ಬೆಂಗಳೂರಿನ ಈ ಪ್ರದೇಶಗಳಲ್ಲಿ ಫೆ.26ರಂದು 24 ಗಂಟೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ: BWSSB
ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಕಾವೇರಿ 5ನೇ ಹಂತದ ಗೊಟ್ಟಿಗೆರೆ ಜಲಸಂಗ್ರಹಗಾರದ ಸಮೀಪ ಇಎಂಎಫ್ ಮೀಟರ್‌ಗಳನ್ನು ಅಳವಡಿಸುವ ಕಾಮಗಾರಿ ನಡೆಸಲಾಗುತ್ತಿದೆ. ಈ ಸಂಬಂಧ ನಗರದ ಫೆಬ್ರವರಿ 26ರಂದು (ಗುರುವಾರ) ಬೆಳಗ್ಗೆ 6 ರಿಂದ ಫೆ.27(ಶುಕ್ರವಾರ)ರ ಬೆಳಗ್ಗೆ 6ರವರೆಗೆ 24 ಗಂಟೆಗಳ ಕಾಲ ಕುಡಿಯುವ ಕಾವೇರಿ ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಈ ಕುರಿತು ಅಧಿಕೃತ ಮಾಹಿತಿಯನ್ನು ಮಂಗಳವಾರ ನೀಡಿದೆ. ಜಲಮಂಡಳಿ ಗ್ರಾಹಕರು ಅಂದು ಅಗತ್ಯ ನೀರಿನ ಸಂಗ್ರಹ ಮಾಡಿಟ್ಟುಕೊಳ್ಳುವಂತೆ ಮನವಿ ಮಾಡಿದೆ. ಜೊತೆಗೆ ನೀರು ಪೂರೈಕೆಯಲ್ಲಿ ಆಗುವ ಅಡಚಣೆಗೆ ಸಹಕರಿಸುವಂತೆ ಕೋರಿದೆ. ನೀರು ಕಡಿತವಾಗಲಿರುವ ಪ್ರದೇಶಗಳ ವಿವರ ಇಲ್ಲಿದೆ.

ನೀರಿನ ಪೂರೈಕೆಯ ವ್ಯತ್ಯಯದ ಸ್ಥಳಗಳ ವಿವರ ಹೀಗಿದೆ
ವೈಟ್‌ಫೀಲ್ಡ್, ನೆಲ್ಲೂರಹಳ್ಳಿ, ಸಿದ್ದಾಪುರ, ನಾಗೊಂಡನಹಳ್ಳಿ, ರಾಮಗೊಂಡನಹಳ್ಳಿ, ಚನ್ನಸಂದ್ರ, ಹೂಡಿ, ಗರುಡಾಚಾರ್ ಪಾಳ್ಯ, ದೊಡ್ಡನೆಕುಂದಿ, ಮುನೆಕೊಳಲು, ಕುಮಾರಸ್ವಾಮಿ ಬಡಾವಣೆ, ಪೂರ್ಣಪ್ರಜ್ಞಾ ಬಡಾವಣೆ, ಬನಶಂಕರಿ, ಕೊಲ್ಲಹಳ್ಳಿ, ಅಂಜನಾಪುರ, ಗೊಟ್ಟಿಗೆರೆ, ಬೇಗೂರು, ಕೊಡಿಚಿಕ್ಕನಹಳ್ಳಿ, ಕೂಡ್ಲು, ಕಾಡುಗೋಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಕಾವೇರಿ ನೀರು ಸರಬರಾಜು ಯೋಜನೆಯ ಜಲರೇಚಕ ಯಂತ್ರಗಾರಗಳ ಸ್ಥಗಿತತೆಯಿಂದ ಕಾವೇರಿ ನೀರು ಸರಬರಾಜಿನಲ್ಲಿ ತಾತ್ಕಾಲಿಕವಾಗಿ ವ್ಯತ್ಯಯವಾಗಲಿದೆ. ನಾಗರಿಕರು ಮುಂಜಾಗ್ರತೆ ವಹಿಸುವಂತೆ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.
ಸ್ವಚ್ಛತಾ ಏಜೆನ್ಸಿಗಳ ನೋಂದಣಿ ಕಡ್ಡಾಯ
ನಗರದಲ್ಲಿ ಖಾಸಗಿ ಮ್ಯಾನ್‌ಹೋಲ್ ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (STP) ಸ್ವಚ್ಛಗೊಳಿಸುವ ಎಲ್ಲ ಖಾಸಗಿ ಏಜೆನ್ಸಿಗಳು ಮತ್ತು ವಾಹನಗಳ ನೋಂದಣಿಯನ್ನು ಬೆಂಗಳೂರು ಜಲಮಂಡಳಿ (BWSSB) ಕಡ್ಡಾಯಗೊಳಿಸಿದೆ. ಈ ಸಂಬಂಧ ಅಧಿಕಾರಿಗಳಿಗೆ ಜಲಮಂಡಳಿಯು ಅಗತ್ಯ ಸೂಚನೆಗಳನ್ನು ನೀಡಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಯ್ದೆ 1964ರ ಸೆಕ್ಷನ್ 84 ಮತ್ತು 88ರ ಅಡಿಯಲ್ಲಿ ಈ ಹಿಂದೆ ನೀಡಲಾಗಿದ್ದ ಅಧಿಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಲಮಂಡಳಿ ಅಧ್ಯಕ್ಷರು ಎಲ್ಲಾ ಕಾರ್ಯಪಾಲಕ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಕಟ್ಟುನಿಟ್ಟಾಗಿ ನಿರ್ದೇಶಿಸಿದೆ.
ಒಂದು ವೇಳೆ ನೋಂದಾಯಿಸದೇ ಅಥವಾ ಅನಧಿಕೃತ ವ್ಯಕ್ತಿಗಳ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡ ಸಂದರ್ಭದಲ್ಲಿ ಕಾರ್ಮಿಕರಿಗೆ ಅನಾಹುತಗಳಿಗೆ ತುತ್ತಾದಲ್ಲಿ ಆಯಾ ವಾಣಿಜ್ಯ ಕಟ್ಟಡ, ವಸತಿ ಸಮುಚ್ಚಯ, ಖಾಸಗಿ ಬಡಾವಣೆಗಳ ಮಾಲೀಕರು ಇಲ್ಲವೇ ನಿವಾಸಿಗಳ ಕಲ್ಯಾಣಾಭಿವೃದ್ಧಿ ಸಂಘ (RWA) ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಲಮಂಡಳಿ ಎಚ್ಚರಿಕೆ ನೀಡಿದೆ.












Click it and Unblock the Notifications