Bengaluru Road Rage : ಬೆಂಗಳೂರು, ಕಾರು ಬಾನೆಟ್ ಮೇಲೆ ವ್ಯಕ್ತಿ ಎಳೆದೊಯ್ದ ಮಹಿಳೆ
ಬೆಂಗಳೂರು, ಜನವರಿ 20; ಕಾರಿಗೆ ಗುದ್ದಿದ್ದನ್ನು ಪ್ರಶ್ನೆ ಮಾಡಿದ ವ್ಯಕ್ತಿಯನ್ನು ಬೈಕ್ ಸವಾರ 1 ಕಿ. ಮೀ. ಎಳೆದೊಯ್ದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಇದೇ ಮಾದರಿಯ ಮತ್ತೊಂದು ಘಟನೆ ನಡೆದಿದೆ.
ನಗರದ ಉಳ್ಳಾಲ ರಸ್ತೆಯ ಸಿಗ್ನಲ್ ಬಳಿ ಈ ಘಟನೆ ನಡೆದಿದೆ. ಶ್ವೇತಾ ಎಂಬ ಕಾರು ಚಾಲಕಿ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದು, ಆತ ಕಾರಿನ ಬಾನೆಟ್ ಮೇಲೆ ಬಿದ್ದರೂ ಕಾರು ನಿಲ್ಲಿಸದೇ ಸಾಗಿದ್ದಾಳೆ.
ಕಾರಿನ ಬಾನೆಟ್ ಮೇಲೆ ವ್ಯಕ್ತಿ ಇದ್ದರೂ ಸುಮಾರು 2 ಕಿ. ಮೀ. ದೂರ ಕಾರು ಓಡಿಸಿಕೊಂಡು ಹೋಗಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಹಿಳೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಪಘಾತವಾದ ಬಳಿಕ ಕಾರು ನಿಲ್ಲಿಸಿದ ಮಹಿಳೆಯನ್ನು ಬೈಕ್‌ನಲ್ಲಿ ಯುವಕರು ಫಾಲೋ ಮಾಡಿ ಕಾರು ನಿಲ್ಲಿಸಿದ್ದಾರೆ. ಬಾನೆಟ್ ಮೇಲಿದ್ದ ವ್ಯಕ್ತಿಯನ್ನು ದರ್ಶನ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಜ್ಞಾನ ಭಾರತಿ ಠಾಣೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಬಾನೆಟ್ ಮೇಲಿದ್ದ ವ್ಯಕ್ತಿ ಮತ್ತು ಆತನ ಸ್ನೇಹಿತರು ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಮಹಿಳೆ ಆರೋಪ ಮಾಡಿದ್ದಾಳೆ. ಆದ್ದರಿಂದ ಪೊಲೀಸರು ಅವರ ವಿರುದ್ಧ ಐಪಿಸಿ ಸೆಕ್ಷನ್ 354 ಮತ್ತು 506ರ ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಕಾರು ಚಾಲಕಿ ಶ್ವೇತಾ ಮೊದಲು ದರ್ಶನ್, ಅವರ ಪತ್ನಿ ಇದ್ದ ಕಾರಿಗೆ ತನ್ನ ಕಾರನ್ನು ಡಿಕ್ಕಿ ಹೊಡೆಸಿದಳು. ಇದನ್ನು ಪ್ರಶ್ನಿಸಲು ದರ್ಶನ್ ಕೆಳಗೆ ಇಳಿದು ಬಂದಾಗ ವೇಗವಾಗಿ ಕಾರು ಚಲಾಯಿಸಿದ್ದಾಳೆ. ಆಗ ದರ್ಶನ್ ಬಾನೆಟ್ ಮೇಲೆ ಬಿದ್ದಿದ್ದಾರೆ. ಆದರೆ ಶ್ವೇತಾ ಕಾರು ನಿಲ್ಲಿಸದೇ ಸಾಗಿದ್ದಾಳೆ.
ಬಳಿಕ ದರ್ಶನ್ ಮತ್ತು ಆಕೆಯ ಸ್ನೇಹಿತರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾಳೆ. ದರ್ಶನ್, ಆತನ ಪತ್ನಿ, ಜೊತೆಗಿದ್ದ ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications