ಮನೆ ಹರಾಜು ಹಾಕಿದ್ದಕ್ಕೆ ಮನನೊಂದ ಮಹಿಳೆ: ವಿಧಾನಸೌಧದ ಮುಂದೆ ಆತ್ಮಹತ್ಯೆಗೆ ಯತ್ನ!
ಬೆಂಗಳೂರು ಜನವರಿ 10: ಮನೆ ಹರಾಜು ಹಾಕಿದ್ದಕ್ಕೆ ಮನನೊಂದ ಮಹಿಳೆ ವಿಧಾನಸೌಧದ ಮುಂದೆ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದೆ. ಬ್ಯಾಂಕ್‌ನಿಂದ ಸಾಲ ಪಡೆದಿದ್ದ ಮಹಿಳೆ ಹಾಗೂ ಅವರ ಕುಟುಂಬಸ್ಥರು ವಿಧಾನಸೌಧದ ಮುಂದೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಜೆಪಿ ನಗರದ ನಿವಾಸಿ ಶಾಯಿಸ್ತಾ ಆತ್ಮಹತ್ಯೆಗೆ ಯತ್ನಿಸಿದವರು. ಇವರು ಕೆಲ ವರ್ಷಗಳ ಹಿಂದೆ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಆದರೆ ಸಾಲ ತೀರಿಸಿಲ್ಲವೆಂದು ಬ್ಯಾಂಕ್‌ನಿಂದ ಮನೆ ಹರಾಜು ಹಾಕಲಾಗಿದೆ. ಇದರಿಂದಾಗಿ ಮನನೊಂದು ಕುಟುಂಬ ಸಮೇತರಾಗಿ ವಿಧಾನಸೌಧದ ಮುಂದೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.

ಬಿತ್ತಿ ಪತ್ರಗಳನ್ನು ಹಿಡಿದುಕೊಂಡು ನಮ್ಮ ರಕ್ಷಣೆಗೆ ಯಾರೂ ಕೂಡ ಬಂದಿಲ್ಲ. ಬ್ಯಾಂಕ್‌ನಿಂದ ಕಿರುಕುಳವಾಗಿದೆ. ನಮಗೆ ನ್ಯಾಯ ಬೇಕು. ನ್ಯಾಯ ಸಿಗುವವರೆಗೂ ಹೋಗುವುದಿಲ್ಲ. ಇಡೀ ಕುಟುಂಬ ಬೀದಿಗೆ ಬಂದಿದೆ. ನಮಗೆ ಸಾಕಷ್ಟು ಕಿರುಕುಳ ನೀಡಲಾಗಿದೆ ಎಂದು ಶಾಯಿಸ್ತಾ ಸ್ಥಳದಿಂದ ತೆರಳಲು ನಿರಾಕರಿಸಿದರು. ಈ ವೇಳೆ ಮಹಿಳಾ ಪೊಲೀಸರು ಶಾಯಿಸ್ತಾ ಅವರನ್ನು ಬಲವಂತವಾಗಿ ಪೊಲೀಸ್ ವಾಹನದಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ.
ಏನಿದು ಘಟನೆ?
ಈ ಬಗ್ಗೆ ಮಾಹಿತಿ ನೀಡಿದ ಶಾಯಿಸ್ತಾ ಸಂಬಂಧಿಕರಾದ ಜಾಕೀರ್, ''ಶಾಯಿಸ್ತಾ ಮನೆಯಲ್ಲಿ ಅವರ ಗಂಡ ಹಾಗೂ ಎಂಟು ಜನ ಮಕ್ಕಳು ಇದ್ದಾರೆ. ಅವರಿಗೆ ಮೂರು ಕೋಟಿ ಹಾಗೂ ಒಂದು ಕೋಟಿ ಎಪ್ಪತ್ತು ಲಕ್ಷದ ಆಸ್ತಿ ಇದೆ. ಎಪ್ಪತ್ತು ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಅವರು ಅಗರಬತ್ತಿ ಬಿಸಿನೆಸ್ ಮಾಡುವರು. ಶುಂಠಿ ಹಾಕಬೇಕು ಎಂದು ಬೇರೆಯವರ ಜಮೀನು ಅನ್ನು ಲೀಸ್‌ಗೆ ತೆಗೆದುಕೊಂಡಿದ್ದರು. ಚನ್ನಪಟ್ಟಣದಲ್ಲಿ ಶುಂಠಿ ಹಾಕಿದ್ದಾರೆ. ಇದಕ್ಕಾಗಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು''
''ಬೆಂಗಳೂರು ಕೋಆಪರೇಟಿವ್ ಬ್ಯಾಂಕ್‌ನಲ್ಲಿ ಶುಂಠಿ ಬೆಳೆ ಬೆಳೆಯಲು 50 ಲಕ್ಷ ಸಾಲವನ್ನು ಪಡೆದುಕೊಳ್ಳಲಾಗಿತ್ತು. ಅದರಲ್ಲಿ ಬಡ್ಡಿ, ವಕ್ರಬಡ್ಡಿ ಅಂತೆಲ್ಲಾ 97 ಲಕ್ಷ ಕಟ್ಟಿಸಿಕೊಂಡು ಬಂದಿದ್ದಾರೆ. ಆದರೆ ಬ್ಯಾಂಕ್‌ನವರು ಒಂದುವರೆ ಕೋಟಿ ಕೊಡಬೇಕು ಎಂದು ಕಿರುಕುಳ ನೀಡಿದ್ದಾರೆ. ಹಣ ಕೊಡಲು ಆಗದೇ ಇದ್ದಾಗ, ಒಂದುವರೆ ಕೋಟಿಗೆ ಮನೆಯನ್ನು ಹರಾಜು ಹಾಕಿದ್ದಾರೆ. ಸಾಕಷ್ಟು ಕಿರುಕುಳ ನೀಡಿದ್ದಾರೆ. ಅವರಿಗೆ ಈಗ ಊಟಕ್ಕೂ ದುಡ್ಡು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ'' ಎಂದು ಜಾಕೀರ್ ದೂರಿದ್ದಾರೆ.
ಹೀಗಾಗಿ ಶಾಯಿಸ್ತಾ ತಮಗೆ ನ್ಯಾಯ ಕೇಳಲು ಸಚಿವ ಜಮೀರ್ ಅಹ್ಮದ್ ಅವರನ್ನು ಭೇಟಿ ಮಾಡಿದ್ದರಂತೆ. ಆಗ ಅವರು ನ್ಯಾಯ ನೀಡುವ ಭರವಸೆ ಕೊಟ್ಟಿದ್ದರು ಎಂದು ಶಾಯಿಸ್ತಾ ತಿಳಿಸಿದ್ದಾರೆ. ಆದರೂ ಮನೆಯನ್ನು ಹರಾಜಿಗೆ ಹಾಕಿ ತಮ್ಮನ್ನು ಮನೆಯಿಂದ ಹೊರಹಾಕಲಾಗಿದೆ ಎಂದು ಅವರು ದೂರಿದ್ದಾರೆ.
(ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ನಿಮಗೆ ಬೆಂಬಲ ಬೇಕಾದರೆ ಅಥವಾ ಯಾರೊಂದಿಗಾದರೂ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬೇಕಿದ್ದರೇ ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ. ಸಹಾಯವಾಣಿಗಳು: ಆಸ್ರ: 022 2754 6669; ಸ್ನೇಹ ಇಂಡಿಯಾ ಫೌಂಡೇಶನ್: +914424640050 ಮತ್ತು ಸಂಜೀವಿನಿ: 011-24311918, ರೋಶ್ನಿ ಫೌಂಡೇಶನ್: ಸಂಪರ್ಕ: 040-66202001, 040-66202000, ಒಂದು ಜೀವನ: ಸಂಪರ್ಕ ಸಂಖ್ಯೆ: 78930 78930, SEVA: ಸಂಪರ್ಕ ಸಂಖ್ಯೆ: 09441778290 )












Click it and Unblock the Notifications