Bengaluru Traffic: ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ವಿಪರೀತ, ಮೆಟ್ರೋ ಬಳಕೆ ಇಳಿಕೆ; ಸ್ವಂತ ವಾಹನ ಬಳಕೆ ಹೆಚ್ಚಳ ಕಾರಣವೇನು
Bengaluru Traffic: ಬೆಂಗಳೂರಿನ ಸಂಚಾರ ಜೀವನಾಡಿಯಾಗಿ ಗುರುತಿಸಿಕೊಂಡಿರುವ ನಮ್ಮ ಮೆಟ್ರೋ ಬಳಕೆ ಮಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣದ ಬೆಲೆ ಏರಿಕೆಯ ನಂತರ ಜನ ಮೆಟ್ರೋ ಬಳಕೆಯಿಂದ ವಿಮುಖರಾಗಿದ್ದು, ಜನ ಸ್ವಂತ ವಾಹನಗಳನ್ನು ಬಳಕೆ ಮಾಡುವುದಕ್ಕೆ ಮುಂದಾಗಿದ್ದಾರೆ. ಇದರಿಂದ ಸಹಜವಾಗಿಯೇ ಇದು ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗುವುದಕ್ಕೆ ಕಾರಣವಾಗಿದೆ. ಪ್ರಯಾಣ ದರ ಹೆಚ್ಚಳ ಮಾಡುವ ಮೂಲಕ ಸಾರ್ವಜನಿಕರಿಗೆ ಶಾಕ್ ನೀಡಿದ್ದ ಬಿಎಂಆರ್‌ಸಿಎಲ್‌ಗೆ ಜನರೇ ಶಾಕ್ ನೀಡುತ್ತಿದ್ದಾರೆ.
ಬೆಂಗಳೂರು ನಮ್ಮ ಮೆಟ್ರೋ ಜನ ಸಂಚಾರ ಜೀವನಾಡಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೆಟ್ರೋ ಪ್ರಯಾಣ ದರ ಹೆಚ್ಚಳವಾಗಿರುವುದು ಹಾಗೂ ಪ್ರಯಾಣ ದರ ಹೆಚ್ಚಳ ಮಾಡುವ ಪ್ರಸ್ತಾವನೆ ಆಗಿರುವುದು ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ಸ್ನೇಹಪರ ಮತ್ತು ದಕ್ಷ ಸಾರ್ವಜನಿಕ ಸಾರಿಗೆ ಎಂದೇ ಖ್ಯಾತಿ ಗಳಿಸಿರುವ ನಮ್ಮ ಮೆಟ್ರೋ ಬೆಲೆ ಏರಿಕೆ ಹಾಗೂ ಎಂಡ್ ಟು ಎಂಡ್ ಕನೆಕ್ಟಿವಿಟಿ (ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಪೂರ್ಣ ಮೆಟ್ರೋ ಸಾರಿಗೆ ವ್ಯವಸ್ಥೆ) ಇಲ್ಲದೆ ಇರುವುದು ಸೇರಿದಂತೆ ಹಲವು ಕಾರಣಗಳಿಗೆ ಜನ ಮೆಟ್ರೋ ಬಳಕೆ ಮಾಡುವುದರಿಂದ ಹಿಂದೆ ಸರಿಯುತ್ತಿದ್ದಾರೆ. ಇದರಿಂದ ಬೆಂಗಳೂರು ಟ್ರಾಫಿಕ್ ಜಾಮ್ ಹೆಚ್ಚಳವಾಗುತ್ತಿದೆ.

ಬೆಂಗಳೂರು ಮೆಟ್ರೋದಲ್ಲಿ ಕೊನೆಯ ಹಂತದ ಸಂಪರ್ಕ ಸಮಸ್ಯೆಯೂ ಪ್ರಯಾಣಿಕರ ಸಂಖ್ಯೆ ಇಳಿಕೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ದರವು ಹೆಚ್ಚು ದುಬಾರಿಯಾಗುತ್ತಿದೆ ಎನ್ನುವ ಭಾವನೆ ಜನರಲ್ಲಿ ಮೂಡಿದ್ದು, ಹೆಚ್ಚಿನ ಪ್ರಯಾಣಿಕರು ತಮ್ಮ ವೈಯಕ್ತಿಕ ವಾಹನಗಳನ್ನು ಬಳಕೆ ಮಾಡುವುದು ಹೆಚ್ಚಾಗಿದೆ. ಇದು ಪರೋಕ್ಷವಾಗಿ ಬೆಂಗಳೂರು ನಗರದಾದ್ಯಂತ ಸಂಚಾರ ದಟ್ಟಣೆ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳುವುದಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ವಿಪರೀತ ಹೆಚ್ಚಳ
ಬೆಂಗಳೂರಿನಲ್ಲಿ ಈ ಹಿಂದೆ ಪೀಕ್ ಅವರ್‌ಗಳಲ್ಲಿ ಮಾತ್ರ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗುತ್ತಿತ್ತು. ಆದರೆ ಇದೀಗ ಬೆಂಗಳೂರು ನಗರದಲ್ಲಿ ಪೀಕ್ ಅವರ್‌ನಲ್ಲಿ ಮಾತ್ರವಲ್ಲ ಇನ್ನುಳಿದ ಸಮಯದಲ್ಲೂ ಟ್ರಾಫಿಕ್ ಜಾಮ್ ಸಮಸ್ಯೆ ವಿಪರೀತವಾಗಿದೆ. ಇದು ವಾಹನ ಚಾಲಕರು ಮತ್ತು ಸಂಚಾರ ಪೊಲೀಸರು ಇಬ್ಬರ ಗಮನಕ್ಕೂ ಬರುತ್ತಿದೆ. ನಗರದ ರಸ್ತೆಗಳಲ್ಲಿ ವಿಶೇಷವಾಗಿ ಪೀಕ್ ಅವರ್‌ನಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಒಂದು ಸಮಯದಲ್ಲಿ ಕಡಿಮೆ ಬೆಲೆಯಲ್ಲಿದ್ದ ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣ ದರವು ಇದೀಗ ದುಬಾರಿ ಆಗಿರುವುದು ಹಾಗೂ ಹೆಚ್ಚು ರೈಲು ಬೋಗಿಗಳ ಕೊರತೆ ಇರುವುದು ಸಹ ಇದಕ್ಕೆ ಪ್ರಮುಖ ಕಾರಣವಾಗಿದೆ.
ಬೆಂಗಳೂರಲ್ಲಿ ವಾಹನಗಳ ಸಂಖ್ಯೆ ಹೆಚ್ಚಳ
ಇನ್ನು ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಳವಾಗಿದೆ. ಸಾರಿಗೆ ಇಲಾಖೆಯ ಮಾಹಿತಿಯ ಪ್ರಕಾರ, 2026ರ ಹೊತ್ತಿಗೆ ಬೆಂಗಳೂರು ನಗರದಲ್ಲಿ 80 ಲಕ್ಷಕ್ಕೂ ಹೆಚ್ಚು ನೋಂದಾಯಿತ ದ್ವಿಚಕ್ರ ವಾಹನಗಳಿವೆ. ಖಾಸಗಿ ವಾಹನಗಳ ಮೇಲಿನ ಅವಲಂಬನೆಯು ಹೆಚ್ಚಳವಾಗುತ್ತಿರುವುದರಿಂದ ಸಹಜವಾಗಿಯೇ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಇನ್ನಷ್ಟು ಟ್ರಾಫಿಕ್ ಜಾಮ್ ಹೆಚ್ಚಾಗುವ ಸಾಧ್ಯತೆ ಇದೆ.
ಸಂಸದ ತೇಜಸ್ವಿ ಸೂರ್ಯ ಟ್ವೀಟ್
ಇನ್ನು ಈ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಅವರು ಟ್ವೀಟ್ ಮಾಡಿದ್ದು, ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಇರುವ ಏಕೈಕ ಪ್ರಾಯೋಗಿಕ ಪರಿಹಾರವೆಂದರೆ ನಂಬಿಕಸ್ಥ ಮತ್ತು ಕೈಗೆಟುಕುವ ಸಾರ್ವಜನಿಕ ಸಾರಿಗೆ ಹಾಗೂ ವೇಗವಾದ ಮಾಸ್ ಟ್ರಾನ್ಸಿಟ್ ವ್ಯವಸ್ಥೆಗಳು. ಮೆಟ್ರೋ ದರಗಳು ಅತಿಯಾದಾಗ ಜನರು ಮತ್ತೆ ಖಾಸಗಿ ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದ ಸಮಸ್ಯೆ ಮತ್ತೆ ಮೊದಲಿನಂತೆಯೇ ಆಗುತ್ತದೆ.
ಟನಲ್ ರಸ್ತೆಂತಹ ರಿಯಲ್ ಎಸ್ಟೇಟ್ ಪ್ರದರ್ಶನ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುವ ಬದಲು, ಜನರನ್ನು ಸುಲಭವಾಗಿ ಪ್ರಯಾಣ ಮಾಡಲು ಸಾಧ್ಯವಾಗುವ ಪರಿಣಾಮಕಾರಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿಗೆ ಸರ್ಕಾರ ಹೂಡಿಕೆ ಮಾಡಬೇಕು. ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು, ತಾರ್ಕಿಕ ಮತ್ತು ಪ್ರಯಾಣಿಕರಿಗೆ ಅನುಕೂಲಕರವಾದ ಮೆಟ್ರೋ ದರಗಳನ್ನು ನಿಗದಿಪಡಿಸಲು ಹೊಸ ದರ ನಿಗದಿ ಸಮಿತಿಯನ್ನು ರಚಿಸುವ ಸಮಯ ಬಂದಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ.












Click it and Unblock the Notifications