ಬೆಂಗಳೂರಿಗೆ ಮಳೆ ಎಚ್ಚರಿಕೆ ಮಧ್ಯೆ ಶಾಲೆಗಳು ಆರಂಭ: ಸಾಕಷ್ಟು ಆವಾಂತರ ಸೃಷ್ಟಿ, ಎಚ್ಚರಿಕೆ ಅಗತ್ಯ
ಬೆಂಗಳೂರು, ಮೇ 31: ನಗರದಲ್ಲಿ ಮಂಗಳವಾರ ಸಂಜೆ ಮಳೆ ಜೊತೆಗೆ ಬಂದ ವೇಗದ ಗಾಳಿಯಿಂದಾಗಿ ಹಲವೆಡೆ ಮರಗಳು ಧರೆಗುರುಳಿವೆ. ಮಳೆಗೆ ರಸ್ತೆ ಅಂಡರ್‌ಪಾಸ್‌ಗಳು ಮತ್ತು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ ಆವಾಂತರ ಸೃಷ್ಟಿಯಾಗುತ್ತಲೇ ಇದೆ. ವಿವಿಧ ಬಡಾವಣೆಗಳ ಜನರು ಇನ್ನೂ ಮಳೆ ಸಮಸ್ಯೆಯಿಂದ ಹೊರ ಬರಲಾಗದೇ ನಲುಗಿದ್ದಾರೆ.
ಬೆಂಗಳೂರಿನಾದ್ಯಂತ ಜೂನ್ 1 ರಂದು ಶಾಲೆಗಳು ಪುನರಾರಂಭಗೊಳ್ಳಲಿವೆ. ಇತ್ತ ಹವಾಮಾನ ಇಲಾಖೆ ಮಳೆ 2-3 ದಿನ ಮುನ್ಸೂಚನೆ ನೀಡಿದೆ. ಶಾಲಾರಂಭಕ್ಕೂ ಮುನ್ನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅಗತ್ಯ ಸೂಚನೆ ನೀಡಿದೆ. ಗಾಳಿ ಗುಡುಗು ಮಳೆ ಬರಲಿದ್ದು, ಮಕ್ಕಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಕೈಗೊಳ್ಳುವಂತೆ ಆಡಳಿತ ಮಂಡಳಿಗಳು, ಬಿಇಒಗಳು ಮತ್ತು ಡಿಡಿಪಿಐಗಳಿಗೆ ಸೂಚನೆ ನೀಡಿದೆ. ಇತ್ತ ಪೋಷಕರು ಸಹ ಎಚ್ಚರಿಕೆ ವಹಿಸಬೇಕಿದೆ.

ಜೋರು ಮಳೆ ಮತ್ತು ಗಾಳಿಯ ರಭಸಕ್ಕೆ ಎಚ್‌ಆರ್‌ಬಿಆರ್ ಲೇಔಟ್, ಬಸವೇಶ್ವರನಗರ, ಹಳೆ ವಿಮಾನ ನಿಲ್ದಾಣ ರಸ್ತೆ, ಬಾಬುಸಪ್ಪಳ್ಯ, ಬೆಲ್ತೂರು-ಸೀಗೆಹಳ್ಳಿ ರಸ್ತೆ ಮತ್ತು ಮುದ್ದಿನಪಾಳ್ಯ ದಲ್ಲಿ ಮರಗಳು ಉರುಳಿ ಬಿದ್ದಿವೆ. ಇದರಿಂದ ಅನೇಕ ವಾಹನಗಳಿಗೆ ಹಾನಿಯಾಗಿದೆ.
ಮಳೆಗೆ ವಾಹನ ಸವಾರರದ್ದು ನಿತ್ಯ ಪರದಾಟ
ಇದಷ್ಟೇ ಅಲ್ಲದೇ ಬೆಂಗಳೂರಿನ ಹಲವೆಡೆ ಹೂಳು, ತ್ಯಾಜ್ಯ ಮತ್ತು ಒಣ ಎಲೆಗಳಿಂದ ಮುಚ್ಚಿಹೋಗಿರುವ ಚರಂಡಿಗಳು ಮಳೆಗಾಲದ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆ ಸೃಷ್ಟಿಸುತ್ತಿವೆ. ಇದರಿಂದ ಸ್ಲಲ್ಪ ಹೊತ್ತು ಮಳೆ ಬಂದರೂ ಸಹ ಮುಖ್ಯ ರಸ್ತೆ ಮತ್ತು ಉಪ ರಸ್ತೆಗಳಲ್ಲಿ ಮೂರು ಅಡಿಗೂ ಹೆಚ್ಚು ನೀರು ತುಂಬಿಕೊಳ್ಳುತ್ತಿದೆ. ಈ ಕಾರಣದಿಂದ ದ್ವಿಚಕ್ರ ವಾಹನ ಸವಾರರು ಸುಳಿದಾಡುವ ನೀರಿನಲ್ಲಿ ಸಂಚರಿಸಲು ಪರದಡುತ್ತಿದ್ದಾರೆ.

ಬೆಂಗಳೂರು ಹೊರ ವರ್ತುಲ ರಸ್ತೆಯ ಇಕೋಸ್ಪೇಸ್‌ನ ಮುಂಭಾಗದ ರಸ್ತೆಯಲ್ಲಿ ಎರಡರಿಂದ ಮೂರು ಅಡಿಗಳಷ್ಟು ನೀರು ತುಂಬಿಕೊಂಡಿತ್ತು. ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಅರಸಿ ಸಂಚರಿಸಿದರು. ಬಸ್ ಸೇರಿದಂತೆ ಬೃಹತ್ ವಾಹನಗಳು ಇದೇ ನೀರು ತುಂಬಿದ ಮಾರ್ಗದಲ್ಲಿಯೇ ಸಂಚರಿಸಿದವು. ಹೀಗಿ ಮಳೆ ನೀರಿನಲ್ಲಿ ಸಂಚರಿಸುವುದು ಜೀವಕ್ಕೆ ಕುತ್ತು ತರುವ ಸಾಧ್ಯತೆಯೂ ಇರುತ್ತದೆ.
ನಿತ್ಯ ಸಂಜೆ ಮಳೆ: ಆಟೋರಿಕ್ಷಾ ಜಖಂ
ನಿತ್ಯ ಬೆಳಗ್ಗೆ ಸ್ವಲ್ಪ ಸಮಯ ಸೂರ್ಯನ ದರ್ಶನವಾದರೆ ಮಧ್ಯಾಹ್ನದ ಹೊತ್ತಿಗೆ ಸೂರ್ಯ ಮರೆಯಾಗಿ, ಕಪ್ಪು ಮೋಡಗಳೇ ಆವರಿಸುತ್ತವೆ. ನೀಲಿ ಸ್ವಚ್ಚ ಆಕಾಶ ಮರೆಯಾಗಿ ಏಕಾಎಕಿ ಜೋರು ಮಳೆ ಆರಂಭವಾಗುತ್ತಿದೆ. ಮಳೆಗೆ ಅನೇಕ ಪ್ರದೇಶಗಳಲ್ಲಿ ಸಂಚಾರ ಸಮಸ್ಯೆ ನಿತ್ಯವು ಸೃಷ್ಟಿಯಾಗಿ ಸವಾರರನ್ನು ಹೈರಾಣಾಗುತ್ತಿದ್ದಾರೆ.
ಇನ್ನೂ ಬಿಬಿಎಂಪಿ ನಿಯಂತ್ರಣ ಕೊಠಡಿಯ ಅಧಿಕಾರಿಗಳಿಗೆ ಎಂಟು ಪ್ರದೇಶಗಳಲ್ಲಿ ಮರಗಳನ್ನು ಕಡಿಯುತ್ತಿರುವ ಬಗ್ಗೆ ದೂರು ನೀಡಲಾಗಿದೆ. ಕಮಲಾನಗರ ರಸ್ತೆ ಬಿಡಬ್ಲ್ಯುಎಸ್‌ಎಸ್‌ಬಿ ಕಚೇರಿ ಬಳಿ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಮರದ ಪಕ್ಕದಲ್ಲೇ ನಿಂತಿದ್ದ ಆಟೋರಿಕ್ಷಾ ಜಖಂಗೊಂಡಿದ್ದು, ಚಾಲಕ ಹಾಗೂ ಪಕ್ಕದ ವಾಹನ ಸವಾರರು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳವಾರ ಸಂಜೆ ಸುಮಾರು ಎರಡು ಗಂಟೆ ಕಾಲ ಸಾಧಾರಣ ಮಳೆ ಸುರಿದಿದೆ. ಈ ವೇಳೆ ಶಾಂತಿನಗರ, ಜಯನಗರ, ಕೆ.ಆರ್.ಮಾರುಕಟ್ಟೆ, ವಿಜಯನಗರ, ಗಾಂಧಿನಗರ, ರಾಜಾಜಿನಗರ, ಜೆಪಿ ನಗರ ಒಳಗೊಂಡಂತೆ ಮುಂತಾದ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದಿದೆ. ಮುಂದಿನ ಎರಡು ದಿನಗಳ ಪರಿಷ್ಕೃತ ಮುನ್ಸೂಚನೆಯು, ಹಲವು ಸ್ಥಳಗಳಲ್ಲಿ ಸಂಜೆ ಅಥವಾ ರಾತ್ರಿಯ ವೇಳೆಗೆ ಲಘುವಾಗಿ ಸಾಧಾರಣ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಗಾಳಿಯು ಗಂಟೆ 40 ಕಿಮೀ ವೇಗದಲ್ಲಿ ಬೀಸಲಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಹಳದಿ ಎಚ್ಚರಿಕೆ ನೀಡಿದೆ. ಹಳದಿ ಎಚ್ಚರಿಕೆಯ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುವ ಲಕ್ಷಣಗಳು ಇವೆ ಎಂದು ಇಲಾಖೆ ತಿಳಿಸಿದೆ.












Click it and Unblock the Notifications