Bengaluru Rains: ನಗರದ ಹಲವೆಡೆ ಧಾರಾಕಾರ ಮಳೆ, ಸಂಚಾರ ಅಸ್ತವ್ಯಸ್ತ! ಹವಾಮಾನ ಮುನ್ಸೂಚನೆ
ಬೆಂಗಳೂರು, ಸೆಪ್ಟಂಬರ್ 18: ರಾಜಧಾನಿ ಬೆಂಗಳೂರಿನಲ್ಲಿ ಬದಲಾದ ಹವಾಮಾನ ವೈಪರೀತ್ಯಗಳ ಪ್ರಭಾವದಿಂದಾಗಿ ಇಂದು ಗುರುವಾರ ಸಂಜೆ ಜೋರು ಮಳೆ ಆಗಿದೆ. ಸಂಜೆ 5 ಗಂಟೆ ಹೊತ್ತಿಗೆ ಮಳೆ ಸುರಿಯಲು ಆರಂಭಿಸಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಜನ ಸಂಚಾರವು ಅಡಚಣೆ ಉಂಟಾಯಿತು. ಗುಂಡಿ ಬಿದ್ದಿರುವ ಪ್ರಮುಖ ರಸ್ತೆಗಳ ಮೇಲೆ ನೀರು ನಿಂತಿದ್ದ ಕಂಡು ಬಂತು. ಹಲವು ಸಂಚಾರ ಸಿಗ್ನಲ್‌ಗಳಲ್ಲಿ ಟ್ರಾಫಿಕ್ ದಟ್ಟಣೆ ಉಂಟಾಗಿಯಿತು.
ಭಾರತೀಯ ಹವಾಮಾನ ಇಲಾಖೆ ಗುರುವಾರಕ್ಕೆ ಭಾರೀ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಿ ಪುನಃ ಅದನ್ನು ಹಿಂತೆಗೆದುಕೊಂಡಿತ್ತು. ಬದಲಾದ ವಾತಾವರಣದಲ್ಲಿ ತೀವ್ರತೆಯಿಂದ ಮತ್ತೆ ಇಂದು ಜೋರು ಮಳೆ ಆಗಿದೆ. ಬೆಳಗ್ಗೆ ಚುರುಕಾಗಿದ್ದ ತಾಪಮಾನ ಮಧ್ಯಾಹ್ನ ಇಳಿಕೆ ಆಯಿತು. ಸಂಜೆ ನೋಡ ನೋಡುತ್ತಿದ್ದಂತೆ ಹೆಬ್ಬಾಳ, ನಾಗವಾರ, ಯಲಹಂಕ, ಕೋರಮಂಗಲ, ಹೊರಮಾವು, ಡೈರಿ ವೃತ್ತ, ಚಾಮರಾಜನಗರ, ಶಿವಾನಂದ ವೃತ್ತ, ವಿದ್ಯಾರಣ್ಯಪುರ, ಕೆಂಗೇರಿ, ಆರ್‌ಆರ್ ನಗರ, ಹಂಪಿನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಉತ್ತಮ ಮಳೆ ಆಗಿದೆ. ಸಂಜೆ ಹೊತ್ತು ಕೆಲಸ ಮುಗಿಸಿ ಮನೆಯಿಂದ ಹೊರಟಿದ್ದ ನೌಕರರು, ವ್ಯಾಪಾರಿಗಳಿಗೆ ಮಳೆ ಕಿರಿ ಕಿರಿ ಉಂಟಾಯಿತು. ಮೇಲ್ಸೇತುವೆ ನಿರ್ಮಾಣ ಸ್ಥಳ, ಮೆಟ್ರೋ ಕಾಮಗಾರಿ ಸ್ಥಳಗಳ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತಿದೆ. ಕೆಲವು ರಸ್ತೆಗಳು ಜಲಾವೃತಗೊಂಡಿದ್ದು ಕಂಡು ಬಂತು.

ಇದಲ್ಲದೇ ನಾಗಪುರ 23 ಮಿಲಿ ಮೀಟರ್, ನಾಯಂಡಹಳ್ಳಿ 15.50 ಮಿಲಿ ಮೀಟರ್, ರಾಜರಾಜೇಶ್ವರಿನಗರ 13 ಮಿಲಿ ಮೀಟರ್, ಸಂಪಂಗಿರಾಮನಗರ 11.50 ಮಿಲಿ ಮೀಟರ್, ಚಾಮರಾಜಪೇಟೆ 11 ಮಿಲಿ ಮೀಟರ್, ಬಸವೇಶ್ವರನಗರ 10.50 ಮಿಲಿ ಮೀಟರ್ ಮತ್ತು ಅರಕೆರೆಯಲ್ಲಿ 10 ಮಿಲಿ ಮೀಟರ್ ಮಳೆ ದಾಖಲಾಗಿದೆ. ಉಳಿದಂತೆ ತುಂತುರು ಮಳೆ ಆಗಿದೆ.
ಮುಂದಿನ ಮೂರು ದಿನ ನಗರದಲ್ಲಿ ಇದೇ ರೀತಿ ಆಗಾಗ ಬಿಸಿಲು ಹಾಗೂ ಮಬ್ಬು ವಾತಾವರಣ ಕಂಡು ಬರಲಿದೆ. ಗಾಗಾಗ ಸಾಮಾನ್ಯದಿಂದ ಸಾಧಾರಣವಾಗಿ ಮಳೆ ಬರುವ ನಿರೀಕ್ಷೆ ಇದೆ. ಈ ವೇಳೆ ನಗರದಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ.
ವಾಟರ್‌ಲಾಗಿಂಗ್ ಸಮಸ್ಯೆ, ಗುಂಡಿ ಮುಚ್ಚಲು ಸೂಚನೆ
ಬೆಂಗಳೂರಿನ ಹಲವೆಡೆ ಪ್ರಮುಖ ರಸ್ತೆಗಳಲ್ಲಿಯೇ ಗುಂಡಿಗಳು ಬಿದ್ದಿವೆ. ಡೈರಿ ವೃತ್ತ-ನಿಮ್ಹಾನ್ಸ್ ರಸ್ತೆ ಪ್ರದೇಶ, ಬೆಳ್ಳಂದೂರು, ಮಾರತ್ತಹಳ್ಳಿ, ಮಹಾದೇವಪುರದಲ್ಲಿನ ಕೆಲವು ರಸ್ತೆಗಳು, ಮೈಸೂರು ರಸ್ತೆ, ಕೆಂಗೇರಿ, ರಾಜಾಜಿನಗರ ಸೇರಿದಂತೆ ವಿವಿಧೆಡೆ ರಸ್ತೆಗಳಲ್ಲಿ ನೀರು ನಿಂತಿತ್ತು. ಇದಕ್ಕೆಲ್ಲ ವಾಟರ್ ಲಾಗಿಂಗ್ ಸಮಸ್ಯೆ ಕಾರಣವೆಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಗುಂಡಿ ಮುಚ್ಚಲು ಗಡುವು ನೀಡಿದೆ. ಜಿಬಿಎ ವ್ಯಾಪ್ತಿಯ ಎಲ್ಲ ನಗರ ಪಾಲಿಕೆಗಳ ಆಯಾ ರಸ್ತೆಗಳು ಗುಂಡಿ ಮುಕ್ತಗೊಳಿಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಸೂಚನೆ ನೀಡಿದ್ದಾರೆ.











Click it and Unblock the Notifications