Bengaluru Rain: ಬೆಂಗಳೂರಲ್ಲಿ ಮಳೆ, ಟ್ರಾಫಿಕ್ ಜಾಮ್, ಸಂಚಾರ ಸಲಹೆ
ಬೆಂಗಳೂರು, ಅಕ್ಟೋಬರ್ 15: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಾಗೂ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿಯ ಪರಿಣಾಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಿಂಗಾರು ಮಳೆ ಅಬ್ಬರಿಸುತ್ತಿದೆ. ಬೆಂಗಳೂರು ನಗರದಲ್ಲಿ ಮಂಗಳವಾರ ಮುಂಜಾನೆಯಿಂದಲೇ ಭಾರೀ ಮಳೆಯಾಗುತ್ತಿದೆ, ನಗರದ ಸಂಚಾರ ವ್ಯವಸ್ಥೆಗೆ ಮಳೆಯಿಂದಾಗಿ ತೊಂದರೆಯಾಗಿದ್ದು, ಸಂಚಾರಿ ಪೊಲೀಸರು ವಾಹನ ಸವಾರರಿಗೆ ಸಲಹೆಗಳನ್ನು ನೀಡುತ್ತಿದ್ದಾರೆ.
ಕಳೆದ ಒಂದು ವಾರದಿಂದ ಬೆಂಗಳೂರು ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಆಗಾಗ ಸುರಿಯುತ್ತಿದ್ದ ಮಳೆ ಮಂಗಳವಾರ ಮುಂಜಾನೆಯಿಂದ ಜೋರಾಗಿ ಬರುತ್ತಿದೆ. ಉದ್ಯಾನ ನಗರಿ ಬೆಂಗಳೂರು ಮಲೆನಾಡಿನ ರೀತಿಯಾಗಿದ್ದು, ನಗರದ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.

ಮುಂಜಾನೆಯ ಮಳೆ ವಿದ್ಯಾರ್ಥಿಗಳಿಗೆ, ದಿನನಿತ್ಯದ ವ್ಯಾಪಾರ ವಹಿವಾಟಿಗೆ, ಕಛೇರಿಗೆ ಹೋಗುವವರಿಗೆ ತೊಂದರೆ ಮಾಡಿದೆ. ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುವಂತೆ ಮಾಡಿದೆ. ಯಾವ ರಸ್ತೆ ಎಲ್ಲಿ ಬ್ಲಾಕ್ ಆಗಿದೆ ಎಂಬುದೇ ತಿಳಿಯದಂತಾಗಿದೆ. ಇದರಿಂದಾಗಿ ವಾಹನ ಸವಾರರು ಹೈರಾಣಾಗಿದ್ದಾರೆ.
ಸಂಚಾರಿ ಪೊಲೀಸರ ಸಲಹೆಗಳು: ನಗರದಲ್ಲಿ ಯಾವ ಯಾವ ಪ್ರದೇಶದಲ್ಲಿ ನಿಧಾನಗತಿಯ ಸಂಚಾರವಿದೆ, ಯಾವ ಮಾರ್ಗ ಬಂದ್ ಆಗಿದೆ, ಎಲ್ಲಿ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ ಎಂದು ಸಂಚಾರಿ ಪೊಲೀಸರು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿಯನ್ನು ನೀಡುತ್ತಿದ್ದಾರೆ.
ಹುಣಸಮಾರನಹಳ್ಳಿ ಸರ್ವಿಸ್ ರಸ್ತೆಯಲ್ಲಿ ನೀರು ನಿಂತಿರುವುದರಿಂದ ವಿಮಾನ ನಿಲ್ದಾಣದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ ಎಂದು ಪೊಲೀಸರು ಹೇಳಿದ್ದಾರೆ.
ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ನೀರು ನಿಂತಿರುವ ಪರಿಣಾಮ ನಗರದ ಕೇಂದ್ರ ಭಾಗವಾದ ಮೆಜೆಸ್ಟಿಕ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ನಿಧಾನಗತಿಯ ಸಂಚಾರವಿದೆ. ವಾಹನ ಸವಾರರು ಮಳೆಯಲ್ಲಿ ನೆನೆಯುತ್ತಾ ಕಾಯುತ್ತಿದ್ದಾರೆ.
ಮುತ್ಯಾಲನಗರದ ಒಆರ್‌ಆರ್ ಬಳಿ ನೀರು ನಿಂತಿರುವುದರಿಂದ ಗೊರಗುಂಟೆಪಾಳ್ಯ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ವಸಂತನಗರ ಕೆಳಸೇತುವೆಯಲ್ಲಿ ನೀರು ನಿಂತಿರುವುದರಿಂದ ಶೇಷಾದ್ರಿಪುರ 1ನೇ ಮುಖ್ಯರಸ್ತೆ ಕಡೆಗೆ ನಿಧಾನಗತಿಯ ಸಂಚಾರವಿದೆ.
ಮಳೆಯ ಕಾರಣ ವಿಮಾನ ನಿಲ್ದಾಣದ ಕಡೆ ಸಾಗುವ ಪ್ರಯಾಣಿಕರು ಸಹ ತೊಂದರೆ ಅನುಭವಿಸುತ್ತಿದ್ದಾರೆ. ಹೆಬ್ಬಾಳ ಮೇಲ್ಸೇತುವೆಯಲ್ಲಿ ನೀರು ನಿಂತಿರುವುದರಿಂದ ವಿಮಾನ ನಿಲ್ದಾಣದ ಕಡೆಗೆ ನಿಧಾನಗತಿಯ ಸಂಚಾರವಿದೆ. ಅಲ್ಲದೇ ಸಂಜಯ್ ನಗರ ಕ್ರಾಸ್‌ನಲ್ಲಿ ನೀರು ನಿಂತಿರುವುದರಿಂದ ವಿಮಾನ ನಿಲ್ದಾಣದ ಕಡೆ ನಿಧಾನಗತಿಯ ವಾಹನ ಸಂಚಾರವಿದೆ.
ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಬೆಂಗಳೂರು ನಗರದಲ್ಲಿ ಇನ್ನೂ ಮೂರು ದಿನ ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶ ಕುಸಿತವಾಗಲಿದ್ದು, ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಿದೆ. ಅಕ್ಟೋಬರ್ 16ರ ಬುಧವಾರ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಮಂಡ್ಯ, ಮೈಸೂರು ಮತ್ತು ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಅಕ್ಟೋಬರ್ 17ರ ಗುರುವಾರ ಮಳೆ ಕೊಂಚ ಬಿಡುವು ನೀಡುವ ನಿರೀಕ್ಷೆ ಇದೆ. ಅಂದು ಉಷ್ಣಾಂಶ ಕುಸಿತಗೊಂಡರೂ ಸಹ ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಆಗಾಗ ತುಂತುರು ಮಳೆಯಾಗುವ ನಿರೀಕ್ಷೆ ಇದೆ ಎಂದು ಮುನ್ಸೂಚನೆ ಕೊಡಸಲಾಗಿದೆ.
ಅಕ್ಟೋಬರ್ 18ರಂದು ನಗರದ ಹವಾಮಾನ ಸ್ವಲ್ಪ ಬದಲಾವಣೆಯಾಗಲಿದೆ. ಗುರುವಾರ, ಶುಕ್ರವಾರ ಮತ್ತು ಶನಿವಾರ ಬೆಂಗಳೂರು ನಗರದಲ್ಲಿ ಆದಾಗ ತುಂತುರು ಮಳೆಯಾಗಲಿದ್ದು ತಾಪಮಾನವು ಸ್ಥಿರವಾಗಿರುತ್ತದೆ ಎಂದು ತಿಳಿಸಿದೆ.
ಫೇಸ್‌ಬುಕ್, ಎಕ್ಸ್ ತಾಣಗಳಲ್ಲಿ ಬೆಂಗಳೂರು ಮಳೆಯ ಕುರಿತು ಹಲವು ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ. ದಸರಾ ರಜೆ ಮುಗಿಸಿ ನಿರಾಳರಾಗಿ ಕಛೇರಿಗೆ ಹೊರಟಿದ್ದ ಜನರಿಗೆ ಬೆಂಗಳೂರು ಮಳೆ ಕಿರಿಕಿರಿ ತಂದಿದೆ. ಮಳೆಗಾಲದಲ್ಲಿಯೂ ಇಷ್ಟು ಮಳೆ ನಗರದಲ್ಲಿ ಆಗಿಲ್ಲ ಎಂದುಕೊಂಡು ಜನರು ಮಳೆಯನ್ನು ಶಪಿಸುತ್ತಾ ತಮ್ಮ ಕೆಲಸಗಳಿಗೆ ತೆರಳುತ್ತಿದ್ದಾರೆ.












Click it and Unblock the Notifications