Taffic Advisory: ಐಟಿ ಕೇಂದ್ರ ಸಂಪರ್ಕಿಸುವ ORR ರಸ್ತೆ ವಾಹನಗಳಿಗೆ ನಿರ್ಬಂಧ, ಬದಲಿ ಮಾರ್ಗಗಳು
ಬೆಂಗಳೂರು, ಸೆಪ್ಟಂಬರ್ 17: ಬೆಂಗಳೂರಿನ ಪ್ರಮುಖ ಐಟಿ ಕಂಪನಿಗಳನ್ನು ಹೊಂದಿರುವ ಮಹಾದೇವಪುರ, ಮಾರತ್ತಹಳ್ಳಿ ವ್ಯಾಪ್ತಿಯ ಮುಖ್ಯ ರಸ್ತೆಯನ್ನು ಬಳಸಿ ಸಾರ್ವಜನಿಕರು, ಉದ್ಯೋಗಿಗಳು ಸಂಚಾರ ಮಾಡುತ್ತಾರೆ. ಈ ವಾರಾಂತ್ಯಕ್ಕೆ ಈ ರಸ್ತೆಯಲ್ಲಿ ಸಂಚರಿಸುವವರಿಗೆ ಸಂಚಾರಿ ಪೊಲೀಸರು ಶಾಕ್ ನೀಡಿದ್ದಾರೆ. ಇಲ್ಲಿ ಸಂಚಾರವನ್ನು ಮಾರ್ಪಾಡು ಮಾಡಲಾಗಿದೆ ಎಂದು HAL ಏರ್‌ಪೋರ್ಟ್ ಸಂಚಾರ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.
HAL ಏರ್‌ಪೋರ್ಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಹೊರವರ್ತುಲ ರಸ್ತೆಯಲ್ಲಿನ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲಾಗುತ್ತಿದೆ. ಈ ಸಂಬಂಧ ವಾರಾಂತ್ಯದಲ್ಲಿ ಸೆಪ್ಟಂಬರ್ 19 ರಿಂದ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಪ್ರಾಯೋಗಿಕವಾಗಿ ಸಂಚಾರ ಮಾರ್ಪಾಡು ಮಾಡಿ ಪರ್ಯಾಯ ರಸ್ತೆಗಳನ್ನು ಪೊಲೀಸರು ನೀಡಿದ್ದಾರೆ.

ಯಾರೆಲ್ಲ ಎಚ್‌ಎಸ್‌ಆರ್ ಬಡಾವಣೆ, ಸಿಲ್ಕ್‌ಬೋರ್ಡ್, ಸರ್ಜಪುರ ರಸ್ತೆ ಹೀಗೆ ವಿವಿಧ ಭಾಗಗಳಿಂದ ಬಂದು ಮಾರತ್ತಹಳ್ಳಿ ಮಾರ್ಗವಾಗಿ ಸಾಗುವ ವಾಹನ ಸವಾರರಿಗೆ ORR ರಸ್ತೆಯನ್ನು ಸೆಪ್ಟಂಬರ್ 19ರಿಂದ ಸೆಪ್ಟಂಬರ್ 26ರವರೆಗೆ ನಿರ್ಬಂಧಿಸಲಾಗುತ್ತದೆ. ನಿರ್ಬಂಧಿಸಿದ ರಸ್ತೆಗಳು ಹಾಗೂ ಪರ್ಯಾಯ ಮಾರ್ಗಗಳನ್ನು ಗಮನಿಸಿ ಪ್ರಯಾಣಿಕರು ಸಂಚರಿಸುವಂತೆ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ವಾಹನ ಸಂಚಾರ ನಿರ್ಬಂಧಿಸಿದ ರಸ್ತೆಗಳು
ಇಲ್ಲಿನ ಲೇ ಅರೇಬಿಯಾ, ಬಿರಿಯಾನಿ ಜೋನ್ ಮತ್ತು ಕ್ರೋಮ್ ಜಂಕ್ಷನ್ ಬಳಿ ಹೊರವರ್ತುಲ ರಸ್ತೆಯಿಂದ ಮಾರತ್ತಹಳ್ಳಿ - ಕಾಡುಬೀಸನಹಳ್ಳಿ ಸರ್ವಿಸ್ ರಸ್ತೆ ಪ್ರವೇಶಿಸುವ/ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಸಂಚಾರಕ್ಕೆ ಪರ್ಯಾಯ ಮಾರ್ಗ ಇಲ್ಲಿವೆ
ಮಹದೇವಪುರ ಹೊರವರ್ತುಲ ರಸ್ತೆ ಕಡೆಯಿಂದ ಮಾರತ್ತಹಳ್ಳಿ -ಕಾಡುಬೀಸನಹಳ್ಳಿ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಕಲಾಮಂದಿರ ಬಳಿಯ ಸರ್ವಿಸ್ ರಸ್ತೆಯ ಮೂಲಕ ಚಲಿಸಬೇಕು. ಮಾರತ್ತಹಳ್ಳಿ ಯು "ಟರ್ನ್ ಪಡೆದು ಮಾರತ್ತಹಳ್ಳಿ ಸೇತುವೆ ಬಳಿ ಎಡ ತಿರುವು ಪಡೆದು ಸರ್ವಿಸ್ ರಸ್ತೆಯಲ್ಲಿ ಸಂಚರಿಸಿ ಮುನ್ನೆನಕೋಳಲ, ಕಾಡುಬೀಸನಹಳ್ಳಿ ಜಂಕ್ಷನ್, ಪಣತ್ತೂರು ಕರಿಯಮ್ಮನ ಅಗ್ರಹಾರ ಕಡೆಗೆ ಸಂಚರಿಸುವಂತೆ ಟ್ರಾಫಿಕ್ ಪೊಲೀಸರು ಸಲಹೆ ನೀಡಿದ್ದಾರೆ.
ಈಗಾಗಲೇ ಸರ್ಜಾಪುರ ರಸ್ತೆ, ತುಳಸಿ ಜಂಕ್ಷನ್, ದೊಡ್ಡಾನೆಕುಂದಿ ಬಳಿ ಸೇರಿದಂತೆ ವಿವಿಧ ಕಡೆಗಳಲ್ಲಿ ವಾಹನಗಳ ನಿಧಾನಗತಿ ಸಂಚಾರ ಇದೆ. ರಸ್ತೆ ಮಧ್ಯ ಕೆಟ್ಟು ನಿಲ್ಲುವ ವಾಹನಗಳು, ಮೆಟ್ರೋ ಕಾಮಗಾರಿ ಕಾರಣಗಳಿಂದ ಈ ಭಾಗದ ಜನರು ಆಗಾಗ ಕಿರಿಕಿರಿ ಅನುಭವಿಸುತ್ತಿದ್ದಾರೆ. ಇದೀಗ ಅವರಿಗೆಲ್ಲ ಮತ್ತಷ್ಟು ತೊಂದರೆ ಆಗಲಿದ್ದು, ಪರ್ಯಾಯ ಮಾರ್ಗಗಳಲ್ಲೂ ಹೆಚ್ಚಿನ ದಟ್ಟಣೆ ಕಂಡು ಬರುವ ನಿರೀಕ್ಷೆ ಇದೆ.












Click it and Unblock the Notifications