ಬೆಂಗಳೂರು ಟ್ರಾಫಿಕ್ ಟೆನ್ಷನ್ಗೆ ಬ್ರೇಕ್ ಹಾಕಲಿದೆ 10 ಪಥದ ಹೊಸ ರಸ್ತೆ: ಯಾವೆಲ್ಲಾ ಭಾಗಗಳಲ್ಲಿ ಹಾದುಹೋಗಲಿದೆ?
ಬೆಂಗಳೂರು: ಸಿಲಿಕಾನ್ ಸಿಟಿಯ ಬಹುನಿರೀಕ್ಷಿತ 10.7 ಕಿಲೋಮೀಟರ್ ಉದ್ದದ 'ಮೈಸೂರು ರಸ್ತೆ-ಮಾಗಡಿ ರಸ್ತೆ ಎಂಎಆರ್' (ಮೇಜರ್ ಆರ್ಟೀರಿಯರ್ ರೋಡ್ ) ಯೋಜನೆಯ ಕಾಮಗಾರಿ ಅಂತಿಮ ಹಂತ ತಲುಪಿದೆ. ಮುಂದಿನ 15 ದಿನಗಳೊಳಗೆ ದಶಪಥಗಳ ಈ ರಸ್ತೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಕಾರಿಡಾರ್ನಿಂದಾಗಿ ದಿನನಿತ್ಯದ ಟ್ರಾಫಿಕ್ ಕಿರಿಕಿರಿಯಿಂದ ವಾಹನ ಸವಾರರಿಗೆ ದೊಡ್ಡ ಮಟ್ಟದ ರಿಲೀಫ್ ಸಿಗಲಿದೆ.
ಈ ಹೊಸ ಕಾರಿಡಾರ್ಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯ ಸುತ್ತಮುತ್ತಲಿನ ಸಂಪರ್ಕವನ್ನು ಈ ರಸ್ತೆ ಸಂಪೂರ್ಣವಾಗಿ ಬದಲಾಯಿಸಲಿದೆ. ಬಡಾವಣೆಯ ಒಟ್ಟು ಒಂಬತ್ತು ಬ್ಲಾಕ್ಗಳಿಗೂ ಸಿಗ್ನಲ್ ಮುಕ್ತ ಮಾರ್ಗದ ಮೂಲಕ ನೇರ ಸಂಪರ್ಕ ಕಲ್ಪಿಸುವುದು ಈ ರಸ್ತೆಯ ಪ್ರಮುಖ ಉದ್ದೇಶವಾಗಿದೆ.

300 ಅಡಿ ಅಗಲದ ಈ ರಸ್ತೆಯು ಮೈಸೂರು ರಸ್ತೆಯ ಚಲ್ಲಘಟ್ಟದಿಂದ ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್ಗೆ ನೇರ ಸಂಪರ್ಕ ಕಲ್ಪಿಸುತ್ತದೆ. ವಿಶೇಷವೆಂದರೆ, ಇದನ್ನು ಸಂಪೂರ್ಣ ಟೋಲ್-ಮುಕ್ತ ಕಾರಿಡಾರ್ ಆಗಿ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯಿಂದಾಗಿ ನಗರದ ಹೊರವಲಯದ ರಸ್ತೆಗಳಲ್ಲಿನ ದಟ್ಟಣೆ ಕಡಿಮೆಯಾಗಲಿದ್ದು, ಪ್ರತಿದಿನ ಪ್ರಯಾಣಿಸುವವರ ಸಮಯ ಮತ್ತು ಇಂಧನ ಉಳಿತಾಯವಾಗಲಿದೆ ಎಂದು ಬಿಡಿಎ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಸುಗಮ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಬಿಡಿಎ ಈ ಯೋಜನೆಯನ್ನು 2018ರಲ್ಲಿಯೇ ಪ್ರಾರಂಭಿಸಿತ್ತು. ಕಾರಿಡಾರ್ ಅಭಿವೃದ್ಧಿಗಾಗಿ ಸುಮಾರು 321.21 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಯೋಜನೆಯ ಆರಂಭಿಕ ಅಂದಾಜು ವೆಚ್ಚ 465ರ ಕೋಟಿ ರೂಪಾಯಿ ಆಗಿತ್ತು. ಆದರೆ ತಾಂತ್ರಿಕ ಅಡೆತಡೆಗಳು, ವಿಳಂಬ ಹಾಗೂ ಹೆಚ್ಚುವರಿ ಕಾಮಗಾರಿಗಳ ಕಾರಣದಿಂದಾಗಿ ಒಟ್ಟು ವೆಚ್ಚ ಸುಮಾರು 631 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಈ ಹೊಸ ಕಾರಿಡಾರ್ ಕಂಬಿಪುರ, ಕೆ. ಕೃಷ್ಣಸಾಗರ, ಭೀಮನಕುಪ್ಪೆ, ಕೊಮ್ಮಘಟ್ಟ, ಕಂಚನಪುರ ಮತ್ತು ಸೂಲಿಕೆರೆ ಗ್ರಾಮಗಳ ಸಮೀಪ ಹಾದುಹೋಗುತ್ತದೆ. ಸ್ಥಳೀಯ ಸಂಪರ್ಕವನ್ನು ಸುಧಾರಿಸಲು ಅಧಿಕಾರಿಗಳು ರಸ್ತೆಯುದ್ದಕ್ಕೂ 17 ಸರ್ವಿಸ್ ರಸ್ತೆಗಳ ಪ್ರವೇಶ ಬಿಂದುಗಳನ್ನು ನಿರ್ಮಿಸಿದ್ದಾರೆ. ಇದರ ಜೊತೆಗೆ, ಕಾರಿಡಾರ್ನ ಪ್ರಮುಖ ಸ್ಥಳಗಳಲ್ಲಿ ಮೂರು ದೊಡ್ಡ ಅಂಡರ್ಪಾಸ್ಗಳನ್ನು ನಿರ್ಮಿಸಲಾಗಿದ್ದು, ನೀರಿನ ಸರಾಗ ಹರಿವು ಮತ್ತು ಬಡಾವಣೆಯ ಆಂತರಿಕ ಓಡಾಟಕ್ಕಾಗಿ 64 ಸಣ್ಣ ಸೇತುವೆಗಳನ್ನು ನಿರ್ಮಿಸಲಾಗಿದೆ.
ಈ ಯೋಜನೆಯ ಅತಿದೊಡ್ಡ ಇಂಜಿನಿಯರಿಂಗ್ ಸಾಧನೆ ಎಂದರೆ ಚಲ್ಲಘಟ್ಟದ ಸಮೀಪ ನಿರ್ಮಿಸಲಾದ 250 ಮೀಟರ್ ಉದ್ದದ ಸುರಂಗ ರಸ್ತೆ ಮತ್ತು ರೈಲ್ವೆ ಅಂಡರ್ಪಾಸ್. ಇದರ ಕಾಮಗಾರಿ ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದೆ. ಪ್ರಸ್ತುತ, ಅಂತಿಮ ಹಂತದ ಡಾಂಬರೀಕರಣ, ಲೇನ್ ಮಾರ್ಕಿಂಗ್ ಮತ್ತು ಪೇಂಟಿಂಗ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಕೇವಲ ಒಂದು ವಾರದಲ್ಲಿ ಇವೆಲ್ಲವೂ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
ವಾಸ್ತವವಾಗಿ ಈ ಯೋಜನೆಯು ಇದೇ ವರ್ಷದ ಆರಂಭದಲ್ಲಿಯೇ ಪೂರ್ಣಗೊಳ್ಳಬೇಕಿತ್ತು. ಆದರೆ ಬೆಂಗಳೂರಿನಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಚಲ್ಲಘಟ್ಟ ರೈಲ್ವೆ ಅಂಡರ್ಪಾಸ್ ಬಳಿಯ ಕಾಮಗಾರಿ ವಿಳಂಬವಾಯಿತು. ರೈಲ್ವೆ ಟ್ರ್ಯಾಕ್ಗಳ ಮೇಲೆ ಗರ್ಡರ್ ಅಳವಡಿಸಲು ಬೇಕಾದ ರೈಲ್ವೆ ಇಲಾಖೆಯ ಅನುಮೋದನೆ ಸಿಗುವುದು ಕೂಡ ತಡವಾಗಿತ್ತು. ಹೀಗಾಗಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ವೇಗಗೊಳಿಸಲು ಬಿಡಿಎ ಹೆಚ್ಚುವರಿ ಕಾರ್ಮಿಕರನ್ನು ನಿಯೋಜಿಸಿದ್ದು, ಕಳೆದ ಕೆಲವು ವಾರಗಳಿಂದ ಹಗಲು-ರಾತ್ರಿ ಎನ್ನದೆ ನಿರಂತರವಾಗಿ ನಿರ್ಮಾಣ ಕಾಮಗಾರಿಗಳನ್ನು ನಡೆಸಿದೆ.
ಈ ಮಾರ್ಗವು ಸಂಚಾರಕ್ಕೆ ಮುಕ್ತವಾದ ನಂತರ, ಮಾಗಡಿ ರಸ್ತೆ ಮೂಲಕ ಹಾಸನ, ಕುಣಿಗಲ್ನಿಂದ ಬರುವ ಮತ್ತು ಮೈಸೂರು ರಸ್ತೆ ಮೂಲಕ ಮಂಡ್ಯ, ರಾಮನಗರ ಹಾಗೂ ಬಿಡದಿಯಿಂದ ಬರುವ ಪ್ರಯಾಣಿಕರಿಗೆ ಭಾರಿ ಅನುಕೂಲವಾಗಲಿದೆ. ವಾಹನ ಸವಾರರು ಬೆಂಗಳೂರಿನ ಕೇಂದ್ರ ಭಾಗದ ಟ್ರಾಫಿಕ್ಗೆ ಸಿಲುಕಿಕೊಳ್ಳದೆ, ನಗರದ ಹೊರಭಾಗಗಳನ್ನು ಅತಿ ವೇಗವಾಗಿ ತಲುಪಬಹುದು. ಅಲ್ಲದೆ, ಈ ಕಾರಿಡಾರ್ ನೈಸ್ (NICE) ರಸ್ತೆಗೆ ಅತಿ ಸಮೀಪದಲ್ಲಿ ಹಾದುಹೋಗುವುದರಿಂದ, ವಿವಿಧ ಬಡಾವಣೆಗಳಿಗೆ ಹಾಗೂ ಹೊರವರ್ತುಲ ಸಾರಿಗೆ ಮಾರ್ಗಗಳಿಗೆ ಅತ್ಯುತ್ತಮ ಸಂಪರ್ಕ ಸಿಗಲಿದೆ.












Click it and Unblock the Notifications