Bengaluru: ಮೊದಲ ಎಲಿವೇಟೆಡ್ ರೋಟರಿ ಮೇಲ್ಸೇತುವೆ ಘೋಷಣೆ ನಿರ್ಮಾಣಕ್ಕೆ ಒಪ್ಪಿಗೆ- ವೆಚ್ಚ, ಸ್ಥಳ, ಸಂಪರ್ಕದ ಬಗ್ಗೆ ತಿಳಿಯಿರಿ
ಬೆಂಗಳೂರು, ಜುಲೈ 08: ನಗರದ ಮೊದಲ ಎಲಿವೇಟೆಡ್ ರೋಟರಿ ಮೇಲ್ಸೇತುವೆ ನಿರ್ಮಾಣಕ್ಕೆ ಸಿದ್ದರಾಮಯ್ಯ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ. ಶುಕ್ರವಾರ ರಾಜ್ಯ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನ ಮೊದಲ ಎಲಿವೇಟೆಡ್ ಮೇಲ್ಸೇತುವೆ ನಿರ್ಮಾಣಕ್ಕೆ ಹಣ ನೀಡುವುದಾಗಿ ಘೋಷಿಸಿದ್ದಾರೆ.
ಈ ರೋಟರಿ ಮೇಲ್ಸೇತುವೆಯನ್ನು ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬಳಿಯ ಐಒಸಿ ಜಂಕ್ಷನ್‌ನಲ್ಲಿ ನಿರ್ಮಿಸಲಾಗುವುದು. ಇದಕ್ಕಾಗಿ 263 ಕೋಟಿ ರೂ.ಗಳನ್ನು ಸಿಎಂ ಸಿದ್ದರಾಮಯ್ಯ ಮಂಜೂರು ಮಾಡಿದ್ದಾರೆ. ಉತ್ತಮ ರಸ್ತೆ ಸಂಪರ್ಕದ ಕೊರತೆಯಿಂದಾಗಿ ಟರ್ಮಿನಲ್ ಬಳಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಐಒಸಿ ಜಂಕ್ಷನ್‌ನಲ್ಲಿ ಈಗಿರುವ ರೈಲ್ವೆ ಮೇಲ್ಸೇತುವೆಯನ್ನು ಕೆಡವಿದ ಬಳಿಕ ಬಿಬಿಎಂಪಿ ಈ ಯೋಜನೆಯನ್ನು ಜಾರಿಗೊಳಿಸಲಿದೆ.
ಪ್ರಸ್ತಾವಿತ ಮೇಲ್ಸೇತುವೆಯು ನಾಲ್ಕು ಪ್ರಮುಖ ಸ್ಥಳಗಳಿಗೆ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಮಾರುತಿ ಸೇವಾ ನಗರ, ಬಾಣಸವಾಡಿ, ಕಮ್ಮನಹಳ್ಳಿ ಮತ್ತು ಬೈಯಪ್ಪನಹಳ್ಳಿಯಂತಹ ನಾಲ್ಕು ಪ್ರಮುಖ ಸ್ಥಳಗಳನ್ನು ಸಂಪರ್ಕಿಸುತ್ತದೆ.
ಯೋಜನೆಗೆ 28,765 ಚದರ ಮೀಟರ್ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ.
ಈ ವಿಚಾರವಾಗಿ ಮಾತನಾಡಿದ ಬಿಬಿಎಂಪಿ ಅಧಿಕಾರಿಯೊಬ್ಬರು, 'ಈ ಮೇಲ್ಸೇತುವೆಯು ರೈಲ್ವೆ ಟರ್ಮಿನಲ್‌ಗೆ ತಡೆರಹಿತ ಪ್ರವೇಶವನ್ನು ಒದಗಿಸುತ್ತದೆ. ಇದು ಪ್ರಮುಖ ರಸ್ತೆಗಳನ್ನು ಸಂಪರ್ಕಿಸುತ್ತದೆ. ಇದರ ಒಟ್ಟು ವಿಸ್ತೀರ್ಣವು ರಸ್ತೆ ಅಗಲ ಸೇರಿದಂತೆ 95 ಮೀಟರ್ ಆಗಿದೆ' ಎಂದು ಹೇಳಿದ್ದಾರೆ.

ನೈಋತ್ಯ ರೈಲ್ವೆ ದೇಶದ ಮೊದಲ ಕೇಂದ್ರೀಕೃತ ಎಸಿ ಟರ್ಮಿನಲ್ ಅನ್ನು ನಿರ್ಮಿಸಲು 320 ಕೋಟಿ ರೂ ವ್ಯಯಿಸಿದೆ. ಆದರೆ ಕಳಪೆ ರಸ್ತೆ ಜಾಲವು ಅದರ ವಾಣಿಜ್ಯ ಕಾರ್ಯಾಚರಣೆಯನ್ನು ವಿಳಂಬಗೊಳಿಸುವ ಕಾರಣಗಳಲ್ಲಿ ಒಂದಾಗಿದೆ. ಈ ಟರ್ಮಿನಲ್‌ನಲ್ಲಿ ಪ್ರತಿದಿನ 28 ಜೋಡಿ ರೈಲುಗಳು ಕಾರ್ಯನಿರ್ವಹಿಸುತ್ತವೆ. ಇದರ ದೈನಂದಿನ ಪ್ರಯಾಣಿಕರ ಸಂಖ್ಯೆ 3,500 ರಿಂದ 25,000 ಕ್ಕೆ ಏರಿದೆ.
ನಗರದ ಟ್ರಾಫಿಕ್ ನಿರ್ವಹಣೆ, ಪರಿಸರ, ಘನತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸ್ಥಳಗಳ ಸಮರ್ಪಕ ಬಳಕೆ, ಸಾರ್ವಜನಿಕ ಆರೋಗ್ಯ, ಪ್ರಾಣಿಗಳ ಆರೋಗ್ಯ, ಜನಸ್ನೇಹಿ ಇ-ಆಡಳಿತ, ಜಲ ಭದ್ರತೆ ಮತ್ತು ಪ್ರವಾಹ ನಿರ್ವಹಣೆಗೆ ಸಿದ್ದರಾಮಯ್ಯ 8,409 ರೂ. ಮುಡಿಪಾಗಿಟ್ಟಿದ್ದಾರೆ.

'ಬ್ರ್ಯಾಂಡ್ ಬೆಂಗಳೂರು ಥೀಮ್ ಬೆಂಗಳೂರಿನ ನಿವಾಸಿಗಳ ಸುರಕ್ಷತೆ ಮತ್ತು ಅನುಕೂಲತೆಯ ಮೇಲೆ ಕೇಂದ್ರೀಕೃತವಾಗಿದೆ. ನಗರ ಎದುರಿಸುತ್ತಿರುವ ಒಂಬತ್ತು ಪ್ರಮುಖ ಸವಾಲುಗಳು ಸರ್ಕಾರದ ಮುಂದಿವೆ. ಈ ಸವಾಲುಗಳನ್ನು ಯೋಜಿತ ಮತ್ತು ವೈಜ್ಞಾನಿಕ ರೀತಿಯಲ್ಲಿ ಎದುರಿಸುವ ಮೂಲಕ ನಾವು ಬೆಂಗಳೂರನ್ನು ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸುತ್ತೇವೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications