ಆಫೀಸ್‌ನಲ್ಲಿ ಸಿಗರೇಟ್ ಹೊಗೆಯ ಕಿರಿಕಿರಿ; ಕೆಲಸಕ್ಕೆ ಗುಡ್‌ಬೈ ಹೇಳಿದ ಬೆಂಗಳೂರು ಯುವತಿಯ ರೆಸಿಗ್ನೇಶನ್ ಲೇಟರ್ ವೈರಲ್
ಬೆಂಗಳೂರು: ಆಫೀಸ್‌ನಲ್ಲಿ ಕೆಲಸದ ಒತ್ತಡ, ಬಾಸ್ ನೀಡುವ ಕಿರುಕುಳ ಅಥವಾ ಕಡಿಮೆ ಸ್ಯಾಲರಿ ಕಾರಣಕ್ಕೆ ಉದ್ಯೋಗಿಗಳು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡುವುದು ಸರ್ವೇ ಸಾಮಾನ್ಯ. ಆದರೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಕಚೇರಿಯಲ್ಲಿನ ಸಿಗರೇಟ್ ಹೊಗೆಯ ಕಿರಿಕಿರಿಯನ್ನ ಸಹಿಸಲಾಗದೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದರೆ ನೀವು ನಂಬುತ್ತೀರಾ?. ಹೌದು, ನೀವು ನಂಬಲೇಬೇಕು. ಈ ಮಹಿಳೆ ರಾಜೀನಾಮೆ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಜಾನ್ವಿ ಚಾವಡಾ ಎಂಬ ಮಹಿಳೆಯೇ ಕಚೇರಿ ವಾತಾವರಣಕ್ಕೆ ಬೇಸತ್ತು ಕೆಲಸ ಬಿಟ್ಟವರು. ತಾವು ಕಂಪನಿಗೆ ಕಳುಹಿಸಿದ ರಾಜೀನಾಮೆ ಪತ್ರದ ಸ್ಕ್ರೀನ್‌ಶಾಟ್ ಅನ್ನ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದು ಭಾರಿ ವೈರಲ್ ಆಗಿದೆ. ಕೇವಲ ಕೆಲವೇ ಗಂಟೆಗಳಲ್ಲಿ 5.6 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನ ಪಡೆದುಕೊಂಡಿದೆ.

ಎಕ್ಸ್ ಖಾತೆಯಲ್ಲಿ ವೈರಲ್ ಆದ ರೆಸಿಗ್ನೇಶನ್ ಲೇಟರ್
ಜಾನ್ವಿ ಚಾವಡಾ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಅತ್ಯಂತ ಸ್ಪಷ್ಟವಾಗಿ ತಮ್ಮ ನಿರ್ಧಾರವನ್ನ ತಿಳಿಸಿದ್ದಾರೆ. "ನನ್ನ ಹುದ್ದೆಗೆ ನಾನು ನೀಡುತ್ತಿರುವ ರಾಜೀನಾಮೆಯ ಅಧಿಕೃತ ಸೂಚನೆಯಾಗಿ ಈ ಇಮೇಲ್ ಅನ್ನು ದಯವಿಟ್ಟು ಸ್ವೀಕರಿಸಿ. ಆಗಸ್ಟ್ 25, 2026 ಈ ಕಂಪನಿಯಲ್ಲಿ ನನ್ನ ಕೊನೆಯ ಕೆಲಸದ ದಿನವಾಗಿರುತ್ತದೆ" ಎಂದು ಅವರು ಉಲ್ಲೇಖಿಸಿದ್ದಾರೆ. ಕೆಲಸ ಬಿಡಲು ನಿಖರವಾದ ಕಾರಣವನ್ನು ನೀಡುತ್ತಾ, "ನನಗೆ ಸಿಗರೇಟ್ ಹೊಗೆಯ ವಾಸನೆಯನ್ನ ಕಿಂಚಿತ್ತೂ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಚೇರಿಯ ವಾತಾವರಣಕ್ಕೆ ಹೊಂದಿಕೊಳ್ಳಲು ನಾನು ಎಷ್ಟೇ ಪ್ರಯತ್ನಿಸಿದರೂ ನನ್ನಿಂದ ಸಾಧ್ಯವಾಗಲಿಲ್ಲ. ಹಾಗೆ ನೋಡಿದರೆ, ಇಲ್ಲಿ ಬದಲಾಗಬೇಕಿರುವುದು ನಾನಲ್ಲ" ಎಂದು ಬರೆದುಕೊಂಡಿದ್ದಾರೆ.
ಕಚೇರಿಯಲ್ಲಿ ಧೂಮಪಾನದ ಕಿರಿಕಿರಿ
ಕಚೇರಿಯಲ್ಲಿ ಧೂಮಪಾನ ಎಲ್ಲಿ ನಡೆಯುತ್ತಿತ್ತು ಎಂಬ ನೆಟ್ಟಿಗರ ಪ್ರಶ್ನೆಗೆ ಉತ್ತರಿಸಿರುವ ಜಾನ್ವಿ, ಕಚೇರಿಯ ಪ್ಯಾಂಟ್ರಿ ಮತ್ತು ಊಟದ ಹಾಲ್‌ನಲ್ಲಿ ಸಹೋದ್ಯೋಗಿಗಳು ಸಿಗರೇಟ್ ಸೇದುತ್ತಿದ್ದರು ಎಂದು ಆರೋಪಿಸಿದ್ದಾರೆ. ಸಿಗರೇಟ್ ಸೇದಿದ ನಂತರ ಅವರು ಬಂದು ತಮ್ಮ ಪಕ್ಕದಲ್ಲೇ ಕೂರುತ್ತಿದ್ದರು.
ಇದರಿಂದ ಆ ಹೊಗೆಯ ವಾಸನೆ ಇಡೀ ಲಾಬಿಯೆಲ್ಲಾ ಹರಡುತ್ತಿತ್ತು. ಇದರಿಂದ ಪಾರಾಗಲು ತಾವು ಮಾಸ್ಕ್ ಧರಿಸುವ ಪ್ರಯತ್ನವನ್ನೂ ಮಾಡಿದ್ದಾಗಿ, ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಅವರು ತಮ್ಮ ಅಸಹಾಯಕತೆಯನ್ನ ತೋಡಿಕೊಂಡಿದ್ದಾರೆ. ಕೊನೆಗೆ ಬೇರೆ ದಾರಿಯಿಲ್ಲದೆ, ಪ್ರತಿದಿನ ಆ ವಾಸನೆಯನ್ನು ಸಹಿಸಿಕೊಳ್ಳಲಾಗದೆ ಕೆಲಸವನ್ನೇ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ.
ಸಾಮಾನ್ಯವಾಗಿ ಕಾರ್ಪೊರೇಟ್ ಕಚೇರಿಗಳಲ್ಲಿ ಧೂಮಪಾನ ಮಾಡುವುದನ್ನ ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ ಅಥವಾ ಅದಕ್ಕಾಗಿಯೇ ಪ್ರತ್ಯೇಕವಾದ ಸ್ಮೋಕಿಂಗ್ ಝೋನ್‌ಗಳನ್ನು ನಿರ್ಮಿಸಲಾಗಿರುತ್ತದೆ. ಆದರೆ, ಈ ಕಂಪನಿಯಲ್ಲಿ ಉದ್ಯೋಗಿಗಳು ಊಟದ ಹಾಲ್ ಹಾಗೂ ಪ್ಯಾಂಟ್ರಿಯಂತಹ ಸಾರ್ವಜನಿಕ ಸ್ಥಳಗಳಲ್ಲೇ ಸಿಗರೇಟ್ ಸೇದುತ್ತಿರುವುದು ಆಡಳಿತ ಮಂಡಳಿಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.
ಮಹಿಳೆಯ ಬೆಂಬಲಕ್ಕೆ ನಿಂತ ನೆಟ್ಟಿಗರು
ಜಾನ್ವಿ ಅವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಅನೇಕ ಬಳಕೆದಾರರು ಕಚೇರಿಗಳಲ್ಲಿ ತಾವು ಎದುರಿಸಿದ ಇಂತಹದ್ದೇ ಅನುಭವಗಳನ್ನ ಹಂಚಿಕೊಂಡಿದ್ದಾರೆ. ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, ತಮಗೂ ಇದೇ ಸಮಸ್ಯೆ ಇತ್ತು, ಆದರೆ ಮ್ಯಾನೇಜರ್ ಬಳಿ ದೂರು ನೀಡಿದಾಗ ಅವರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿದರು ಎಂದು ಹೇಳಿಕೊಂಡಿದ್ದಾರೆ.
Resigned from my job yesterday ! pic.twitter.com/gdKkA1KZW8
— Janhavi (@JanhaviChavada) August 26, 2026
ಈ ಧೂಮಪಾನವು ನೇರವಾಗಿ ಸಿಗರೇಟ್ ಸೇದುವವರಿಗಿಂತಲೂ ಪಕ್ಕದಲ್ಲಿರುವವರ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತದೆ. ಇದರಿಂದ ಉಸಿರಾಟದ ತೊಂದರೆ, ಅಸ್ತಮಾ, ಮತ್ತು ದೀರ್ಘಕಾಲಿಕ ಶ್ವಾಸಕೋಶದ ಕಾಯಿಲೆಗಳು ಬರುವ ಅಪಾಯವಿರುತ್ತದೆ.
ಕೆಲಸಕ್ಕಿಂತ ಆರೋಗ್ಯ ಮುಖ್ಯ ಎಂದು ಭಾವಿಸಿ ರಾಜೀನಾಮೆ ನೀಡಿದ ಜಾನ್ವಿ ಅವರ ದಿಟ್ಟತನವನ್ನು ಹಲವರು ಕೊಂಡಾಡಿದ್ದಾರೆ. ಎಷ್ಟೋ ಮಹಿಳೆಯರು ಎಷ್ಟೇ ಕಷ್ಟವಿದ್ದರೂ ಪರಿಸ್ಥಿತಿ ಮಿತಿಮೀರುವವರೆಗೂ ಉದ್ಯೋಗದಲ್ಲಿ ಮುಂದುವರಿಯುತ್ತಾರೆ. ಆದರೆ, ಆರೋಗ್ಯಕ್ಕೆ ಹಾನಿಯುಂಟುಮಾಡುವ ಇಂತಹ ವಾತಾವರಣವನ್ನು ವಿರೋಧಿಸಿ ಧ್ವನಿ ಎತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ನೆಟ್ಟಿಗರು ಪ್ರಶಂಸಿಸಿದ್ದಾರೆ.


Click it and Unblock the Notifications
