ಶುರುವಾಯಿತು ಮಳೆ, ಬೆಂಗಳೂರಲ್ಲಿ ಆತಂಕದ ಹೊಳೆ
ಬೆಂಗಳೂರು, ಏ. 29 : ಮಟಮಟ ಮಧ್ಯಾಹ್ನ ಮೂರು ಗಂಟೆಗೆಲ್ಲ ಸಂಜೆ ಆರರ ವಾತಾವರಣ. ಆಗಸದ ತುಂಬೆಲ್ಲ ಕಪ್ಪು ಮೋಡಗಳ ಛಪ್ಪರ. ಸಾಲದೆಂಬಂತೆ ಗಡಗಡ ನಡುಗಿಸುವ ಗುಡುಗು ಮತ್ತು ಮೋಡಗಳನ್ನು ಸೀಳಿಬರುವ ಮಿಂಚಿನ ಬಳ್ಳಿಗಳು. ಅಲೆಲೆ, ನೋಡನೋಡುತ್ತಿದ್ದಂತೆ ಮಳೆಯ ಆರ್ಭಟ ಶುರುವಾಗೇ ಬಿಟ್ಟಿದೆ.
ಕೂಡಲೆ ಅಲರ್ಟ್ ಆಗಿರುವ ಬೆಂಗಳೂರು ಸಿಟಿ ಪೊಲೀಸರು, ಕಪ್ಪಡರಿರುವ ಮೋಡದ ಫೋಟೋವನ್ನು ಫೇಸ್ ಬುಕ್ಕಿನಲ್ಲಿ ಹಾಕಿದ್ದು, ಸಂಜೆಯವರೆಗೆ ಮಳೆಯಾಗುವ ಸಾಧ್ಯತೆಯಿದೆ. ಮರದ ಕೆಳಗೆ ನಿಲ್ಲಬೇಡಿ, ವಾಹನಗಳನ್ನೂ ನಿಲ್ಲಿಸಬೇಡಿ. ವೈಪರ್ ಮತ್ತು ಇಂಡಿಕೇಟರ್ ಗಳನ್ನು ಬಳಸಿ. ಸಾಧ್ಯವಾದರೆ ಮಳೆಯಾಗುತ್ತಿರುವ ಫೋಟೋಗಳನ್ನು ಕಳಿಸಿ ಎಂಬ ಸಂದೇಶ ಬಿತ್ತರಿಸಿಯೇಬಿಟ್ಟರು.

ಮೊಬೈಲಲ್ಲಿ ಯಾವುದೇ ಸಮಯದಲ್ಲಿಯೂ ಫೇಸ್ ಬುಕನ್ನು ತೆರೆದುಕೊಂಡಿರುವ ಬುಕ್ಕಿಗಳು ಕೇಳಬೇಕಾ? ಕೂಡಲೆ ಕೆಲ ಫೋಟೋಗಳನ್ನು ಕಳಿಸಿದ್ದಾರೆ. ವರ್ತೂರಿನಲ್ಲಿ ಸಖತ್ ಮಳೆಯಾಗುತ್ತಿದೆ ಅಂತ ಒಬ್ಬ ಫೋಟೋ ರವಾನಿಸಿದ್ದರೆ, ನಮ್ಮ ಏರಿಯಾದಲ್ಲಿ ಸಣ್ಣಗೆ ಹನಿಗಳು ಉದುರುತ್ತಿವೆ ಅಂತ ಮತ್ತೊಬ್ಬ ಚಿತ್ರವೊಂದನ್ನು ರವಾನಿಸಿದ್ದ. [ಈ ಬಾರಿಯ ಮುಂಗಾರಿಗೂ ಎಲ್ ನಿನೋ ಕಾಟ]
ಸಣ್ಣ ಮಳೆ ಬಿದ್ದರೂ ಸಾಕು ಚರಂಡಿಗಳು 5 ಸೆಂ.ಮೀ. ಮಳೆ ಬಿದ್ದಂತೆ ತುಂಬಿ ತುಳುಕುತ್ತಿರುತ್ತವೆ, ಪೊಲೀಸರು ಜಾಗ ಖಾಲಿ ಮಾಡುತ್ತಿದ್ದಂತೆ, ಸಿಗ್ನಲ್ ಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ವಾಹನ ಸಂಚಾರ ಅಸ್ತವ್ಯಸ್ತವಾಗಿ ಟ್ರಾಫಿಕ್ ಜಾಮ್. ಇನ್ನು ರೇನ್ ಕೋಟ್, ಜರ್ಕಿನ್, ಛತ್ರಿ ಮರೆತುಬಂದಿದ್ದವರ ಪಾಡಂತೂ ದೇವರಿಗೇ ಪ್ರೀತಿ.
Posted by BENGALURU CITY POLICE on 29 April 2015
ಬೆಂಗಳೂರು ಮಳೆ ಅಂದರೆ, ಮನೆಯಲ್ಲಿ ಕಚೇರಿಯಲ್ಲಿ ಬೆಚ್ಚಗೆ ಕುಳಿತವರಿಗೆ ಸಂತೋಷ, ರಸ್ತೆಯಲ್ಲಿ ಸಿಲುಕಿಕೊಂಡವರಿಗೆ ಪ್ರಾಣಸಂಕಟ, ಎದೆಗೆ ಪುಸ್ತಕ ಅವಚಿ ಹೋಗುವ ಕಾಲೇಜು ಹುಡುಗಿಯರಿಗೆ ಮತ್ತು ಅವರನ್ನೇ ಹಿಂಬಾಲಿಸುವ ಹುಡುಗರಿಗೆ ಚೆಲ್ಲಾಟವೋ ಚೆಲ್ಲಾಟ. ಇನ್ನು ಪುಟ್ಟ ಮಕ್ಕಳು ಈ ಜಮಾನಾದಲ್ಲಿ ಕಾಗದದ ದೋಣಿ ಮಾಡಿ ಆಡುವುದನ್ನು ಕಲಿತೇ ಇಲ್ಲ ಬಿಡಿ.
ಇದು ಒಂದು ರೀತಿಯದಾದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಸಂಜೆ ನಡೆಯಬೇಕಿದ್ದ ಆರ್ಸಿಬಿ ವರ್ಸಸ್ ರಾಜಸ್ತಾನ ರಾಯಲ್ಸ್ ಕ್ರಿಕೆಟ್ ಆಟವನ್ನು ನೋಡಬೇಕೆಂದು ಟಿಕೆಟ್ ಖರೀದಿಸಿದವರಿಗೆ ನಿರಾಶೆ ಕಟ್ಟಿಟ್ಟ ಬುತ್ತಿ. ಈ ಪರಿ ಮಳೆ ಸುರಿಯುತ್ತಿದ್ದರೆ ಆಟ ನಡೆಯುವುದು ಅನುಮಾನ.











Click it and Unblock the Notifications