Bengaluru Rains: ಮಳೆ ಸಿಂಚನ! ಇಂದು ವ್ಯಾಪಕ ಮಳೆ ಅಬ್ಬರದ ಮುನ್ಸೂಚನೆ: ಹವಾಮಾನ ವರದಿ
ಬೆಂಗಳೂರು, ಮೇ 13: ಬಿಸಿಲಿನ ಕಾವು ಹೆಚ್ಚಾಗುತ್ತಿದ್ದ ರಾಜಧಾನಿ ಬೆಂಗಳೂರಿನಲ್ಲಿ ಜೋರಾಗಿ ಮಳೆ ಆಗಿದೆ. ರಸ್ತೆ ಮೇಲೆಲ್ಲ ನೀರು ನಿಂತುಕೊಂಡಿದೆ. ಸೋಮವಾರ ಬಂದ ಮಳೆಗೆ ನೆಲ ತಂಪಾಗಿದೆ. ವಾತಾವರಣದಲ್ಲಿ ಕೊಂಚ ಬದಲಾವಣೆ ಆಗಿದೆ. ಇಂದು ಮಂಗಳವಾರ ಮಧ್ಯಾಹ್ನ ಹೆಚ್ಚಿನ ಬಿಸಿಲು ದಾಖಲಾಗಲಿದ್ದು, ಸಂಜೆ ನಂತರ ಇಲ್ಲವೇ ರಾತ್ರಿ ಗುಡುಗು ಮಿಂಚು ಸಹಿತ ಜೋರು ಮಳೆ ಆಗಲಿದೆ. ನೆನ್ನೆ ಅಂಜನಾಪುರದಲ್ಲಿ 45.5 ಮಿಲಿ ಮೀಟರ್ ಮಳೆ ದಾಖಲಾಗಿದೆ. ಹಾಗಾದರೆ ಮುಂದಿನ ಮುನ್ಸೂಚನೆ ಏನಿದೆ? ಇಲ್ಲಿ ತಿಳಿಯಿರಿ.
ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಉಷ್ಣ ಅಲೆ ಶುರುವಾಗಿತ್ತು. ದಿನೇ ದಿನ ತಾಪಮಾನ ಪ್ರಮಾಣ ಹೆಚ್ಚಾಗತೊಡಗಿತ್ತು. ಮಳೆ ಯಾವಾಗ ಬರತ್ತೋ ಎಂದು ಕಾಯುತ್ತಿದ್ದ ಜನರಿಗೆ ನೆನ್ನೆ ರಾತ್ರಿ ಅಲ್ಲಲ್ಲಿ ಜೋರು ಮಳೆ ದಾಖಲಾಗಿದೆ. ಇದರಿಂದ ಇಳೆ ತಂಪಾಗಿದ್ದು, ಇಂದು ಮಂಗಳವಾರವೂ ಮತ್ತೆ ಮಳೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನೆನ್ನೆ ಅಂಜನಾಪುರದಲ್ಲಿ 45.5 ಮಿ.ಮೀ., ಹೆಮ್ಮಿಗೆಪುರ 35 ಮಿ.ಮೀ., ಕೋಣನಕುಂಟೆ 32.5 ಮಿ.ಮೀ., ಗೊಟ್ಟಿಗೆರೆ 26.5, ಮಿ.ಮೀ., ರಾಜರಾಜೇಶ್ವರಿ ನಗರ 24.5 ಮಿ.ಮೀ., ದೊರೆಸಾನಿಪಾಳ್ಯ 24ಮಿ.ಮೀ., ಎಚ್‌ಎಎಲ್ ವಿಮಾನ ನಿಲ್ದಾಣ 18.5 ಮಿ.ಮೀ., ಬಿಳೆಕಹಳ್ಳಿ, 20ಮಿ.ಮೀ., ನಾಯಂಡಹಳ್ಳಿ 18 ಮಿ.ಮೀ., ಕೋರಮಂಗಲ 17ಮಿ.ಮೀ. ಮತ್ತು ಬಿಟಿಎಂ ಬಡಾವಣೆ 16 ಮಿ.ಮೀ. ಮಳೆ ದಾಖಲಾಗಿದೆ. ನಗರದ ವಿವಿಧೆಡೆ ಸಂಚಾರ ಸಿಗ್ನಲ್‌ಗಳಲ್ಲಿ ದಟ್ಟಣೆ ಕಂಡು ಬಂತು. ಕೆಲವೆಡೆ ಮಳೆ ನೀರು ಸೇರಿಕೊಂಡು ಒಳಚರಂಡಿ ನೀರು ರಸ್ತೆ ಮೇಲೆಲ್ಲ ಉಕ್ಕಿ ಹರಿದದ್ದು ಕಂಡು ಬಂತ್ತು.
ಸವಾರರಿಗೆ ದಿಢೀರ್ ಮಳೆಯ ಕಿರಿ ಕಿರಿ
ಉಳಿದಂತೆ ಅರಕೆರೆ, ವನ್ನಾರಪೇಟೆ, ಮಾರತ್ತಹಳ್ಳಿ, ಎಚ್‌ಎಸ್‌ಆರ್ ಬಡಾವಣೆ, ದೊಡ್ಡಾನೆಕ್ಕುಂದಿ, ವಿದ್ಯಾಪೀಠ, ಪಟ್ಟಾಭಿರಾಮನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಹಗುರ ಮಳೆ ದಾಖಲಾಗಿದೆ. ದಿಢೀರ್ ಮಳೆ ಬಂದ ಕಾರಣ ವಾಹನ ಸವಾರರು ಕಿರಿ ಕಿರಿ ಅನುಭವಿಸಬೇಕಾಯಿತು. ನಗರದಲ್ಲಿ ಸದ್ಯ ಗರಿಷ್ಠ ತಾಪಮಾನ 33 ಹಾಗೂ ಕನಿಷ್ಠ ತಾಪಮಾನ 20-22 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಂಗಳೂರು ಹವಾಮಾನ ಮುನ್ಸೂಚನೆ
ಉದ್ಯಾನ ನಗರಿ ಇಂದು ಸಹ ಜೋರು ಮಳೆಗೆ ಸಾಕ್ಷಿಯಾಗಲಿದೆ. ಇದರ ನಗರದ ಪ್ರಮುಖ ಭಾಗಗಳಲ್ಲಿ ಉತ್ತಮ ಮಳೆ ಮುನ್ಸೂಚನೆ ಇದೆ. ಸಂಜೆ ನಂತರ ಕಚೇರಿಯಿಂದ ಮನೆಗೆ ಹೋಗುವವರು, ವ್ಯಾಪಾರಿಗಳು ಸೇರಿದಂತೆ ಸಾರ್ವಜನಿಕರು, ಪ್ರಯಾಣಿಕರು ಮಳೆ ನೋಡಿಕೊಂಡು ಓಡಾಡುವುದು ಉತ್ತಮ. ತಾಪಮಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ತಿಳಿಸಲಾಗಿದೆ.
ಹಿಂಗಾರು ಮಳೆ ರಾಜ್ಯದ ಮಲೆನಾಡು, ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಕ್ರಿಯವಾಗಿತ್ತು. ಇದೀಗ ಬೆಂಗಳೂರು ನಗರ ಜಿಲ್ಲೆಯಲ್ಲೂ ಸಕ್ರಿಯವಾಗಿದೆ. ತಾಪಮಾನಕ್ಕೆ ಕಂಗಾಲಾಗಿದ್ದ ನಾಗರಿಕರಿಗೆ ಈ ಮಳೆ ಸಿಂಚನ ಕೊಂಚ ನೆಮ್ಮದಿ ತಂದಿದೆ ಎನ್ನಬಹುದು.












Click it and Unblock the Notifications