Rain Alert: ರಾಜಧಾನಿಯಲ್ಲಿ ಇಂದು ಜೋರು ಮಳೆ, ಮತ್ತೆ ಮುಂಗಾರು ಚುರುಕು: ಹವಾಮಾನ ವರದಿ
ಬೆಂಗಳೂರು, ಜುಲೈ 02: ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಮುಂಗಾರು ಮಳೆ ಚುರುಕಾಗಿದ್ದು, ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಆಯಿತು. ಕೊಂಚ ಬ್ರೇಕ್ ನೀಡಿದ್ದ ಮಳೆ ನಗರದ ಕೆಲವೆಡೆ ಸೋನೆ ರೂಪದಲ್ಲಿ ಆಗಿತ್ತು. ಆದರೆ ಇಂದು ಮಧ್ಯಾಹ್ನವೇ ಜೋರು ಮಳೆ ಆಗಿದೆ. ಇದು ಮುಂಗಾರು ಮಳೆ ಮತ್ತೆ ಚುರುಕಾಗುವ ಮುನ್ಸೂಚನೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ಕೆಲವೆಡೆ ಮುಂಗಾರು ಅಬ್ಬರ ಈಗಾಗಲೇ ಶುರುವಾಗಿದೆ. ಅದೀಗ ಬೆಂಗಳೂರಿಗೂ ವಿಸ್ತರಿಸಿದೆ. ಬುಧವಾರ ಮಧ್ಯಾಹ್ನವೇ ದಿಢೀರ್ ಮಳೆ ಆರಂಭವಾಗಿದ್ದು, ಸುಮಾರು ಒಂದು ಗಂಟೆಯಿಂದಲೂ ಸುರಿಯುತ್ತಿದೆ. ಸಂಜೆ 5 ಗಂಟೆಗೆ ಹೆಚ್ಚಿನ ಪ್ರಮಾಣದ ಮಳೆ ಆಯಿತು.

ಮಹಾದೇವಪುರ, ಆರ್‌ಆರ್ ನಗರ, ಬೊಮ್ಮನಹಳ್ಳಿ, ಯಲಹಂಕ ವಲಯ ವ್ಯಾಪ್ತಿಯ ವಿವಿಧ ಹತ್ತಾರು ವಾರ್ಡ್‌ಗಳಲ್ಲಿ ಜೋರು ಮಳೆ ಆಗಿದೆ. ಮಬ್ಬು ಹಾಗೂ ತಂಪು ವಾರಾವರಣ ನಿರ್ಮಾಣವಾಗಿದೆ. ತಾಪಮಾನ ಇಳಿಕೆ ಆಗಿದೆ. ಜಕ್ಕೂರು, ಹೊರಮಾವು, ಉಳಾಲ, ದೊಡ್ಡ ಬಿದರಕಲ್ಲು, ಕೋರಮಂಗಲ, ಎಚ್‌ಎಸ್ ಬಡಾವಣೆ, ಮಡಿವಾಳ, ಲಾಲ್ ಬಾಗ್, ಜಕ್ಕಸಂದ್ರ ಸೇರಿದಂತೆ ಇನ್ನಿತರ 37 ವಾರ್ಡ್‌ಗಳಲ್ಲಿ ಹಗುರದಿಂದ ವ್ಯಾಪಕ ಮಳೆ ದಾಖಲಾಗಿದೆ. ವಾಹನ ಸಂಚಾರ, ಜನ ಸಂಚಾರಕ್ಕೆ ಅಡಚಣೆ ಉಂಟಾಯಿತು. ತಗ್ಗು ಪ್ರದೇಶಗಳಲ್ಲಿ ನೀರು ನಿಂತದ್ದು ಕಂಡು ಬಂತು.
ಇದೇ ರೀತಿಯ ವಾತಾವರಣ ಮುಂದಿನ ಕೆಲವು ದಿನಗಳ ಕಾಲ ಮುಂದುವರಿಯಲಿದೆ. ಮೇ ತಿಂಗಳಿನಿಂದಲೂ ಬೆಂಗಳೂರಿನಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಕೆಲವು ಬಾರಿ ಪ್ರವಾಹ ಸ್ಥಿತಿ ಉಂಟಾಗಿತ್ತು. ಜೂನ್ ಆರಂಭದಲ್ಲಿ ವಾರವೇ ಬೆಂಗಳೂರಿನಲ್ಲೇ ಮಳೆ ಆರ್ಭಟಿಸಿತ್ತು. ಜೂನ್ ತಿಂಗಳಾಂತ್ಯಕ್ಕೆ ಮಳೆ ಕಡಿಮೆ ಆಯಿತು.
ಇಂದು ನಗರದಲ್ಲಿ ಕನಿಷ್ಠ ತಾಪಮಾನ 20 ಹಾಗೂ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್‌ಗೆ ದಾಕಲಾಗಿದೆ. ಮುಂದಿನ ದಿನಗಳಲ್ಲಿ ಆಗಾಗ ಬಿಸಿಲಿನ ದರ್ಶನವಾದರೂ ಕೆಲವೆಡೆ ಹಗುರದಿಂದ ಜೋರು ಮಳೆ ಸಾಧ್ಯತೆ ಇದೆ. ಈ ಮೂಲಕ ಮುಂಗಾರು ಮಳೆ ಮೂರು ಭಾರಿಗೆ ಧಾರಾಕಾರವಾಗಿ ಅಬ್ಬರಿಸುವ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಹಾಗೂ ಮಲೆನಾಡು ಹಾಗೂ ಒಂದಷ್ಟು ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications