬಂದೋ ಬಸ್ತ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಪ್ರತಿಭಟನೆ, ರಸ್ತೆ ತಡೆ, ಸಂಚಾರ ವ್ಯವಸ್ಥೆ ಸ್ಥಗಿತ ಸೇರಿದಂತೆ ಶಾಂತಿಯುತ ಹೋರಾಟ ಯಶಸ್ವಿಯಾಯಿತು. ಬೆಳಗಿನಿಂದ ಸಂಜೆ ವರೆಗೂ ಜನ ಸಾಮಾನ್ಯರಿಗೆ ಬಂದ್ ನ ಬಿಸಿ ತಟ್ಟಿತ್ತು.












Click it and Unblock the Notifications