Bengaluru Waste Management: ಬೆಂಗಳೂರು ನಗರದ ಕಸ ನಿರ್ವಹಣೆ ಬಗ್ಗೆ ಬಿಗ್ ಅಪ್ಡೇಟ್ಸ್ ಕೊಟ್ಟ ಸಚಿವ ಕೃಷ್ಣಬೈರೇಗೌಡ
ಬೆಂಗಳೂರು: ಬೆಂಗಳೂರು ನಗರದ ಕಸ ನಿರ್ವಹಣೆ ಬಗ್ಗೆ ಬಿಗ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಅಪ್ಡೇಟ್ಸ್ ಕೊಟ್ಟಿದ್ದಾರೆ.
ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಪ್ರಾಥಮಿಕ ಸಂಗ್ರಹಣೆಗಾಗಿ ರೂಪಿಸಿರುವ ಹೊಸ ಟೆಂಡರ್‌ಗಳ ಪೈಕಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ನವೆಂಬರ್ ತಿಂಗಳ ಅಂತ್ಯದೊಳಗೆ ಕಾರ್ಯಾರಂಭ ಮಾಡುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಬಿಎ ವ್ಯಾಪ್ತಿಯಲ್ಲಿ ಘನತ್ಯಾಜ್ಯದ ಪ್ರಾಥಮಿಕ ಸಂಗ್ರಹಣೆ ಕುರಿತು ವಿಕಾಸಸೌಧದ ಕಚೇರಿಯಲ್ಲಿ ನವೆಂಬರ್ 7ರ ಶನಿವಾರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೊಸದಾಗಿ ರೂಪಿಸಿರುವ 33 ಘನತ್ಯಾಜ್ಯ ನಿರ್ವಹಣಾ ಪ್ಯಾಕೇಜ್‌ಗಳ ಪೈಕಿ ಮೊದಲ ಹಂತದಲ್ಲಿ ಐದು ಪ್ಯಾಕೇಜ್‌ಗಳಿಗೆ ಆದೇಶ ನೀಡಲಾಗಿದೆ.
ಗೋವಿಂದರಾಜನಗರ, ಮಹಾಲಕ್ಷ್ಮಿ ಲೇಔಟ್, ವಿಜಯನಗರ ಹಾಗೂ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸ ಟೆಂಡರ್ ಅಡಿಯಲ್ಲಿ ಕಾರ್ಯಾರಂಭ ಮಾಡಲು ಅಗತ್ಯ ಸಿದ್ಧತೆಗಳು ಅಂತಿಮ ಹಂತದಲ್ಲಿದ್ದು, ನವೆಂಬರ್ ತಿಂಗಳ ಅಂತ್ಯದೊಳಗೆ ಕಾರ್ಯಾರಂಭ ಮಾಡಲು ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಕಾರ್ಯಾರಂಭ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಹೊಸ ಗುತ್ತಿಗೆ ಆರಂಭವಾದ ಬಳಿಕ ಜಿಪಿಎಸ್ ದತ್ತಾಂಶದ ಆಧಾರದ ಮೇಲೆಯೇ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕು. ಕಸದ ಗಾಡಿಗಳಲ್ಲಿ ಜಿಪಿಎಸ್ ವ್ಯವಸ್ಥೆ ಇಲ್ಲದಿದ್ದರೆ, ಗುತ್ತಿಗೆದಾರರಿಗೆ ಆ ದಿನದ ಬಿಲ್ ಸಂದಾಯವಾಗಬಾರದು, ಬದಲಿಗೆ ಅಂತಹ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು. ಈ ಎಲ್ಲಾ ನಿಯಮಗಳ ಆಧಾರದಲ್ಲಿ ಸಿಸ್ಟಂ ಜನರೇಟೆಡ್ ಬಿಲ್ ಬರುವಂತಹ ವ್ಯವಸ್ಯೆ ಜಾರಿಯಾಗಬೇಕು. ಈ ಬಗ್ಗೆ ಆಯಾ ನಗರ ಪಾಲಿಕೆಗಳ ಅಧಿಕಾರಿಗಳು ಸಮರ್ಪಕವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರ ಪಾಲಿಕೆ ಆಯುಕ್ತರು ಈ ವ್ಯವಸ್ಥೆಯ ಅನುಷ್ಠಾನದ ಕುರಿತು ಸಮರ್ಪಕವಾಗಿ ಮೇಲ್ವಿಚಾರಣೆ ನಡೆಸಬೇಕು. ಹೊಸ ವ್ಯವಸ್ಥೆಯ ಕಾರ್ಯವಿಧಾನದ ಬಗ್ಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಹೊಸ ಗುತ್ತಿಗೆಗೆ ಸಂಬಂಧಿಸಿದಂತೆ ಸಾಫ್ಟ್ವೇರ್ ಈಗಾಗಲೇ ಸಿದ್ಧವಾಗಿದ್ದು, ಅದರ ಕಾರ್ಯವಿಧಾನದ ಕುರಿತು ಪ್ರಾತ್ಯಕ್ಷಿಕೆ ನೀಡಿಬೇಕು. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.
ವಾಹನಗಳ ಕಾರ್ಯನಿರ್ವಹಣೆಗೆ ಜಿಪಿಎಸ್ ಕಡ್ಡಾಯ
ಘನತ್ಯಾಜ್ಯ ಸಂಗ್ರಹಣೆಗೆ ಸಂಬಂದಿಸಿದಂತೆ ಕಾರ್ಯಾರಂಭವಾಗುತ್ತಿರುವ 4 ಪ್ಯಾಕೇಜ್‌ಗಳ ಗುತ್ತಿಗೆದಾರರು ಈಗಾಗಲೇ ವಾಹನಗಳನ್ನು ಖರೀದಿಸಲಾಗಿದ್ದು, ಅದಕ್ಕೆ ಬೇಗಾದ ಫ್ಯಾಬ್ರಿಕೇಷನ್ ತ್ವರಿತವಾಗಿ ಮಾಡಿಕೊಳ್ಳಬೇಕು. ಇದೇ ತಿಂಗಳಿನಿಂದ ಅವುಗಳ ಮೂಲಕ ಸಂಗ್ರಹಣಾ ಕಾರ್ಯ ಆರಂಭಿಸಬೇಕು. ಎಲ್ಲಾ ವಾಹನಗಳಿಗೂ ಜಿಪಿಎಸ್ ಅಳವಡಿಕೆ ಕಡ್ಡಾಯವಾಗಿರಬೇಕು. ವಾಹನ್ ಪೋರ್ಟಲ್ ಹಾಗೂ ಇನ್ವಾಯ್ಸ್ ವ್ಯವಸ್ಥೆಯ ಮೂಲಕ ವಾಹನಗಳ ಕಾರ್ಯನಿರ್ವಹಣೆಯ ಸ್ಥಿತಿಯನ್ನು ಪರಿಶೀಲಿಸಬೇಕು ಎಂದರು.
ವಾಹನಗಳು ಹಾಗೂ ಸಿಬ್ಬಂದಿಗೆ ಏಕರೂಪದ ವ್ಯವಸ್ಥೆ
ಘನತ್ಯಾಜ್ಯ ಸಂಗ್ರಹಣೆಗೆ ಬಳಸುವ ಎಲ್ಲಾ ವಾಹನಗಳಿಗೆ ಸೂಕ್ತ ಸ್ಟಿಕ್ಕರ್ಗಳನ್ನು ಅಳವಡಿಸಿ, ಬ್ರ್ಯಾಂಡಿಂಗ್ ಮಾಡಬೇಕು. ಪ್ರತಿಯೊಂದು ವಾಹನದಲ್ಲೂ ಏಕರೂಪತೆ ಇರಬೇಕು. ಸಿಬ್ಬಂದಿಗೆ ಹೊಸ ಸಮವಸ್ತ್ರಗಳನ್ನು ಒದಗಿಸಬೇಕು. ಎಲ್ಲ ಸಿಬ್ಬಂದಿಯನ್ನು ಸಜ್ಜುಗೊಳಿಸಿ, ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಪರಿಣಾಮಕಾರಿಯಾಗಿ ಕಾರ್ಯಾರಂಭ ಮಾಡಬೇಕು ಎಂದು ಸೂಚಿಸಿದ್ದಾರೆ.
ಮುಂದುವರಿದು ಬೆಂಗಳೂರು ನಗರದಲ್ಲಿ ಬ್ಲ್ಯಾಕ್ ಸ್ಪಾಟ್‌ಗಳ ಸಮಸ್ಯೆಗೆ ಸಂಪೂರ್ಣ ಕಡಿವಾಣ ಹಾಕಬೇಕು. ವಿನೂತನ ಕ್ರಮಗಳನ್ನು ಕೈಗೊಂಡು ಬ್ಲ್ಯಾಕ್ ಸ್ಪಾಟ್‌ಗಳನ್ನು ನಿರ್ಮೂಲನೆ ಮಾಡಲು ಆದ್ಯತೆ ನೀಡಬೇಕು. ರಸ್ತೆ ಬದಿ ಕಸ ಬಿಸಾಡಿ ಬ್ಲಾಕ್ ಸ್ಪಾಟ್‌ಗಳನ್ನಾಗಿ ಮಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.
ಜಾಗೃತಿ ಕಾರ್ಯಕ್ರಮಗಳನ್ನು ಪರಿಣಮಕಾರಿಯಾಗಿ ಮಾಡಿ
ಹೊಸ ಟೆಂಡರ್ ಅನುಷ್ಠಾನದ ಸಂದರ್ಭದಲ್ಲಿ ನಾಗರಿಕರಿಗೆ ಸೂಕ್ತ ಮಾಹಿತಿ ತಲುಪಿಸುವ ಸಂವಹನ ಹಾಗೂ ಜಾಗೃತಿ ಕಾರ್ಯ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ಚಟುವಟಿಕೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದ್ದಾರೆ. ಮುಂದುವರಿದು ಹೊಸ ಟೆಂಡರ್‌ಗಳನ್ನು ಆರಂಭಿಸುವ ಮುನ್ನ ಗುತ್ತಿಗೆದಾರರು ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು. ಕಾರ್ಯಾರಂಭದ ಆರಂಭಿಕ ಹಂತದಲ್ಲಿಯೇ ಯಾವುದೇ ಗೊಂದಲ ಗಳಿಗೆ ಅವಕಾಶ ನೀಡದೆ, ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕು. ನಗರದ ಕಸದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿವಾರಿಸುವ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದ್ದಾರೆ.
33 ಪ್ಯಾಕೇಜ್‌ಗಳ ಹೊಸ ಟೆಂಡರ್ ಪ್ರಕ್ರಿಯೆ: ಜಿಬಿಎ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ರೂಪಿಸಿರುವ ಒಟ್ಟು 33 ಪ್ಯಾಕೇಜ್ಗಳ ಪೈಕಿ 5 ಪ್ಯಾಕೇಜ್‌ಗಳಿಗೆ ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. 13 ಪ್ಯಾಕೇಜ್‌ಗಳಿಗೆ ಗುತ್ತಿಗೆ ಒಪ್ಪಿಗೆ ಪತ್ರಗಳನ್ನು ನೀಡಲಾಗಿದ್ದು, 10 ಪ್ಯಾಕೇಜ್‌ಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಸರ್ಕಾರದ ಅನುಮೋದನೆಗಾಗಿ ಕಳುಹಿಸಲಾಗಿದೆ. ಬಾಕಿ 5 ಪ್ಯಾಕೇಜ್‌ಗಳಲ್ಲಿ 1 ಪ್ಯಾಕೇಜ್ ಮೌಲ್ಯಮಾಪನ, 2 ಪ್ಯಾಕೇಜ್ ಹೈಕೋರ್ಟ್, 1 ಪ್ಯಾಕೇಜ್ ಅಪೀಲು ಹಾಗೂ 1 ಪ್ಯಾಕೇಜ್ ನ್ಯಾಯಾಲಯದ ಆದೇಶದ ಬಳಿಕ ಟೆಂಡರ್ ಕರೆಯಲಾಗುವುದೆಂದು ಮಾಹಿತಿ ನೀಡಿದರು.
ಸಮೀಕ್ಷೆಯ ಅನುಸಾರ ಹೊಸ ಟೆಂಡರ್ ಅನುಷ್ಠಾನ: ಆಯಾ ನಗರ ಪಾಲಿಕೆಗಳಲ್ಲಿ ಚೆಕ್ಲಿಸ್ಟ್ ಆಧಾರದ ಮೇಲೆ ಮನೆ-ಮನೆ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿಕೊಂಡು, ಈ ಸಮೀಕ್ಷೆಯ ವರದಿಯ ಆಧಾರದ ಮೇಲೆಯೇ ಹೊಸ ಟೆಂಡರ್ಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Click it and Unblock the Notifications
