ಬೆಂಗಳೂರಿನಲ್ಲಿ ಒಂದೇ ಒಂದು ಮೊಸರು ಪ್ಯಾಕೆಟ್‌ಗಾಗಿ ಬರೋಬ್ಬರಿ 98,000 ರೂಪಾಯಿ ಕಳೆದುಕೊಂಡ ಮಹಿಳೆ
Online Shopping Fraud: ಆನ್‌ಲೈಲ್‌ನಲ್ಲಿ ತರಿಸಿಕೊಂಡಿದ್ದ ಮೊಸರಿನ ಪ್ಯಾಕೆಟ್ ಹಾಳಾಗಿದ್ದಕ್ಕೆ ಹಣ ಮರುಪಾವತಿ ಪಡೆಯಲು ಹೋಗಿ, ಸೈಬರ್ ವಂಚಕರ ಜಾಲಕ್ಕೆ ಬಿದ್ದು ಬೆಂಗಳೂರಿನ ಗೃಹಿಣಿಯೊಬ್ಬರು ಬರೋಬ್ಬರಿ 98,000 ರೂ. ಕಳೆದುಕೊಂಡಿರುವ ಘಟನೆ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಗೂಗಲ್‌ನಲ್ಲಿ ಸಿಕ್ಕ ನಕಲಿ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿ, ವಂಚಕರು ಕಳುಹಿಸಿದ ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡಿ ಯುಪಿಐ ಪಿನ್ ನಮೂದಿಸುತ್ತಿದ್ದಂತೆಯೇ ಬ್ಯಾಂಕ್ ಖಾತೆಯಲ್ಲಿದ್ದ ಹಣ ಖಾಲಿಯಾಗಿದೆ. ಈ ಕುರಿತು ಬೆಂಗಳೂರಿನ ಸೆಂಟ್ರಲ್ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆಯ ಹಿನ್ನೆಲೆ ಏನು?
ಅಕ್ಟೋಬರ್ 17ರಂದು ಮಹಿಳೆಯು 'ಬ್ಲಿಂಕಿಟ್' ಆ್ಯಪ್ ಮೂಲಕ ಮೊಸರಿನ ಪ್ಯಾಕೆಟ್ ಒಂದನ್ನು ಆರ್ಡರ್ ಮಾಡಿದ್ದರು. ಡೆಲಿವರಿ ಬಾಯ್ ತಂದುಕೊಟ್ಟ ಮೊಸರಿನ ಪ್ಯಾಕೆಟ್ ಹಾನಿಗೊಳಗಾಗಿತ್ತು. ತಕ್ಷಣವೇ ಮಹಿಳೆ ಈ ಬಗ್ಗೆ ಡೆಲಿವರಿ ಹುಡುಗನಿಗೆ ವಿಚಾರಿಸಿದಾಗ, 'ಸಂಸ್ಥೆಯ ಕಸ್ಟಮರ್ ಕೇರ್ (ಗ್ರಾಹಕ ಸೇವೆ) ಅನ್ನು ಸಂಪರ್ಕಿಸಿ ಹಣ ಮರುಪಾವತಿ ಪಡೆಯಿರಿ' ಎಂದು ಆತ ಸಲಹೆ ನೀಡಿದ್ದನು.
ಮಹಿಳೆ ವಂಚಕರ ಜಾಲಕ್ಕೆ ಬಿದ್ದಿದ್ದು ಹೇಗೆ?
ಡೆಲಿವರಿ ಏಜೆಂಟ್ ನೀಡಿದ ಸಲಹೆಯಂತೆ ಮಹಿಳೆ ಗೂಗಲ್‌ನಲ್ಲಿ ಬ್ಲಿಂಕಿಟ್ ಸಂಸ್ಥೆಯ ಕಸ್ಟಮರ್ ಕೇರ್ ಸಂಖ್ಯೆಗಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲಿ ಸಿಕ್ಕ ಉಚಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ನಕಲಿ ಗ್ರಾಹಕ ಸೇವಾ ಪ್ರತಿನಿಧಿ (ವಂಚಕ), 'ಖಂಡಿತವಾಗಿಯೂ ಹಣ ರಿಫಂಡ್ ಮಾಡಲಾಗುತ್ತದೆ, ಎಂದು ಹೇಳಿಕೆ ನಂಬಿಸಿ, ಕೆಲವು ಹಂತಗಳನ್ನು ಅನುಸರಿಸುವಂತೆ ಸೂಚಿಸಿದ್ದಾನೆ.
ಮಹಿಳೆ ಯಾಮಾರಿ ಹಣ ಕಳೆದುಕೊಂಡಿದ್ದು ಹೇಗೆ?
* ವಾಟ್ಸಾಪ್ ಲಿಂಕ್ ರವಾನೆ: ವಂಚಕನು ಮಹಿಳೆಯ ವಾಟ್ಸಾಪ್‌ಗೆ ಒಂದು ಲಿಂಕ್ ಕಳುಹಿಸಿ, ಹಾನಿಗೊಳಗಾದ ಮೊಸರಿನ ಪ್ಯಾಕೆಟ್‌ನ ಫೋಟೋವನ್ನು ಅದರಲ್ಲಿ ಅಪ್‌ಲೋಡ್ ಮಾಡುವಂತೆ ತಿಳಿಸಿದ್ದಾನೆ.
* ಫೋಟೋ ಅಪ್‌ಲೋಡ್ ಆಗುತ್ತಿದ್ದ ಮತ್ತೊಂದು ಕರೆ: ಮಹಿಳೆ ಫೋಟೋ ಅಪ್‌ಲೋಡ್ ಮಾಡುತ್ತಿದ್ದಂತೆಯೇ, ಮತ್ತೊಬ್ಬ ವ್ಯಕ್ತಿ ಕರೆ ಮಾಡಿ 'ನಿಮ್ಮ ಹಣ ರಿಫಂಡ್ ಪ್ರಕ್ರಿಯೆಯಲ್ಲಿದೆ, ಒಮ್ಮೆ ನಿಮ್ಮ ಡಿಜಿಟಲ್ ಪಾವತಿ ಆ್ಯಪ್ (UPI/Bank App) ಪರಿಶೀಲಿಸಿ' ಎಂದು ತಿಳಿಸಿದ್ದಾನೆ.
ಖಾತೆಯಲ್ಲಿದ್ದ ಹಣ 98,000 ರೂಪಾಯಿ ಮಾಯ
ಎರಡನೇ ವ್ಯಕ್ತಿಯ ಮಾತನ್ನು ನಂಬಿದ ಮಹಿಳೆ, ತಮ್ಮ ಮೊಬೈಲ್‌ನಲ್ಲಿ ಡಿಜಿಟಲ್ ಪಾವತಿ ಆ್ಯಪ್ ತೆರೆದು ಪಾಸ್‌ವರ್ಡ್ ನಮೂದಿಸಿದ್ದಾರೆ. ಅವರು ಪಾಸ್‌ವರ್ಡ್ ಹಾಕುತ್ತಿದ್ದಂತೆಯೇ, ಆ್ಯಪ್ ದಿಢೀರನೆ ಸ್ಕ್ರೀನ್‌ನಿಂದ ಕಣ್ಮರೆಯಾಗಿದೆ. ತಕ್ಷಣವೇ ಅವರ ಬ್ಯಾಂಕ್ ಖಾತೆಯಿಂದ 98,000 ರೂಪಾಯಿ ಹಣ ಡ್ರಾ ಆಗಿರುವುದು (ಡೆಬಿಟ್) ಕಂಡುಬಂದಿದೆ. ತಾವು ಸೈಬರ್ ಕ್ರೈಮ್ ವಂಚಕರ ಜಾಲಕ್ಕೆ ಸಿಲುಕಿ ಮೋಸ ಹೋಗಿರುವುದನ್ನು ಅರಿತ ಮಹಿಳೆ ತಕ್ಷಣವೇ ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾರೆ.
ತನಿಖೆ ಕೈಗೊಂಡ ಪೋಲಿಸರು
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸೆಂಟ್ರಲ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವಂಚಕರ ಪತ್ತೆಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ. ಗೂಗಲ್‌ನಲ್ಲಿ ಸಿಗುವ ಅಪರಿಚಿತ ಗ್ರಾಹಕ ಸೇವಾ ಸಂಖ್ಯೆಗಳು ಹಾಗೂ ವಾಟ್ಸಾಪ್‌ನಲ್ಲಿ ಬರುವ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಸೈಬರ್ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ. ಒಟ್ಟಿನಲ್ಲಿ ಮಹಿಳೆಯು ಒಂದು ಮೊಸರು ಪ್ಯಾಕೇಟ್‌ಗೋಸ್ಕರ ತಮ್ಮ ಬ್ಯಾಂಕ್ ಅಕೌಂಟ್ ಖಾಲಿಯಾಗುವಂತೆ ವಂಚನೆಗೆ ಒಳಗಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಪ್ರಕರಣದಿಂದ ವಂಚಕರು ಹೇಗೆಲ್ಲಾ ಯಾಮಾರಿಸಿ ಹಣ ಎಗರಿಸುತ್ತಾರೆ ಎನ್ನುವುದು ಸಾರ್ವಜನಿಕರಿಗೆ ಮನವರಿಕೆ ಆದಂತಾಗಿದೆ.


Click it and Unblock the Notifications
