ಬೆಂಗಳೂರು: ಸಣ್ಣ ಕೈಗಾರಿಕೆ ಕೆಲಸಗಾರರಿಗೆ-ತರಬೇತಿ ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ: ಬಿಬಿಎಂಪಿ
ಬೆಂಗಳೂರು, ಏಪ್ರಿಲ್ 18: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ವಿಜಯನಗರ ಕಾಸಿಯಾ ಸಭಾಂಗಣದಲ್ಲಿ ಸಣ್ಣ ಕೈಗಾರಿಕೆ ಕೆಲಸಗಾರರು ಮತ್ತು ತರಬೇತಿ ಕೇಂದ್ರದಲ್ಲಿ ಕಲಿಯಲು ಬಂದ ವಿದ್ಯಾರ್ಥಿಗಳಲ್ಲಿ ಮತದಾನ ಅರಿವು ಮೂಡಿಸಿದರು.
ಬೆಂಗಳೂರಿನಲ್ಲಿ ಮತದಾನ ಹೆಚ್ಚಳಕ್ಕೆ ಕ್ರಮ ಕೈಗೊಂಡಿರುವ ಬಿಬಿಎಂಪಿಯು ಮಂಗಳವಾರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ (GT ಮತ್ತು TC) ಅರ್ಥಪೂರ್ಣ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.

ತರಬೇತಿ ಕೇಂದ್ರದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಮತದಾನದ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿತ್ತು. ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಸಾಕಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರಿಗೂ ತಪ್ಪದೆ ಮತದಾನ ಮಾಡುವಂತೆ ತಮ್ಮ ಸಂಸ್ಥೆಗಳ ವತಿಯಿಂದ ಅರಿವು ಮೂಡಿಸುವ ಕೆಲಸ ಮಾಡಬೇಕು. ಉದ್ಯಮಿಗಳು ತಮ್ಮ- ತಮ್ಮ ಕೈಗಾರಿಕೆಗಳಲ್ಲಿ ಮತದಾನ ಜಾಗೃತಿಯ ಬಿತ್ತಿಪತ್ರಗಳನ್ನು ಅಂಟಿಸಿ ಅರಿವು ಮೂಡಿಸುವ ಕೆಲಸ ಮಾಡಬೇಕು ಮತ್ತು ಎಲ್ಲರೂ ಈ ಪ್ರಜಾಪ್ರಭುತ್ವದ ಹಬ್ಬದ ದಿನವಾದ ಮೇ 10 ರಂದು ತಪ್ಪದೇ ಮತದಾನದ ಹಕ್ಕು ಚಲಾಯಿಸಿ ಎಂದು ಮನವಿ ಮಾಡಿದರು.
ಸಣ್ಣ ಕೈಗಾರಿಕೆಗಳಲ್ಲಿ 5.6 ಲಕ್ಷ ಕೆಲಸಗಾರರು
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ತಾವೆಲ್ಲರು ಕೈಜೋಡಿಸಬೇಕು. ಈಗಾಗಲೇ ಮತದಾನ ಜಾಗೃತಿ ವಿಶಿಷ್ಟ ಕಾರ್ಯಕ್ರಮಗಳು ನಗರದಲ್ಲಿ ನಡೆಯುತ್ತಿವೆ. ಬಿಬಿಎಂಪಿಯು ಬೆಂಗಳೂರಿನ ಎಲ್ಲಾ ವಲಯಗಳಲ್ಲಿರುವ ಐಟಿ-ಬಿಟಿ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಗಾರ್ಮೆಂಟ್ಸ್ ಗಳ ಉದ್ಯೋಗಿಗಳು ಕಾರ್ಯನಿರ್ವಹಿಸುವ ಸ್ಥಳಕ್ಕೆ ಖುದ್ದಾಗಿ ಭೇಟಿಯಾಗಿ ಮತದಾನದ ಕುರಿತು ಜಾಗೃತಿ ಮೂಡಿಸುತ್ತಿದೆ ಎಂದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಅಡಿಯಲ್ಲಿ (KASSIA) ಅಡಿಯಲ್ಲಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಸುಮಾರು 5.6 ಲಕ್ಷ ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತದಾನದ ದಿನ ಎಲ್ಲರಿಗೂ ವೇತನ ಸಹಿತ ರಜೆ ನೀಡಿ ತಪ್ಪದೇ ಮತದಾನ ಮಾಡಲು ಉದ್ಯೋಗಿಗಳಿಗೆ ತಿಳಿಸಲಾಗುವುದೆಂದು ಸಭೆಯಲ್ಲಿ ಭಾಗವಹಿಸಿದ್ದ ಉದ್ಯಮಿಗಳು ಭರವಸೆ ನೀಡಿದರು.
ನಗರದ ದಕ್ಷಿಣ ವಲಯ ಆಯುಕ್ತರಾದ ಶ್ರೀ ಜಯರಾಮ ರಾಯಪುರ, ಕಾಸಿಯಾ ಅಧ್ಯಕ್ಷ ಕೆ.ಎನ್. ನರಸಿಂಹಮೂರ್ತಿ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷಾದ ಸಂಗಪ್ಪ ಸೇರಿದಂತೆ ಕೈಗಾರಿಕೋದ್ಯಮಿಗಳು, ಮಹಿಳಾ ಉದ್ಯಮಿಗಳ ಸಂಘ ಅವೇಕ್ ನ ಪ್ರತಿನಿಧಿಗಳು ಮತ್ತು ಜಿಟಿ ಮತ್ತು ಟಿಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮತದಾನ ಜಾಗೃತಿ ವಿಡಿಯೋಗಾಗಿ ಸ್ಪರ್ಧೆ ಆಯೋಜನೆ
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮತದಾರರನ್ನು ಸೆಳೆಯಲು ಬಿಬಿಎಂಪಿಯು ವಿನೂತನವಾಗಿ 'ವೋಟ್-ಎ-ಥಾನ್' ("VOTE-A-THON") ಸ್ಪರ್ಧೆಯನ್ನು ಇದೇ ತಿಂಗಳ ಮೇ 30ರವರೆಗೂ ಹಮ್ಮಿಕೊಂಡಿದೆ. ಆಸಕ್ತರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಚುನಾವಣೆ-ಮತದಾನ ಮಹತ್ವ ಕುರಿತು ರೀಲ್ಸ್, ಪೋಸ್ಟರ್ಸ್, ಸ್ಲೋಗನ್ ಮತ್ತು ಜಿಂಗಲ್ಸ್ ಗಳನ್ನು ಮಾಡಿ ಕಳುಹಿಸಬೇಕು.
ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಸ್ಪರ್ಧೆ ನಡೆಯಲಿದೆ. ಪಾಲ್ಗೊಳ್ಳುವವರು ಕ್ರಿಯಾತ್ಮಕವಾಗಿ ಯೋಚಿಸಿ ಹ್ಯಾಶ್ ಟ್ಯಾಗ್(#Vote-A-Thon) ಬಳಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಬೇಕು ಎಂದು ಬಿಬಿಎಂಪಿ ಮನವಿ ಮಾಡಿಕೊಂಡಿದೆ.












Click it and Unblock the Notifications