Bengaluru 2nd International Airpot: ವಿಮಾನ ನಿಲ್ದಾಣ ಸ್ಥಳ ಫೈನಲ್: ಈ ಪ್ರಭಾವಿ ರಾಜಕಾರಣಿಗಳಿಗೆ ಹಿನ್ನಡೆ!
ಬೆಂಗಳೂರು, ಮಾರ್ಚ್ 25: ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಗೆ ವೇಗ ಸಿಕ್ಕಿದೆ. ಬೆಂಗಳೂರಿನಲ್ಲೇ (Bengaluru Second International Airprot) ನಿರ್ಮಿಸಲಾಗುವುದು ಎಂದು ಈಗಾಗಲೇ ಸರ್ಕಾರ ಕಡ್ಡಿ ಮುರಿದಂತೆ ತಿಳಿಸಿದೆ. ಈ ಸಂಬಂಧ ನಗರಕ್ಕೆ ಹತ್ತಿರವಿರುವ ಮೂರು ಜಾಗಗಳನ್ನು ಫೈನಲ್ ಮಾಡಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಹೊಸ ಏರ್‌ಪೋರ್ಟ್ ವಿಚಾರವಾಗಿ ಕರ್ನಾಟಕದೊಂದಿಗೆ ತಮಿಳುನಾಡು ಪೈಪೋಟಿಗೆ ಬಿದ್ದಂತೆ ವರ್ತಿಸಿದರೆ, ನಮ್ಮ ರಾಜ್ಯದಲ್ಲಿ ಕೆಲವು ನಾಯಕರ ಮಧ್ಯೆಯೇ ಏರ್‌ಪೋರ್ಟ್ ನಿರ್ಮಾಣ ಪೈಪೋಟಿ ಶುರುವಾಗಿದ್ದನ್ನು ಗಮನಿಸಬಹುದು.
ಇದೇ ಜಿಲ್ಲೆಯಲ್ಲಿ, ಇದೇ ಭಾಗದ, ಇದೇ ಪ್ರದೇಶದಲ್ಲಿ ನಿರ್ಮಿಸಬೇಕು ಎಂದು ಸಚಿವರು, ಶಾಸಕರು ಸ್ವತಃ ಉಪಮುಖ್ಯಮಂತ್ರಿಗಳೇ ಒತ್ತಾಯಿಸಿದ್ದನ್ನು ಕೇಳಿದ್ದೇವೆ. ಕನಕಪುರ ರಸ್ತೆಯಲ್ಲಿ ನಿರ್ಮಿಸಬೇಕು ಎಂಬುದು ಡಿಸಿಎಂ ಡಿಕೆ ಶಿವಕುಮಾರ್ ಅವರ ಅಭಿಮತವಾಗಿದೆ.

ರಾಜಧಾನಿಗೆ ಹತ್ತಿರುವ ತುಮಕೂರು ಜಿಲ್ಲೆ ಬೆಳೆಯುತ್ತಿರುವ ಜಿಲ್ಲೆಯಾಗಿದೆ. ಸಾಕಷ್ಟು ಕೈಗಾರಿಕೆಗಳು ಇಲ್ಲಿ ತೆಲೆ ಎತ್ತಲಿವೆ. ಇಲ್ಲಿಗೆ ಮೆಟ್ರೋ ಯೋಜನೆ ವಿಸ್ತರಿಸುವ ಪ್ರಸ್ತಾವವು ಇದೆ. ಈ ಭಾಗದ ಶಿರಾ ಭಾಗದಲ್ಲಿ ಎರಡನೇ ಬೆಂಗಳೂರು ವಿಮಾನ ನಿಲ್ದಾಣ ನಿರ್ಮಾಣವಾದರೆ ಸಾಕಷ್ಟು ಅನುಕೂಲವಾಗುತ್ತದೆ. ಮುಖ್ಯವಾಗಿ ಉತ್ತರ ಕರ್ನಾಟಕದ ಸುಮಾರು 21 ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಈ ಕಾರಣದಿಂದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಆಗ್ರಹಿಸಿದ್ದರು. ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು.
ಹಾಸನ ಹೆದ್ದಾರಿ ಪಕ್ಕದಲ್ಲಿರುವ ಕುಣಿಗಲ್ ಭಾಗದಲ್ಲಿ ನಿರ್ಮಿಸಬೇಕು ಎಂಬ ಆಗ್ರಹ ಜೋರಾಗಿಯೇ ಕೇಳಿ ಬಂದಿತ್ತು. ಹಾಸನ ಹತ್ತಿರವೇ NH 4 ಹೆದ್ದಾರಿ ಸಹ ಇದೇ, ನೆಲಮಂಗಲ ಮಾರ್ಗವಾಗಿ ಬೆಂಗಳೂರಿಗೆ ನಿಮಿಷಗಳಲ್ಲಿ ಸಂಚರಿಸಬಹುದು. ಇಲ್ಲಿ ಎಲ್ಲ ಸೌಕರ್ಯಗಳು ಇವೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸಹ ತುಮಕೂರು ವ್ಯಾಪ್ತಿಯಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಬೇಕೆಂದು ಕಸರತ್ತು ನಡೆಸಿದ್ದರು.

ಈಗಾಗಲೇ ದಕ್ಷಿಣ ಕರ್ನಾಟಕದ ಭಾಗದಲ್ಲಿ ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದೆ. ಆದ್ದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ನಿರ್ಮಿಸಿದರೆ ಒಳಿತು. ಈ ಭಾಗದ ಜನರಿಗೆ ಅನುಕೂಲ ಆಗುತ್ತದೆ. ಉತ್ತರ ಕರ್ನಾಟಕ ಅಭಿವೃದ್ಧಿ ಆಗುತ್ತದೆ ಎಂದು ಧಾರವಾಡ ಶಹರ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಆಗಿದ್ದೇನು? ಹಿನ್ನಡೆ ಯಾರಿಗೆ?
ಸದ್ಯ ರಾಜ್ಯ ಸರ್ಕಾರ ಅನೇಕ ಸ್ಥಳಗಳ ಪೈಕಿ ಮೂರು ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನಲ್ಲೇ ಎರಡು ಸ್ಥಳ ಫೈನಲ್ ಆಗಿವೆ. ಇಲ್ಲಿನ ಚೂಡಹಳ್ಳಿ ಸಮೀಪ ಮತ್ತು ಸೋಮನಹಳ್ಳಿ ಬಳಿಯ ಪ್ರದೇಶ ಹಾಗೂ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ನೆಲಮಂಗಲ ಹತ್ತಿರ ನಿರ್ಮಿಸಬಹುದೆಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ರಾಮನಗರ ಜಿಲ್ಲೆಯ ಕನಕಪುರ ಭಾಗದಲ್ಲಿ ನಿರ್ಮಿಸಬೇಕು ಎಂಬ ಡಿಕೆ ಶಿವಕುಮಾರ್ ಅವರಿಗೆ ಒಂದ ಹಂತದಲ್ಲಿ ಜಯ ಸಿಕ್ಕಂತಾಗಿದೆ. ಇತ್ತ ಸಚಿವರಾದ ಡಾ.ಜಿ.ಪರಮೇಶ್ವರ ಮತ್ತು ವಿ.ಸೋಮಣ್ಣ ಅವರಿಗೆ ಹಿನ್ನಡೆ ಆದಂತಾಗಿದೆ. ಒಂದು ರೀತಿಯ ಪ್ರತಿಷ್ಠೆಯಂತಾಗಿದ್ದ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮೂರು ಜಾಗ ಫೈನಲ್ ಮಾಡಿ ಅನುಮೋದನೇ ಕಳುಹಿಸುವ ಮೂಲಕ ಪ್ರತಿಷ್ಠೆಯ ಪೈಪೋಟಿಗೆ ಬ್ರೇಕ್ ಬಿದ್ದಂತಾಗಿದೆ.
ಇನ್ನೂ ಚಿತ್ರದುರ್ಗ ಭಾಗದಲ್ಲಿ ನಿರ್ಮಿಸಿದರೆ ಉತ್ತರ ಕರ್ನಾಟಕ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ಕೋರಿದ್ದ ಚಳ್ಳಕೆರೆ ಶಾಸಕ ರಘುಮೂರ್ತಿ ಅವರಿಗೂ ಹಿನ್ನಡೆ ಆಗಿದೆ. ಈ ಬಗ್ಗೆ ಸ್ಪಷ್ಟಪಡಿಸಿದ್ದ ಎಂಬಿ ಪಾಟೀಲ್ ಅವರು ಬೆಂಗಳೂರಿನಿಂದ ತುಮಕೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ನಿರ್ಮಿಸಿದರೆ ಅದು ದೇಶಿಯ ಮತ್ತು ಜಿಲ್ಲೆಗೆ ಸಂಬಂಧಿಸಿದ ವಿಮಾನ ನಿಲ್ದಾಣದಂತಾಗುತ್ತದೆ. ಬೆಂಗಳೂರು ಹಾಲಿ ದೇವನಹಳ್ಳಿ ವಿಮಾನ ನಿಲ್ದಾಣದ ಮೇಲಿನ ಪ್ರಯಾಣಿಕರ ಹೊರೆ ತಗ್ಗಿಸಲು ಸಿಲಿಕಾನ್ ಸಿಟಿ ಅಕ್ಕ ಪಕ್ಕದಲ್ಲೇ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.
ಏಪ್ರಿಲ್ ಎರಡನೇ ವಾರ ಬೆಂಗಳೂರಿಗೆ ಕೇಂದ್ರ ತಂಡ
ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಮೂರು ಜಾಗ ಅಂತಿಮಗೊಳಿಸಿ ಪ್ರಸ್ತಾವನೆ ಕೇಂದ್ರ ಕಳುಹಿಸುತ್ತಿದ್ದಂತೆ ಕೇಂದ್ರ ಅಧ್ಯಯನ ತಂಡ ಮುಂದಿನ ಏಪ್ರಿಲ್ 7-9 ರೊಳಗೆ ನಗರಕ್ಕೆ ಬಂದು ಜಾಗ ಪರಿಶೀಲನೆ ನಡೆಸಲಿದ್ದಾರೆ. 2033ರೊಳಗೆ ನಿರ್ಮಾಣ ಕಾರ್ಯ ಮುಗಿಸುವ ಉದ್ದೇಶ ಹೊಂದಿದ್ದೇವೆ. ಆ ವರ್ಷ ಹೊಸ ಏರ್‌ಪೋರ್ಟ್ ಬೆಂಗಳೂರಿಗೆ ಲಭ್ಯವಾಗುವ ಸಾಧ್ಯತೆ ಇದೆ.












Click it and Unblock the Notifications