Bengaluru: ಉತ್ತರ ಬೆಂಗಳೂರಿನ ಸೈಟುಗಳಿಗೆ ಬೆಲೆ ನಿಗದಿ ಮಾಡಿದ ಬಿಡಿಎ : ಮಾಹಿತಿ, ದರ
ಬೆಂಗಳೂರು ಮಹಾನಗರದಲ್ಲಿ ಸ್ವಂತ ಸೂರು ಮಾಡಿಕೊಳ್ಳುವುದು ಎಷ್ಟೋ ಮಧ್ಯಮ ವರ್ಗದವರ ಕನಸು, ಇಂತಹ ಮಧ್ಯಮ ವರ್ಗದವರಿಗೆ ನಗರದ ಮಧ್ಯಭಾಗದಲ್ಲೋ, ಅಥವಾ ಪ್ರಮುಖ ಏರಿಯಾಗಳಲ್ಲೋ ಮನೆ ಕಟ್ಟುವುದು ಬಿಡಿ ಸೈಟು ತೆಗೆದುಕೊಳ್ಳುವುದು ಕೂಡ ಅಸಾಧ್ಯ, ಕೋಟಿ ಕೋಟಿ ಹಣ ಇದ್ದರಷ್ಟೆ ಇಂದು ಬೆಂಗಳೂರಿನಲ್ಲಿ ಪ್ರಮುಖ ಬಡಾವಣೆಗಳಲ್ಲಿ ಸೈಟು ತೆಗೆದುಕೊಳ್ಳಬಹುದು.
2023ರಲ್ಲಿ ಬೆಂಗಳೂರು ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಭಾರಿ ಅಭಿವೃದ್ಧಿಯಾಗಿದೆ. ದಿನದಿಂದ ದಿನಕ್ಕೆ ಭೂಮಿಯ ಬೆಲೆ ಗಗನಕ್ಕೇರುತ್ತಿದೆ. ಇಂತಹ ಸಂದರ್ಭದಲ್ಲಿ ಮಧ್ಯಮ ವರ್ಗದ ಜನರ ಮನೆಯ ಕನಸಿಗೆ ಆಸರೆಯಾಗಿರುವುದು ಬಿಡಿಎ. ಬಿಡಿಎ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ಕೈಗೆಟಕುವ ದರದಲ್ಲಿ ಸೈಟುಗಳ ಮಾರಾಟ ಮಾಡುತ್ತಿದೆ.
ಆದರೆ, ಈ ಬಾರಿ ಬಿಡಿಎ ಉತ್ತರ ಬೆಂಗಳೂರಿನಲ್ಲಿ ಅಭಿವೃದ್ಧಿ ಮಾಡಿರುವ ನಿವೇಶನಗಳು ಸಾಮಾನ್ಯ ವರ್ಗದವರ ಕೈಗೆಟುಕದಷ್ಟು ದುಬಾರಿಯಾಗಿವೆ. ಉತ್ತರ ಬೆಂಗಳೂರಿನ ಡಾ.ಶಿವರಾಮ ಕಾರಂತ್ ಲೇಔಟ್‌ನಲ್ಲಿರುವ 34,000 ನಿವೇಶನಗಳ ಪೈಕಿ ಅರ್ಧದಷ್ಟು ನಿವೇಶನಗಳು ಮಾರುಕಟ್ಟೆ ದರಕ್ಕೆ ಮಾರಾಟವಾಗಲಿದ್ದು ದುಬಾರಿ ಬೆಲೆ ನಿಗದಿ ಮಾಡಲಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) 30x40 ಮತ್ತು 40x60 ಸೇರಿದಂತೆ ಮೂರು ಅಳತೆಯ ನಿವೇಶನಗಳಿಗೆ ಪ್ರತಿ ಚದರ ಅಡಿಗೆ 4,900 ರೂ.ಗಳನ್ನು ನಿಗದಿಪಡಿಸಿದ್ದು, ಈ ಆರ್ಥಿಕ ವರ್ಷದ ಅಂತ್ಯದೊಳಗೆ ಅವುಗಳನ್ನು ಸಾಮಾನ್ಯ ಜನರಿಗೆ ಹಂಚಿಕೆ ಮಾಡಲು ಯೋಜಿಸಿದೆ. ಇದು ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗೆ ಸಮನಾಗಿರುತ್ತದೆ ಎಂದು ಡೆಕ್ಕನ್ ಹೆರಾಲ್ಡ್ ವರದಿಯಲ್ಲಿ ತಿಳಿಸಿದೆ.
ಬಿಡಿಎ ತನ್ನ ಇತ್ತೀಚಿನ ಮಂಡಳಿಯ ಸಭೆಯಲ್ಲಿ ಈ ನಿವೇಶನಗಳಿಗೆ ಬೆಲೆಯನ್ನು ನಿಗದಿಪಡಿಸಿದೆ ಎಂದು ವಿಶ್ವಾಸಾರ್ಹ ಮೂಲಗಳು ಹೇಳಿರುವುದಾಗಿ ಡಿಹೆಚ್ ವರದಿ ಮಾಡಿದೆ.
ಆರಂಭದಲ್ಲಿ, ಅಧಿಕಾರಿಗಳು ಸೈಟ್‌ಗಳ ಅಳತೆಯ ಆಧಾರದ ಮೇಲೆ ಬೇರೆ, ಬೇರೆ ಬೆಲೆಯನ್ನು ನಿಗದಿ ಮಾಡಲು ಪರಿಗಣಿಸಿದರು ಆದರೆ ನಂತರ ಎಲ್ಲಾ ಸೈಟುಗಳಿಗೆ ಪ್ರತಿ ಚದರ ಅಡಿಗೆ ರೂ 4,900 ಗೆ ನಿಗದಿ ಮಾಡಲಾಗಿದೆ.
2016 ಮತ್ತು 2018 ರಲ್ಲಿ ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ಬಿಡಿಎ ಇನ್ನೂ ರಸ್ತೆಗಳು ಮತ್ತು ಚರಂಡಿಗಳಂತಹ ಮೂಲ ಸೌಕರ್ಯಗಳನ್ನು ಒದಗಿಸದಿದ್ದರೂ ಸಹ ಕಡಿಮೆ ಬೆಲೆಗೆ ಸೈಟ್‌ಗಳನ್ನು ಮಾರಾಟ ಮಾಡಿತ್ತು. ಪ್ರತಿ ಚದರ ಅಡಿಗೆ 2,200 ರಿಂದ 2,400 ರೂ. ನಿಗದಿ ಮಾಡಿತ್ತು, ಖರೀದಿದಾರರಿಗೆ ನಿವೇಶನ ಹಂಚಿಕೆಯನ್ನು ವಿಳಂಬ ಮಾಡುವ ಮೂಲಕ ಬಿಡಿಎ ತನ್ನ ಹಿಂದಿನ ಯೋಜನೆಯಾದ ಅರ್ಕಾವತಿ ಲೇಔಟ್ ವಿವಾದದಿಂದ ಸಾರ್ವಜನಿಕರಿಂದ ಪ್ರತಿಕ್ರಿಯೆ ಉತ್ತಮವಾಗಿರಲಿಲ್ಲ.
ಉತ್ತಮ ಮಾರಾಟದ ನಿರೀಕ್ಷೆ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಮತ್ತು ಮುಂಬರುವ ಪೆರಿಫೆರಲ್ ರಿಂಗ್ ರೋಡ್ (ಪಿಆರ್ಆರ್) ಗೆ ಶಿವರಾಮ ಕಾರಂತ್ ಲೇಔಟ್ ಸಮೀಪದಲ್ಲಿರುವ ಕಾರಣ ನಿವೇಶನಗಳಿಗೆ ಬೇಡಿಕೆ ಉತ್ತಮವಾಗಿರಲಿದೆ ಎಂದು ಬಿಡಿಎ ನಂಬಿದೆ.
ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ನೇತೃತ್ವದ ಸುಪ್ರೀಂ ಕೋರ್ಟ್ ಸಮಿತಿಯು ಯೋಜನೆಯ ಮೇಲ್ವಿಚಾರಣೆ ನಡೆಸಿದ್ದರಿಂದ, ಉದ್ಯಾನವನಗಳು ಮತ್ತು ಆಟದ ಮೈದಾನಗಳಿಗೆ ಸಾಕಷ್ಟು ಜಾಗವನ್ನು ಮೀಸಲಿಡುವ ಮೂಲಕ ಬಿಡಿಎ ನಿಯಮಾವಳಿಗಳನ್ನು ಅನುಸರಿಸಿ ನಿವೇಶನ ಅಭಿವೃದ್ಧಿಪಡಿಸಿದೆ ಎಂದು ಹೇಳಿದೆ.
ಹಾರೋಹಳ್ಳಿ, ಆವಲಹಳ್ಳಿ, ರಾಮಗೊಂಡನಹಳ್ಳಿ, ಕೆಂಪನಹಳ್ಳಿ, ಜರಕಬಂಡೆ ಕಾವಲ್, ದೊಡ್ಡಬೆಟ್ಟಹಳ್ಳಿ, ವಡೇರಹಳ್ಳಿ ಹೀಗೆ 17 ಗ್ರಾಮಗಳಲ್ಲಿ ಹರಡಿಕೊಂಡಿರುವ ಬಡಾವಣೆಯಲ್ಲಿ ಒಟ್ಟು 34 ಸಾವಿರ ನಿವೇಶನಗಳು ಇರುವ ನಿರೀಕ್ಷೆ ಇದೆ. ಈ ಪೈಕಿ ಬಿಡಿಎ ಮೊದಲು ಭೂಮಿ ಬಿಟ್ಟುಕೊಟ್ಟ ರೈತರಿಗೆ ಪ್ರತಿಯಾಗಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಮಂಜೂರು ಮಾಡಿ ಪರಿಹಾರ ನೀಡಬೇಕಿದ್ದು ನಂತರ ಉಳಿಯುವ ಸುಮಾರು 15,000 ಸೈಟ್‌ಗಳನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು.
ರೈತರಿಗೆ ಪರಿಹಾರ ಸಿಕ್ಕಿಲ್ಲ
ಕಳೆದ ಎರಡು ವರ್ಷಗಳ ಹಿಂದೆಯೇ ರೈತರು ಭೂಮಿಯನ್ನು ಬಿಟ್ಟುಕೊಟ್ಟರೂ ಇನ್ನೂ ಪರಿಹಾರ ನೀಡಿಲ್ಲ. ಇಲ್ಲಿಯವರೆಗೆ, ಬಿಡಿಎ 30,000 ನಿವೇಶನಗಳ ರಚನೆ ಪೂರ್ಣಗೊಳಿಸಿದೆ. ರೈತರಿಗೆ ಮತ್ತು ಸಾರ್ವಜನಿಕರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭಿಸುವಲ್ಲಿ ಬಿಡಿಎ ತಡ ಮಾಡಿದೆ.












Click it and Unblock the Notifications