ರಾತ್ರೋರಾತ್ರಿ ಬೆಂಗಳೂರಿನಿಂದ ಬಳ್ಳಾರಿಗೆ 80 ಆರೋಪಿಗಳು ಶಿಫ್ಟ್!
ಬೆಂಗಳೂರು, ಆಗಸ್ಟ್.14: ಬೆಂಗಳೂರಿನ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಮತ್ತು ದೇವರ ಜೀವನಹಳ್ಳಿ(ಡಿ.ಜೆ.ಹಳ್ಳಿ)ಯಲ್ಲಿ ದಾಂಧಲೆ ಪ್ರಕರಣ ಸಂಬಂಧ ಬಂಧಿಸಲ್ಪಟ್ಟ ಆರೋಪಿಗಳ ಒಂದು ತಂಡವನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
ಗುರುವಾರ 80 ಬಂಧಿತ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಆರೋಪಿಗಳನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಆದೇಶ ಹೊರಡಿಸಿತ್ತು.
ಬೆಂಗಳೂರಿನ ಕಾರಾಗೃಹದಲ್ಲಿಯೇ ಇರಿಸಿದ್ದರೆ ಗಲಾಟೆ ಆಗುವ ಸಾಧ್ಯತೆಗಳಿದ್ದವು. ಹೀಗಾಗಿ ರಾತ್ರೋರಾತ್ರಿ 80 ಮಂದಿ ಆರೋಪಿಗಳನ್ನು ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ಸಿಸಿಬಿ ಮತ್ತು ಕೆಎಸ್ಆರ್ ಪಿ ಸಿಬ್ಬಂದಿ ಭದ್ರತೆಯಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ.

ಬಳ್ಳಾರಿ ಕಾರಾಗೃಹದಲ್ಲಿ ದಾಖಲೆ ಪರಿಶೀಲನೆ:
ಶುಕ್ರವಾರ ಬೆಳಗ್ಗೆ ಹೊತ್ತಿಗೆ 80 ಆರೋಪಿಗಳನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ತೆರೆದೊಯ್ಯಲಾಗಿತ್ತು. ಎಲ್ಲ ಆರೋಪಿಗಳನ್ನು ಜೈಲಿನಲ್ಲಿಟ್ಟುಕೊಳ್ಳುವ ಮುನ್ನ ಜೈಲಾಧಿಕಾರಿಗಳು ಎಲ್ಲ ದಾಖಲೆಗಳ ಪರಿಶೀಲನೆ ನಡೆಸಿದರು ಎಂದು ತಿಳಿದು ಬಂದಿದೆ. ಕಳೆದ ಆಗಸ್ಟ್.11ರಂದು ಕೆ.ಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿ ದಾಂಧಲೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ 145ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದರು.












Click it and Unblock the Notifications