ಆಸ್ಟ್ರೇಲಿಯಾದಲ್ಲಿ ಚಹಾ ಸಾಮ್ರಾಜ್ಯ ಕಟ್ಟಿದ ಕನ್ನಡಿಗ: ಹರಿದುಬಂತು ಕೋಟಿ.. ಕೋಟಿ ಆದಾಯ
Success Story: ಸಾಮಾನ್ಯವಾಗಿ ಭಾರತದಲ್ಲಿ ಬಹುತೇಕ ಮನೆಗಳಲ್ಲಿ ಬೆಳಗಾದರೆ ಸಾಕು ಒಂದು ಕಪ್ ಬಿಸಿಬಿಸಿ ಚಹಾ ಬೇಕೇ ಬೇಕು. ಇದೀಗ ಬೆಂಗಳೂರಿನ ಯುವಕನೊಬ್ಬ ಈ ಚಹಾದ ಮೇಲಿದ್ದ ತನ್ನ ಅಪಾರ ಪ್ರೀತಿಯನ್ನೇ ಆಸ್ಟ್ರೇಲಿಯಾದಲ್ಲಿ ಕೋಟಿ ಕೋಟಿ ಮೌಲ್ಯದ ಯಶಸ್ವಿ ಉದ್ಯಮವನ್ನಾಗಿ ಪರಿವರ್ತಿಸಿ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಈ ಕುರಿತ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ಗಮನಿಸಿ.
ಉನ್ನತ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದ ಯುವಕ, ಅರ್ಧಕ್ಕೆ ಕಾಲೇಜು ತೊರೆದು ಚಹಾ ಉದ್ಯಮಕ್ಕೆ ಕಾಲಿಟ್ಟು ಇದೀಗ ವರ್ಷಕ್ಕೆ ಬರೋಬ್ಬರಿ ₹5.5 ಕೋಟಿಗೂ ಅಧಿಕ (1 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್) ವಹಿವಾಟು ನಡೆಸುವ ಮೂಲಕ ಅತ್ಯದ್ಭುತ ಸಾಧನೆ ಮಾಡಿದ್ದಾರೆ. ಹಾಗಾದ್ರೆ ಈ ಐಡಿಯಾ ಬಂದಿದಾದ್ರೂ ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಶಿಕ್ಷಣ ತೊರೆದು ಚಹಾ ಉದ್ಯಮಕ್ಕಿಳಿದ ಸಂಜಿತ್
ಬೆಂಗಳೂರು ಮೂಲದ ಸಂಜಿತ್ ಕೊಂಡ ಹೌಸ್ ಎಂಬ ಯುವಕ ಮೆಲ್ಬೋರ್ನ್‌ನ 'ಲಾ ಟ್ರೋಬ್ ಯೂನಿವರ್ಸಿಟಿ'ಯಲ್ಲಿ ಬಿಸಿನೆಸ್ ಮ್ಯಾನೇಜ್‌ಮೆಂಟ್ ಅಧ್ಯಯನ ಮಾಡಲು ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಆದರೆ, ಚಿಕ್ಕಂದಿನಿಂದಲೂ ಚಹಾದ ಬಗ್ಗೆ ಇದ್ದ ತೀವ್ರ ಆಸಕ್ತಿ ಹಾಗೂ ಆಸ್ಟ್ರೇಲಿಯನ್ನರಿಗೆ ಭಾರತೀಯ ಮಸಾಲಾ ಚಹಾದ ರುಚಿ ತೋರಿಸಬೇಕೆಂಬ ಹಂಬಲ ಅವರನ್ನು ಉದ್ಯಮದತ್ತ ಸೆಳೆಯಿತು. ಈ ನಿಟ್ಟಿನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಅರ್ಧದಲ್ಲೇ ತೊರೆದ ಸಂಜಿತ್, 'ಡ್ರಾಪ್‌ಔಟ್ ಚಾಯ್‌ವಾಲಾ' ಎಂಬ ಹೆಸರಿನಲ್ಲಿ ಚಹಾ ಬ್ರ್ಯಾಂಡ್ ಆರಂಭಿಸಿದರು.
'ಡ್ರಾಪ್‌ಔಟ್ ಚಾಯ್‌ವಾಲಾ' ಮಳಿಗೆ ಓಪನ್
ಸಂಜಿತ್ ಹಾಗೂ ಅವರ ತಂಡ ಸುಮಾರು 2 ಲಕ್ಷ ಆಸ್ಟ್ರೇಲಿಯನ್ ಡಾಲರ್ ಹೂಡಿಕೆಯೊಂದಿಗೆ ಮೆಲ್ಬೋರ್ನ್‌ನ ಪ್ರಸಿದ್ಧ ಎಲಿಜಬೆತ್ ಸ್ಟ್ರೀಟ್‌ನಲ್ಲಿ ತಮ್ಮ ಮೊದಲ 'ಡ್ರಾಪ್‌ಔಟ್ ಚಾಯ್‌ವಾಲಾ' ಮಳಿಗೆಯನ್ನು ತೆರೆದರು. ಆರಂಭದಲ್ಲಿ ವಿದೇಶಿ ನೆಲದಲ್ಲಿ ಭಾರತೀಯ ಚಹಾಗೆ ಉತ್ತಮ ಪ್ರತಿಕ್ರಿಯೆ ಪಡೆಯುವುದು ಸವಾಲಿನ ಕೆಲಸವಾಗಿತ್ತು. ಆದರೆ ನಿರಂತರ ಪ್ರಯತ್ನ ಹಾಗೂ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಸ್ಥಳೀಯರ ಅಭಿರುಚಿಗೆ ತಕ್ಕಂತೆ ಚಹಾದ ರುಚಿಯನ್ನು ಸುಧಾರಿಸುತ್ತಾ ಬಂದರು.
ಸಾರ್ವಜನಿಕರಲ್ಲಿ ತಮ್ಮ ಬ್ರ್ಯಾಂಡ್ ಜನಪ್ರಿಯಗೊಳಿಸಲು ಅವರು 'ಚಾಯ್ ಟ್ರಕ್' ವ್ಯವಸ್ಥೆಯನ್ನು ಪರಿಚಯಿಸಿದರು. ಕಾಲೇಜು ಸಮಾರಂಭಗಳು, ಭಾರತೀಯ ಮದುವೆಗಳು ಹಾಗೂ ಸಾಂಸ್ಕೃತಿಕ ಉತ್ಸವಗಳಲ್ಲಿ ಈ ಮೊಬೈಲ್ ಟ್ರಕ್ ಮೂಲಕ ಚಹಾ ಪೂರೈಸುವ ಮೂಲಕ ಮನೆಮಾತಾದರು.
ಕೇವಲ ಒಂದೇ ವರ್ಷದಲ್ಲಿ ₹5.5 ಕೋಟಿ ಆದಾಯ
ಮಾರುಕಟ್ಟೆಯಲ್ಲಿ ಲಭ್ಯವಿದ್ದ ಕಾಫಿ ಸಂಸ್ಕೃತಿಗೆ ಪರ್ಯಾಯವಾಗಿ ಭಾರತೀಯ ಶೈಲಿಯ 'ಮಸಾಲಾ ಚಾಯ್' ನೀಡಿದ ಈ ಕಲ್ಪನೆಗೆ ಆಸ್ಟ್ರೇಲಿಯನ್ ಗ್ರಾಹಕರು ಫಿದಾ ಆದರು. ಚಹಾದ ಜೊತೆಗೆ ಭಾರತದ ಬಿಸಿಬಿಸಿ ತಿಂಡಿ ತಿನಿಸುಗಳನ್ನು ಮೆನುವಿನಲ್ಲಿ ಸೇರಿಸಿದ್ದು ಬ್ರ್ಯಾಂಡ್ ಬೆಳವಣಿಗೆಗೆ ಉತ್ತಮ ದಾರಿಯಾಯಿತು. ಕೇವಲ ಒಂದೇ ವರ್ಷದ ಅವಧಿಯಲ್ಲಿ 'ಡ್ರಾಪ್‌ಔಟ್ ಚಾಯ್‌ವಾಲಾ' ಉದ್ಯಮವು 1 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್‌ಗಿಂತಲೂ (ಸುಮಾರು ₹5.5 ಕೋಟಿಗೂ ಹೆಚ್ಚು) ಹೆಚ್ಚಿನ ವಹಿವಾಟು ನಡೆಸಿ ಇಡೀ ಆಸ್ಟ್ರೇಲಿಯಾದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತು.
ಈ ಕುರಿತು ಮಾತನಾಡಿದ ಸಂಜಿತ್ 'ನನಗೆ ಬಾಲ್ಯದಿಂದಲೂ ಚಹಾದ ಮೇಲೆ ಅಪಾರ ಪ್ರೀತಿಯಿತ್ತು. ಅದೇ ಪ್ರೀತಿಯೇ ಆಸ್ಟ್ರೇಲಿಯಾದಲ್ಲಿ 'ಡ್ರಾಪ್‌ಔಟ್ ಚಾಯ್‌ವಾಲಾ' ಹುಟ್ಟಿಗೆ ಕಾರಣವಾಯಿತು,' ಎಂದು ತಮ್ಮ ಯಶಸ್ಸಿನ ಪ್ರಯಾಣವನ್ನು ಹಂಚಿಕೊಂಡಿದ್ದಾರೆ. ಉನ್ನತ ಶಿಕ್ಷಣ ಅರ್ಧಕ್ಕೆ ನಿಂತರೂ, ತಮ್ಮ ಕ್ರಿಯಾಶೀಲ ಚಿಂತನೆ ಹಾಗೂ ಕಠಿಣ ಶ್ರಮದಿಂದ ವಿದೇಶಿ ನೆಲದಲ್ಲಿ ಭಾರತೀಯ ಬ್ರ್ಯಾಂಡ್ ಎತ್ತಿಹಿಡಿದಿರುವ ಈ ಯುವಕ ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿದ್ದಾರೆ ಎಂದು ಹೇಳಬಹುದು.


Click it and Unblock the Notifications
