ಪ್ರಯಾಣಿಕರೆ ರೈಲಲ್ಲಿ ಇಲಿಗಳ ಬಗ್ಗೆ ಎಚ್ಚರಿಕೆ ಇರಲಿ!
ಬೆಂಗಳೂರು, ಡಿ. 18 : ಪ್ರಯಾಣಿಕರೆ ರೈಲಲ್ಲಿ ಇಲಿಗಳ ಬಗ್ಗೆ ಎಚ್ಚರಿಕೆ ಇರಲಿ! ರೈಲಿನಲ್ಲಿ ಕಳ್ಳರ ಬಗ್ಗೆ ಎಚ್ಚರಿಕೆಯಿಂದಿರಿ ಎಂಬ ಸಂದೇಶದ ಜೊತೆಗೆ ಇಂಥದೊಂದು ಎಚ್ಚರಿಕೆಯ ಸಂದೇಶವನ್ನು ಭಾರತೀಯ ರೈಲಿನಲ್ಲಿ ಲಗತ್ತಿಸುವ ಸಂದರ್ಭ ಒದಗಿಬಂದಿದೆ. ಮೈಸೂರಿನಲ್ಲಿ ಅರಣ್ಯ ಇಲಾಖೆ ನಡೆಸಿದ 'ಆಪರೇಷನ್ ಹುಲಿ'ಯಂತೆ ರೈಲುಗಳಲ್ಲಿ 'ಆಪರೇಷನ್ ಇಲಿ' ಮಾಡುವ ಅಗತ್ಯಬಂದಿದೆ.
ನಗಬೇಡಿ, ಇದು ಖಂಡಿತ ನಗುವಂಥ ವಿಷಯವಲ್ಲ! ಬೆಂಗಳೂರಿನ ಯಶವಂತಪುರದಿಂದ ಉತ್ತರ ಪ್ರದೇಶದ ಲಖನೌಗೆ ಹೊರಟಿದ್ದ ರೈಲಿನಲ್ಲಿ ಏಳು ವರ್ಷದ ಬಾಲಕಿಯನ್ನು ದೊಡ್ಡಗಾತ್ರದ ಇಲಿ(ಹೆಗ್ಗಣ)ಯೊಂದು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಯಶವಂತಪುರ-ಗೋರಖಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಕೆಲ ದಿನಗಳ ಹಿಂದೆ ಜರುಗಿದೆ.
ಡಿಸೆಂಬರ್ 9ರಂದು ನಡೆದ ಈ ಘಟನೆ ಸಾಮಾನ್ಯ ಘಟನೆಯಂತೆ ಕಂಡುಬಂದರೂ ರೈಲಿನಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರಲ್ಲಿ ಭೀತಿಯ ಅಲೆಯನ್ನು ಎಬ್ಬಿಸಿದೆ. ಪ್ಲಾಟ್ ಫಾರಂ ಮೇಲೆ ಅಲೆದಾಡುತ್ತಿದ್ದ ಈ ಇಲಿಗಳು ಈಗ ನೇರವಾಗಿ ರೈಲು ಹೊಕ್ಕು, ನಿರ್ಭೀತಿಯಿಂದ ಅಡ್ಡಾಡುತ್ತ ಪ್ರಯಾಣಿಕರಲ್ಲಿ ಭೀತಿಯನ್ನು ಹುಟ್ಟಿಸುತ್ತಿವೆ ಎಂದು ಪ್ರಯಾಣಿಕರು ದೂರು ನೀಡಿದ್ದಾರೆ.

ಅಡ್ಡಾಡುವುದು ಮಾತ್ರವಲ್ಲ, ಜನರು ಊಟ ಮಾಡುತ್ತಿರುವಾಗ ಅವರ ಆಹಾರವನ್ನು ಕಸಿದುಕೊಳ್ಳುವ ಧೈರ್ಯವನ್ನು ತೋರಿಸುತ್ತಿವೆ ಮತ್ತು ಪ್ರಯಾಣಿಕರ ಸಾಮಾನು ಸರಂಜಾಮುಗಳನ್ನು ಕಚ್ಚಿ ಹಾಳುಮಾಡುತ್ತಿವೆ. ಈ ಕುರಿತು ಟಿಸಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ರೈಲಿನಲ್ಲಿ ಇಲಿಗಳನ್ನು ಹೊಡೆಯುವಂತಹ ಮತ್ತು ಹಿಡಿಯುವಂತಹ ಯಾವುದೇ ಸಾಮಗ್ರಿಗಳು ತಮ್ಮ ಬಳಿ ಇಲ್ಲ ಎಂದು ಅವರು ಕೈತೊಳೆದುಕೊಂಡಿದ್ದಾರೆ. [ರೈಲಿನಲ್ಲಿ ಟೆಕ್ಕಿಗಳಿಂದ ಫುಡ್ ಕ್ರಾಂತಿ]
ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ರೈಲಿನಲ್ಲಿ ಊಟ ಮಾಡುವಾಗ ಅಲ್ಲಲ್ಲೇ ಚೆಲ್ಲಾಡುವುದು, ಸ್ವಚ್ಛವಾಗಿ ಇಟ್ಟುಕೊಳ್ಳದಿರುವುದು ಕೂಡ ಈ ಸಮಸ್ಯೆಯನ್ನು ಉಲ್ಬಣಗೊಳಿಸಿದೆ. ಮೊದಲಿಗೆ ಅಳಿದುಳಿದ ಆಹಾರವನ್ನು ತಿನ್ನಲು ಬರುತ್ತಿದ್ದ ಇಲಿಗಳು ಈಗ ಪ್ರಯಾಣಿಕರ ಮೇಲೆಯೇ ಎರಗುತ್ತಿವೆ ಎಂದು ಹಲವಾರು ಜನರು ದೂರಿದ್ದಾರೆ. ಲಖನೌನ ಸಂಜೀವ್ ಕುಮಾರು ಎಂಬುವವರು ತಮ್ಮ 6 ಬ್ಯಾಗ್ ಗಳನ್ನು ಇಲಿಗಳು ಕಚ್ಚಿ ಹಾಳುಗೆಡವಿವೆ ಎಂದು ದೂರಿದ್ದಾರೆ.
ಇಲಿಗಳ ಹಾವಳಿಯಿಂದಾಗಿ ರಾತ್ರಿ ಪ್ರಯಾಣಿಕರು ಮಲಗದೆ ಎಚ್ಚರಿಕೆಯಿಂದ ಇರುವಂತಾಗಿದೆ. ಕೆಳ ಬರ್ತ್ ನಲ್ಲಿ ಮಲಗುತ್ತಿರುವ ಪ್ರಯಾಣಿಕರು ಹೆಚ್ಚಿನ ಎಚ್ಚರಿಕೆಯಿಂದ ಇರುವುದು ಒಳಿತು. ರೈಲಿನಲ್ಲಿ ಇದ್ದ ವೈದ್ಯರೊಬ್ಬರು ಕೂಡಲೆ ಪ್ರಥಮ ಚಿಕಿತ್ಸೆ ನೀಡಿದರೂ ಬಾಲಕಿಗೆ ರೆಬೀಸ್ ಬರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂದು ವೈದ್ಯರು ಹೇಳಿದ್ದಾರೆ. [ಪ್ಯಾಸೆಂಜರ್ ರೈಲಲ್ಲೂ ತತ್ಕಾಲ್ ಬುಕ್ಕಿಂಗ್]












Click it and Unblock the Notifications