Bengaluru cold: ತಲೆಗೆ ಟೋಪಿ, ಮೈಗೆ ಸ್ವೆಟರ್... ಚುಮು ಚುಮು ಚಳಿಗೆ ಥರ ಥರ ನಡಗುತ್ತಿದೆ ಬೆಂಗಳೂರು!
ಬೆಂಗಳೂರು ಜನವರಿ 3: ತಲೆಗೆ ಟೋಪಿ, ಮೈಗೆ ಸ್ವೆಟರ್, ಕೈಗೆ ಹ್ಯಾಂಡ್ ಗ್ಲೌಸ್, ಕಾಲಿಗೆ ಸಾಕ್ಸ್ ಇಲ್ಲದೆ ಬೆಳಗ್ಗೆ ಮನೆ ಬಿಟ್ಟು ಹೊರ ಬರಲಾಗುತ್ತಿಲ್ಲ. ಮಂಜು ಕವಿದ ವಾತಾವರಣ, ಆಗಾಗ ಮೈ ಸೋಕುವ ತಂಪಾದ ಗಾಳಿ ಇವೆಲ್ಲದರ ಅನುಭವ ಆಗುತ್ತಿರುವುದು ಬೆಂಗಳೂರಿನಲ್ಲಿ.
ಬೆಳಗಾದರೆ ಸಾಕು ಬೆಂಗಳೂರಿನಲ್ಲಿ 'ಚಳಿ ಚಳಿ ತಾಳೆನು ಈ ಚಳಿಯ' ಅಂತ ಹಾಡು ಹಾಡುವಂತಾಗಿದೆ. ಬೆಳಗಿನ ಜಾವ ಮನೆಯಿಂದ ಹೊರಗಡೆ ಕಾಲಿಟ್ಟರೆ ಊಟಿ, ಕೊಡಗು, ಮಲೆನಾಡಿಗೆ ಹೋದಂತ ಅನುಭವವಾಗುತ್ತಿದೆ. ಬೆಳಿಗ್ಗೆ ವಾಕಿಂಗ್, ಜಾಗಿಂಗ್, ಶಾಲೆಗೆ ಹೋಗುವ ಮಕ್ಕಳು ಹಾಗೂ ಕೆಲಸಕ್ಕೆ ಹೋಗುವ ಬೆಂಗಳೂರಿಗರು ನಗರದಲ್ಲಿ ಅಧಿಕ ಚಳಿಯನ್ನು ಅನುಭವಿಸುತ್ತಿದ್ದಾರೆ. ಲಾಲ್‌ಬಾಗ್, ಕಬ್ಬನ್ ಪಾರ್ಕ್‌ನಲ್ಲಿ ದಟ್ಟ ಮಂಜು ಆವರಿಸಿ ಗೋಚರತೆ ಕೂಡ ಕಡಿಮೆಯಾಗಿರುತ್ತದೆ. ಆದರೂ ಇದನ್ನು ಜನ ಆನಂದಿಸುತ್ತಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದೆ. ಹತ್ತು ಗಂಟೆಯಾದರೂ ಸೂರ್ಯನೇ ಕಾಣಿಸುತ್ತಿಲ್ಲ. ಜನವರಿ ಫೆಬ್ರವರಿಯಲ್ಲಿ ಚಳಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಇದಕ್ಕೂ ಮುನ್ನ ಚಳಿ ಬೆಂಗಳೂರನ್ನೇ ಥರ ಥರ ನಡುಗಿಸುತ್ತಿದೆ. ಬೆಂಗಳೂರಿನಲ್ಲಿ ಬೆಳಗಿನ ಜಾವ ಊಟಿ ವಾತಾವರಣ ನಿರ್ಮಾಣವಾಗಿರುತ್ತದೆ. ವಾಕಿಂಗ್ ಜಾಗಿಂಗ್ ಹೋಗುವ ಜನ ಈ ವಾತಾವರಣದಿಂದ ಖುಷಿ ಪಟ್ಟಿದ್ದಾರೆ.
ಇದರಿಂದ ಜನ ಬೆಂಕಿ ಮುಂದೆ ಕುಳಿತಿರುವುದು, ಬೆಚ್ಚಗಿನ ಬಟ್ಟೆಗಳನ್ನು ಧರಿಸಿ ಓಡಾಡುತ್ತಿರುವುದು ಎಲ್ಲೆಡೆ ಸಾಮಾನ್ಯವಾಗಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ದಕ್ಷಿಣ ಒಳನಾಡಿನ ಭಾಗವಾಗಿರುವ ಬೆಂಗಳೂ ನಗರ ಮತ್ತು ಬೆಂಗಳೂರು ಗ್ರಾಮಾಂತ ಭಾಗದಲ್ಲಿ ಬುಧವಾರ (ಜನವರಿ 2) ಇದ್ದ ವಾತಾವರಣವೇ ಇಂದು ಅಂದರೆ ಜನವರಿ 3ರಂದೂ ಮುಂದುವರೆಯಲಿದೆ.ಇದರಂತೆ, ರಾತ್ರಿ ವೇಳೆ ಚಳಿ ಮತ್ತು ಹಗಲು ಹೊತ್ತಿನಲ್ಲಿ ಒಣ ಹವೆ ಇರಲಿದೆ.

ಅದಾಗ್ಯೂ, ಭಾಗಶ: ಮೋಡ ಕವಿದ ವಾತಾವರಣ ಇರುವ ತಾಪಮಾನದಲ್ಲಿ ಬಹಳ ವ್ಯತ್ಯಾಸ ಇರಲ್ಲ. ಮುದ ನೀಡುವ ವಾತಾವರಣ ಕಾಣಬಹುದು ಎಂದು ಹವಾಮಾನ ಇಲಾಖೆ ವರದಿ ವಿವರ ನೀಡಿದೆ. ಇನ್ನೂ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಶಿಯಸ್ ಮತ್ತು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಶಿಯಸ್ ನಡುವೆ ಇರಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಮೂಲಗಳು ತಿಳಿಸಿವೆ.
ಆದರೆ ಈ ಬದಲಾದ ವಾತಾವರಣ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ಇದು ವೃದ್ಧರು ಹಾಗೂ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಧಿಕ ಚಳಿ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಜಾಗರೂಕರಾಗಿರುವಂತೆ ವೈದ್ಯರು ಸೂಚಿಸಿದ್ದಾರೆ.
ಇನ್ನೂ ಬೆಂಗಳೂರಿನಲ್ಲಿ ಚಳಿ ಹೆಚ್ಚಾದ ಪರಿಣಾಮ ಕೆಮ್ಮು, ನಗಡಿ ಇಂತೆಲ್ಲಾ ಆರೋಗ್ಯ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತಿವೆ. ಈ ನಡುವೆ ಕೊರೊನಾ ಪ್ರಕರಣಗಳೂ ಹೆಚ್ಚಾಗುತ್ತಿದ್ದು ಒಂದಿಷ್ಟು ಆತಂಕವನ್ನು ಹುಟ್ಟುಹಾಕಿದೆ. ಅದೇನೇ ಆಗಲಿ ಬೆಂಗಳೂರಿನ ಈ ವಾತಾವರಣವನ್ನು ಜನ ಮಸ್ತ್ ಎಂಜಾಯ್ ಮಾಡುತ್ತಿರುವುದು ಮಾತ್ರ ಸುಳ್ಳಲ್ಲ.












Click it and Unblock the Notifications