Bengaluru Traffic: ಸಿಲಿಕಾನ್ ಸಿಟಿ ಟ್ರಾಫಿಕ್ ಜಾಮ್ ಸಂಕಷ್ಟ: ವರ್ಷದಲ್ಲಿ 53 ಶಾಲಾ ದಿನ ಸಮಯ ರಸ್ತೆಯಲ್ಲೇ ಕಳೆಯುವ ಮಕ್ಕಳು!
Bengaluru Traffic Jam: ಬೆಂಗಳೂರು ಹೆಚ್ಚು ಚರ್ಚೆಗೆ ಒಳಗಾಗುತ್ತಿರುವ ವಿಷಯಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯೂ ಒಂದು. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯು ನಿರೀಕ್ಷೆಗೂ ಮೀರಿಯೇ ಹೆಚ್ಚಾಗಿದೆ. ಇಷ್ಟು ದಿನಗಳ ಕಾಲ ನಗರದಲ್ಲಿನ ಸಂಚಾರ ದಟ್ಟಣೆಯಿಂದ ಹಿರಿಯರಿಗೆ ಸಮಸ್ಯೆ ಆಗುತ್ತಿದೆ ಎಂದೇ ಚರ್ಚೆ ಮಾಡಲಾಗುತ್ತಿತ್ತು. ಆದರೆ, ಈ ಸಮಸ್ಯೆ ಕೇವಲ ವಯಸ್ಕರ ಸಮಸ್ಯೆ ಆಗಿ ಉಳಿದಿಲ್ಲ.
ಬೆಂಗಳೂರು ನಗರದ ಪುಟಾಣಿ ಮಕ್ಕಳು ತಮ್ಮ ಬಾಲ್ಯದ ಅಮೂಲ್ಯ ಕ್ಷಣಗಳನ್ನು ಅಲ್ಲ, ತಿಂಗಳುಗಳ ಸಮಯವನ್ನು ಟ್ರಾಫಿಕ್ ಜಾಮ್‌ನಲ್ಲಿ ಕಳೆದುಕೊಳ್ಳುತ್ತಿದ್ದಾರೆ! ಹೌದು ಬೆಂಗಳೂರಿನಲ್ಲಿ ಸರ್ಕಾರಿ ಹಾಗೂ ಖಾಸಗಿ, ಅನುದಾನಿತ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸಿಲಿಕಾನ್ ಸಿಟಿಯ ಟ್ರಾಫಿಕ್ ಜಾಮ್ ಸಂಕಷ್ಟದಿಂದಾಗಿ 53 ಪೂರ್ಣ ಶಾಲಾ ದಿನಗಳಿಗೆ ಸಮಾನವಾದ ಅಮೂಲ್ಯ ಸಮಯವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ Inventure Academy ಅಧ್ಯಯನದಲ್ಲಿ ಹಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.

ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಬಳಕೆ ಕಡಿಮೆ ಆಗಿದೆ. ಮೆಟ್ರೋ ಪ್ರಯಾಣ ದರ ಹೆಚ್ಚಳವಾದ ಮೇಲಂತೂ ಇನ್ನೂ ಸಂಚಾರ ಕಿರಿಕಿರಿ ಜೋರಾಗಿದೆ. ನಗರದಲ್ಲಿ ಎಂಡ್ ಟು ಎಂಡ್ ಕನೆಕ್ಟಿವಿಟಿ ಇಲ್ಲದೆ (ಕೊನೆಯ ಮೈಲಿ ಸಂಪರ್ಕದ ಕೊರತೆ; Last-Mile Connectivity) ಇರುವುದು, ನಗರದ ರಸ್ತೆ ಜಾಗದಲ್ಲಿಯೇ ಶೇ.60 ಭಾಗವನ್ನು ಎಲ್ಲೆಂದರಲ್ಲಿ ಪಾರ್ಕ್ ಮಾಡಲಾದ ವಾಹನಗಳೇ ಆಕ್ರಮಿಸಿಕೊಳ್ಳುತ್ತಿರುವುದು ಸೇರಿದಂತೆ ಹಲವು ಕಾರಣಗಳಿಗೆ ಟ್ರಾಫಿಕ್ ಜಾಮ್ ಸಮಸ್ಯೆ ಆಗುತ್ತಿದೆ. ನಗರದಲ್ಲಿ ಮೊದಲೆಲ್ಲ ಪೀಕ್ ಅವರ್‌ಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗಿ ಆಗುತ್ತಿತ್ತು. ಆದರೆ ಇದೀಗ ಯಾವುದೇ ಸಮಯದಲ್ಲಾದರೂ ಟ್ರಾಫಿಕ್ ಜಾಮ್ ಎನ್ನುವಂತಾಗಿದೆ.
ನಗರದಲ್ಲಿ ಮೆಟ್ರೋ ಜಾಲ ವಿಸ್ತರಣೆ, ರಸ್ತೆ ದುರಸ್ತಿ ಕಾಮಗಾರಿ, ಒಳಚರಂಡಿ ಹಾಗೂ ವೈಟ್‌ಟಾಪಿಂಗ್ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳಿಗೆ ಮುಕ್ತಿಯೇ ಸಿಗುತ್ತಿಲ್ಲ. ಇದರಿಂದ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಇದು ವಯಸ್ಕರೊಂದಿಗೆ ಮಕ್ಕಳ ಮೇಲೂ ಪ್ರಭಾವ ಬೀರುತ್ತಿದೆ. 53 ಪೂರ್ಣ ಶಾಲಾ ದಿನಗಳಿಗೆ ಸಮಾನವಾದ ಸಮಯವನ್ನು ಟ್ರಾಫಿಕ್ ಜಾಮ್‌ನಲ್ಲಿಯೇ ಕಳೆದುಕೊಳ್ಳುತ್ತಿದ್ದಾರೆ!
Bengaluru Traffic Jam: ಕಲಿಕೆಯ ಸಮಯದಲ್ಲಿ ಅಮೂಲ್ಯ ಸಮಯ ಕಳೆದುಕೊಳ್ಳುತ್ತಿದ್ದಾರೆ ಶಾಲಾ ಮಕ್ಕಳು!
ಬೆಂಗಳೂರು ನಗರದ ಶಾಲಾ - ಕಾಲೇಜಿನ ಮಕ್ಕಳು ಕಲಿಕೆಯ ಸಮಯವನ್ನು ಅನಾಯಸವಾಗಿ ಟ್ರಾಫಿಕ್ ಜಾಮ್‌ನಲ್ಲಿ ಕಳೆದುಕೊಳ್ಳುತ್ತಿದ್ದಾರೆ. ನಗರದ ಟ್ರಾಫಿಕ್ ಜಾಮ್ ಸಮಸ್ಯೆಯು ಶೇ 22ರಷ್ಟು ಹೆಚ್ಚಳವಾಗಿದೆ. ದಿನಕ್ಕೆ ಸುಮಾರು ಎರಡು ಗಂಟೆ ಬಸ್‌ನಲ್ಲೇ ಶಾಲಾ ಮಕ್ಕಳು ಕಳೆಯುತ್ತಿದ್ದಾರೆ. ಬೆಂಗಳೂರಿನ ಪೂರ್ವ ಭಾಗದ ಎಸ್‌ಎಚ್-35 ಹಾಗೂ ವೈಟ್‌ಫೀಲ್ಡ್-ವರ್ತೂರು-ಗುಂಜೂರು-ಸರ್ಜಾಪುರ-ದೊಮ್ಮಸಂದ್ರ ಮಾರ್ಗಗಳಲ್ಲಿ ಶಾಲಾ ಮಕ್ಕಳ ಪ್ರಯಾಣ ಸಮಯ ಕಳೆದ ಎರಡು ವರ್ಷಗಳಲ್ಲಿ ಶೇ.22ರಷ್ಟು ಹೆಚ್ಚಾಗಿದೆ ಎಂದು Inventure Academy ನಡೆಸಿದ ಶಾಲಾ ಸಾರಿಗೆ ಮತ್ತು ಸಂಚಾರ ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ.

ದಿನಕ್ಕೆ ಸರಾಸರಿ 112.3 ನಿಮಿಷಗಳ ಪ್ರಯಾಣವನ್ನು 200 ಶಾಲಾ ದಿನಗಳಿಗೆ ಲೆಕ್ಕ ಹಾಕಿದರೆ, ವಿದ್ಯಾರ್ಥಿಗಳು ವರ್ಷಕ್ಕೆ ಸುಮಾರು 374 ಗಂಟೆಗಳನ್ನು ರಸ್ತೆಯಲ್ಲೇ ಕಳೆಯುತ್ತಿದ್ದಾರೆ. ಇದು ಏಳು ಗಂಟೆಗಳ ಸುಮಾರು 53 ಪೂರ್ಣ ಶಾಲಾ ದಿನಗಳಿಗೆ ಸಮಾನ. ಎರಡು ವರ್ಷಗಳಲ್ಲಿ ಮಕ್ಕಳ ಸುಮಾರು ಒಂದು ಪೂರ್ಣ ಶಾಲಾ ಅವಧಿಗೆ ಸಮನಾದ ಸಮಯ ಪ್ರಯಾಣದಲ್ಲೇ ಕಳೆಯುತ್ತಿದೆ ಎಂದು ಅಧ್ಯಯವು ಉಲ್ಲೇಖಿಸಿದೆ.

ಐದು ಪ್ರಮುಖ ಸಂಚಾರ ಸಮಸ್ಯೆಯ ಪ್ರದೇಶಗಳ ಗುರುತು
ಇನ್ನು ಈ ಅಧ್ಯಯನದಲ್ಲಿ ಐದು ಪ್ರಮುಖ ಸಂಚಾರ ಸಮಸ್ಯೆಯ ಪ್ರದೇಶಗಳನ್ನು ಗುರುತು ಮಾಡಲಾಗಿದೆ. ದೊಮ್ಮಸಂದ್ರ ಸರ್ಕಲ್, ಗುಂಜೂರು, ವರ್ತೂರು ಕೋಡಿ, ವಿಬ್ಗ್ಯೋರ್ ಹೈ ಸ್ಕೂಲ್ ರಸ್ತೆ (ಕುಂದಲಹಳ್ಳಿ / ಮರತಹಳ್ಳಿ ಹತ್ತಿರ) ಮತ್ತು ಸರ್ಜಾಪುರ ರಸ್ತೆಯಲ್ಲಿರುವ ದಿ ಗ್ರಾನ್ ಕಾರ್ಮೆನ್ ಅಡ್ರೆಸ್ ಪ್ರದೇಶಗಳಲ್ಲಿ ನಿರ್ದಿಷ್ಟ ಬದಲಾವಣೆಯ ಅವಶ್ಯಕತೆ ಇದೆ. ರಸ್ತೆ ಗುಂಡಿ, ನೀರು ನಿಲ್ಲುವುದು, ರಸ್ತೆ ಕಾಮಗಾರಿ, ರಸ್ತೆ ಕಾಮಗಾರಿಗಳ ಅವಶೇಷಗಳು ಹಾಗೂ ಕಿರಿದಾದ ರಸ್ತೆಗಳು ಸಂಚಾರ ಸಮಸ್ಯೆಗೆ ಪ್ರಮುಖ ಕಾರಣವಾಗಿವೆ.
ಮಕ್ಕಳ ಕಲಿಕೆ, ವಿಶ್ರಾಂತಿ ಮತ್ತು ಕುಟುಂಬ ಸಮಯದ ಮೇಲೆ ಪರಿಣಾಮ
ಬೆಂಗಳೂರು ನಗರದ ಟ್ರಾಫಿಕ್ ಜಾಮ್ ಸಮಸ್ಯೆಯು ಮಕ್ಕಳ ಕಲಿಕೆ, ವಿಶ್ರಾಂತಿ ಮತ್ತು ಕುಟುಂಬ ಸಮಯದ ಮೇಲೆ ಪರಿಣಾಮ ಬೀರುತ್ತಿದೆ ಎನ್ನುತ್ತಾರೆ Inventure Academy ಸಹ-ಸ್ಥಾಪಕಿ, CEO ಹಾಗೂ Managing Trustee ಮತ್ತು B.PAC ಸದಸ್ಯೆ ಆಗಿರುವ ನೂರೈನ್ ಫಝಲ್. ಮಕ್ಕಳು ಶಾಲೆಗೆ ಹೋಗಿ ಬರುವುದರಲ್ಲಿ ಹೆಚ್ಚು ಸಮಯ ಕಳೆಯುತ್ತಿರುವುದರಿಂದ ಮಕ್ಕಳ ಕಲಿಕೆ, ಆಟ, ವಿಶ್ರಾಂತಿ, ಊಟ ಹಾಗೂ ಕುಟುಂಬದೊಂದಿಗೆ ಕಳೆಯುವ ಸಮಯದ ಮೇಲೂ ಪರಿಣಾಮ ಬೀರುತ್ತಿದೆ. ಬೆಂಗಳೂರಿನ ಹೊರ ವಲಯದಲ್ಲಿ ಸಣ್ಣ ಸಣ್ಣ ಮೂಲಭೂತ ಸಮಸ್ಯೆಗಳಿಗೆ ಮೊದಲು ಪರಿಹಾರ ಕಂಡುಕೊಳ್ಳಬೇಕು.
ರಸ್ತೆಗುಂಡಿ, ನೀರು ನಿಲ್ಲುವುದು ಹಾಗೂ ಎಲ್ಲೆಂದರಲ್ಲಿ ಕಸ ಎಸೆಯುವುದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಟ್ರಾಫಿಕ್ ರೂಲ್ಸ್ ಪಾಲನೆ ಮಾಡುವಂತೆ ಆಗಬೇಕು. ಅಲ್ಲದೆ ಬೆಂಗಳೂರು ಹೊರ ವಲಯದಲ್ಲಿ ಮೆಟ್ರೋ ಅಭಿವೃದ್ಧಿ ಆಗಬೇಕು. ತಾತ್ಕಾಲಿಕ ಸಮಸ್ಯೆ ಪರಿಹಾರ ಹಾಗೂ ದೀರ್ಘಕಾಲದ ಪರಿಹಾರ ಎಂದು ವಿಂಗಡಿಸಿಕೊಳ್ಳಬೇಕು. ಡ್ಯಾಶ್ ಬೋರ್ಡ್ ಮಾದರಿ ಅಳವಡಿಸಿಕೊಂಡು ಯಾವಾಗ ಏನಾಗಲಿದೆ ಎನ್ನುವ ಸಂಪೂರ್ಣ ವಿವರವನ್ನು ಜನರೊಂದಿಗೆ ಹಂಚಿಕೊಳ್ಳಬೇಕು. ಆಗ ಮಾತ್ರ ಈ ಭಾಗ ಹಾಗೂ ಬೆಂಗಳೂರಿನಾದ್ಯಂತ ಮಕ್ಕಳು ಎದುರಿಸುತ್ತಿರುವ ಟ್ರಾಫಿಕ್ ಜಾಮ್ ಸಮಸ್ಯೆಗೆ ಮುಕ್ತಿ ಕಂಡುಕೊಳ್ಳಲು ಸಾಧ್ಯ ಎನ್ನುತ್ತಾರೆ ನೂರೈನ್ ಫಝಲ್.
ಮಕ್ಕಳ ಕೌಶಲ್ಯ ವೃದ್ಧಿಗೆ ಸಮಯ ಬಳಕೆ ಆಗಬೇಕು
ಬಾಲ್ಯ ಎನ್ನುವುದು ಮಕ್ಕಳಿಗೆ ಮತ್ತೆ ಸಿಗದ ಸುಂದರ ಕ್ಷಣಗಳು. ಈ ಸಮಸವನ್ನು ಮಕ್ಕಳು ಕಲಿಕೆಗೆ, ಆಟ - ಪಾಠಕ್ಕೆ ಬಳಸಿಕೊಳ್ಳಬೇಕು. ಕೌಶಲ್ಯ ವೃದ್ಧಿಗೆ ಸಮಯ ಬಳಕೆ ಆಗಬೇಕು. ಆದರೆ, ಮಕ್ಕಳ ಸಮಯವೆಲ್ಲವೂ ಟ್ರಾಫಿಕ್ ಜಾಮ್‌ನಲ್ಲಿಯೇ ಕಳೆದು ಹೋಗುತ್ತಿದೆ. ಬೆಂಗಳೂರಿನ ಹೊರ ವಲಯದಲ್ಲಿ ಮಕ್ಕಳ ಸುರಕ್ಷತೆ ದೊಡ್ಡ ಸವಾಲಾಗಿದೆ. ಶಾಲೆಗಳ ಸಮಯ ಬದಲಾವಣೆ ಮಾಡುವುದು ಸಹ ಉತ್ತಮ ಆಯ್ಕೆಯೇ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳು ಚಿಂತಿಸುವ ಅವಶ್ಯಕತೆ ಇದೆ.
ಎನ್ನುತ್ತಾರೆ ಬಿ.ಪ್ಯಾಕ್ ಕಾರ್ಯಕ್ರಮ ಮುಖ್ಯಸ್ಥರಾದ ರಾಘವೇಂದ್ರ ಪೂಜಾರಿ.
Bengaluru Traffic Jam: ಸರ್ಕಾರಿ ಶಾಲೆಗಳ ಸಮಯ ಬದಲಾವಣೆ
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಸರ್ಕಾರಿ ಶಾಲೆಗಳ ಸಮಯ ಬದಲಾವಣೆಯ ಬಗ್ಗೆಯೂ ಚರ್ಚೆ ನಡೆದಿದೆ. ಸರ್ಕಾರಿ ಶಾಲೆಗಳು ಬೆಳಿಗ್ಗೆ 10.30 ರಿಂದ ಸಂಜೆ 4.30 ರವರೆಗೆ ಕಾರ್ಯನಿರ್ವಹಿಸುತ್ತವೆ. ಆದಾಗ್ಯೂ, ಖಾಸಗಿ ಶಾಲೆಗಳು ಬೆಳಿಗ್ಗೆ 8.45 ರಿಂದ ಮಧ್ಯಾಹ್ನ 3.45 ರವರೆಗೆ ಕಾರ್ಯನಿರ್ವಹಿಸುತ್ತವೆ. ಬೆಳಿಗ್ಗೆ 10.30 ಕ್ಕೆ ಶಾಲೆ ತಲುಪಲು, ನಮ್ಮಲ್ಲಿ ಹಲವರು ಕನಿಷ್ಠ ಒಂದೂವರೆ ಗಂಟೆ ಮುಂಚಿತವಾಗಿ ಹೊರಡಬೇಕಾಗುತ್ತದೆ. ಇದರ ಹೊರತಾಗಿಯೂ, ನಾವು ಕನಿಷ್ಠ ಒಂದು ಗಂಟೆ ಸಂಚಾರದಲ್ಲಿಯೇ ಕಳೆಯುತ್ತಿದ್ದೇವೆ ಎಂದು ಶಿಕ್ಷಕರೊಬ್ಬರು ಹೇಳಿದ್ದಾರೆ.
ಇದರೊಂದಿಗೆ ಸರ್ಕಾರಿ ಶಾಲೆಗಳ ಸಮಯವು ತರಗತಿಗಳ ಮೇಲೂ ಪರಿಣಾಮ ಬೀರುತ್ತಿದೆ. ಹಾಲು, ಮೊಟ್ಟೆ ಮತ್ತು ಮಧ್ಯಾಹ್ನದ ಊಟವನ್ನು ವಿತರಿಸಲು ಕನಿಷ್ಠ ಒಂದು ಗಂಟೆ ಕಳೆಯುತ್ತೇವೆ ಎಂದು ಶಿಕ್ಷಕರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸೂಕ್ತ ಸಮಯ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 3.30 ರವರೆಗೆ ಇರುತ್ತದೆ ಏಕೆಂದರೆ ವಿದ್ಯಾರ್ಥಿಗಳು ಸಹ ನಿಯಮಿತ ಸಂಚಾರ ಪ್ರಾರಂಭವಾಗುವ ಮೊದಲು ಮನೆಗೆ ತಲುಪಬಹುದು ಶಿಕ್ಷಕರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ.



Click it and Unblock the Notifications
